ಪೀಠಕ್ಕಾಗಿ ಪಿತೂರಿ: 16 ವಕೀಲರಿಗೆ ಪಂಜಾಬ್ ವಕೀಲರ ಪರಿಷತ್ ನೋಟಿಸ್; ಪ್ರತಿಕ್ರಿಯೆಗಾಗಿ ಸಿಂಘ್ವಿ, ರೋಹಟ್ಗಿಗೂ ಸೂಚನೆ

ನ್ಯಾಯಾಧೀಶರೊಬ್ಬರಿಗೆ ಸಂಬಂಧಿಸಿದ ಲಂಚ ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆ ಶೀಲ್ ನಾಗು ಈ ಪ್ರಕರಣದಲ್ಲಿ ವಕೀಲರು ಸೂಕ್ತ ಪೀಠದಿಂದ ತೀರ್ಪು ಪಡೆಯಲು ಹೊಂಚು ಹಾಕಿರುವ ಬಗ್ಗೆ ಸುಳಿವು ನೀಡಿದ್ದರು.
Bar Council of Punjab and Haryana
Bar Council of Punjab and Haryana
Published on

ಅನುಕೂಲಕರ ತೀರ್ಪುಗಳನ್ನು ಪಡೆಯುವ ಸಲುವಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ಪ್ರಕರಣ ಪಟ್ಟಿ ಮಾಡಿಸಲು ವಕೀಲರು ಮುಂದಾಗುವ ʼಪೀಠಕ್ಕಾಗಿ ಪಿತೂರಿ ʼ (ಬೆಂಚ್‌ ಹಂಟಿಂಗ್‌) ಪ್ರಕರಣ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯವಾದಿಗಳಾದ ಅಭಿಷೇಕ್‌ ಮನು ಸಿಂಘ್ವಿ ಮತ್ತು ಮುಕುಲ್‌ ರೋಹಟ್ಗಿ ಅವರೂ ಸೇರಿದಂತೆ  ಪಂಜಾಬ್ ಮತ್ತು ಹರಿಯಾಣ ವಕೀಲರ ಪರಿಷತ್‌ನ ಸವಲತ್ತು ಸಮಿತಿ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 16 ವಕೀಲರಿಗೆ ಈಗಾಗಲೇ ಅದು ನೋಟಿಸ್‌ ನೀಡಿದೆ. ಈ ಸಂಬಂಧ ʼಬಾರ್‌ ಅಂಡ್‌ ಬೆಂಚ್‌ʼಗೆ ಪ್ರತಿಕ್ರಿಯೆ ನೀಡಿದ ರೋಹಟ್ಗಿ “ಇದಕ್ಕೂ ನನಗೂ ಏನು ಸಂಬಂಧ? ಇದೆಲ್ಲಾ ಅಸಂಬದ್ಧ, ಅಂತಹ ನೋಟಿಸ್‌ ನನಗೆ ಬಂದಿಲ್ಲʼ ಎಂದರು. ಇದೇ ವೇಳೆ ತಾನು ಕೂಡ ಯಾವುದೇ ನೋಟಿಸ್‌ ಪಡೆದಿಲ್ಲ ಎಂದು ಸಿಂಘ್ವಿ ಹೇಳಿದರು.

Also Read
ಇ ಡಿ ವರ್ಸಸ್ ಮಾರುಕಟ್ಟೆ ನಿಗಮ ಪ್ರಕರಣ: ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವರ್ಗಾವಣೆ ಅರ್ಜಿ ಹಿಂಪಡೆದ ತಮಿಳುನಾಡು

“ನನಗೆ ನೋಟಿಸ್‌ ಬಂದಿಲ್ಲ. ಯಾರು ಅಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ತಿಳಿದಿಲ್ಲ. ಪ್ರಾಸಂಗಿಕವಾಗಿ ಹೇಳಬೇಕೆಂದರೆ, ಪೀಠಕ್ಕಾಗಿ ಪಿತೂರಿಯ ಆರೋಪಗಳು ಮುಗಿದ ನಂತರವೇ ನಾನು ಈ ಪ್ರಕರಣದಲ್ಲಿ ಮೊದಲ ಬಾರಿಗೆ ವಾದ ಮಂಡಿಸಿದೆ ಎಂಬ ಪ್ರಾಥಮಿಕ ಅಂಶವೂ ಅವರಿಗೆ (ಆರೋಪಿಸಿದವರಿಗೆ) ತಿಳಿದಿಲ್ಲ," ಎಂದು ಅವರು ವಿವರಿಸಿದರು.

ನ್ಯಾಯಮೂರ್ತಿಯವರೊಬ್ಬರಿಗೆ ಸಂಬಂಧಿಸಿದ ಲಂಚ ಪ್ರಕರಣ ಇದಾಗಿದೆ. ಪ್ರಕರಣ ರದ್ದತಿ ಕೋರಿ ಸಹ ಆರೋಪಿಯಾಗಿರುವ ಉದ್ಯಮಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ವಿವಿಧ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದರು.

ಉದ್ಯಮಿ ಪರವಾಗಿ ಬೇರೆ ಬೇರೆ ದಿನಗಳಂದು ಹಿರಿಯ ವಕೀಲ ಸಿಂಘ್ವಿ, ರೋಹಟ್ಗಿ,  ಪುನೀತ್ ಬಾಲಿ  ಹಾಗೂ  ರಾಕೇಶ್ ನೆಹ್ರಾ ಅವರು ಹಾಜರಾಗಿದ್ದರು. ಇತ್ತೀಚಿನ ವಿಚಾರಣೆಗಳಲ್ಲಿ, ಸಿಂಘ್ವಿ ಮತ್ತು ಬಾಲಿ ಮಾತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸುತ್ತಿದ್ದರು.

ಏಕಸದಸ್ಯ ಪೀಠದ ನ್ಯಾಯಮೂರ್ತಿ ಮಹಾಬೀರ್ ಸಿಂಗ್ ಸಿಂಧು ದೀರ್ಘಕಾಲ ಪ್ರಕರಣ ಆಲಿಸಿ ತೀರ್ಪು ಕಾಯ್ದಿರಿಸಿದ ಬಳಿಕ ಕೆಲ ದೂರುಗಳ ಹಿನ್ನೆಲೆಯಲ್ಲಿ ಅವರಿಂದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಅವರು ಮೇನಲ್ಲಿ ಪ್ರಕರಣ ಹಿಂಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು.

ನಂತರ ನ್ಯಾ. ನಾಗು ಅವರು ಪ್ರಕರಣವನ್ನು ಕೈಗೆತ್ತಿಕೊಂಡರಾದರೂ ಹೈಕೋರ್ಟ್‌ ಆಡಳಿತಾತ್ಮಕ ವಿಭಾಗದಿಂದ ತಾವು ನ್ಯಾ. ಸಿಂಧು ಅವರಿಂದ ಪ್ರಕರಣ ಹಿಂಪಡೆದ ಕಾರಣಕ್ಕೆ ಸ್ವತಃ ವಿಚಾರಣೆಯಿಂದ ಹಿಂದೆ ಸರಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ ತಿಂಗಳ ವಿಚಾರಣೆ ವೇಳೆ ʼಪೀಠಕ್ಕಾಗಿ ಪಿತೂರಿʼ ನಡೆದಿರುವ ಸುಳಿವನ್ನು ನ್ಯಾ. ನಾಗು ಅವರು ನೀಡಿದ್ದರು.

ಬಾಲಿ, ನೆಹ್ರಾ ಸೇರಿದಂತೆ 16 ವಕೀಲರು ಆಗಸ್ಟ್ 16 ರಂದು ತಮ್ಮ ನಿಲುವನ್ನು ವಿವರಿಸಲು ಖುದ್ದಾಗಿ ಅಥವಾ ಅವರ ಪರ ವಕೀಲರ ಮೂಲಕ ಹಾಜರಾಗುವಂತೆ ವಕೀಲರ ಪರಿಷತ್‌ ಸಮಿತಿ ಸೂಚಿಸಿರುವುದಾಗಿ ಮೂಲಗಳು ʼಬಾರ್ & ಬೆಂಚ್‌ʼಗೆ ತಿಳಿಸಿವೆ.

Also Read
ವಿವಿಗಳಿಗೆ ನೇಮಕಾತಿ ವಿವಾದ: ಮದ್ರಾಸ್‌ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂನಲ್ಲಿ ಪ್ರಶ್ನಿಸಿದ ತಮಿಳುನಾಡು

ಇದಲ್ಲದೆ, ಪ್ರಕರಣವನ್ನು ನ್ಯಾಯಯುತವಾಗಿ ಮತ್ತು ಸಮಗ್ರವಾಗಿ ನಿರ್ಣಯಿಸಲು ಸಿಂಘ್ವಿ ಮತ್ತು ರೋಹಟ್ಗಿ ಅವರಿಂದ ಪ್ರತಿಕ್ರಿಯೆ ಪಡೆಯುವುದು ಅಗತ್ಯ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಆದರೂ, ಈ ಹಿರಿಯ ವಕೀಲರು ಚಂಡೀಗಢದ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡಿರದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಸಮಿತಿ ನಿರ್ದಿಷ್ಟವಾಗಿ ಫೈಲಿಂಗ್ ಕೌನ್ಸಿಲ್ ಜೆ ಕೆ ಸಿಂಗ್ಲಾ ಅವರ ಪಾತ್ರವನ್ನು ಗುರುತಿಸಿದ್ದರೂ, "ಪರದೆಯ ಹಿಂದೆ ಕೆಲವು ದೊಡ್ಡ ಚತುರ ವಕೀಲರು" ಇರಬಹುದು ಎಂದು ತನ್ನ ನೋಟಿಸ್‌ನಲ್ಲಿ ಹೇಳಿದೆ.

Kannada Bar & Bench
kannada.barandbench.com