ಯಾವುದೇ ಹುದ್ದೆಗೆ ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೇರಿ ಜೋಸೆಫ್ ನೇಮಿಸದಂತೆ ರಾಜ್ಯಪಾಲರಿಗೆ ಪತ್ರ

ಇತ್ತೀಚೆಗೆ ನಿವೃತ್ತರಾದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಮೇರಿ ಅವರನ್ನು ಯಾವುದೇ ಹುದ್ದೆಗೆ ನೇಮಕ ಮಾಡಬಾರದು ಎಂದು ಕೇರಳ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಯಶವಂತ ಶೆಣೈ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
Kerala High Court and Justice Mary Joseph (now retired) Kerala High Court
Kerala High Court and Justice Mary Joseph (now retired) Kerala High Court Kerala High Court

ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೇರಿ ಜೋಸೆಫ್ ಅವರನ್ನು ಯಾವುದೇ ಹುದ್ದೆಗೆ ನೇಮಕ ಮಾಡದಂತೆ ಕೇರಳ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಯಶವಂತ್ ಶೆಣೈ ಅವರು ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ವೈಯಕ್ತಿಕವಾಗಿ ಪತ್ರ ಬರೆದಿರುವ ಶೆಣೈ ಅವರು ನ್ಯಾಯಮೂರ್ತಿ ಜೋಸೆಫ್ ಅವರ ವಿರುದ್ಧದ ಎಲ್ಲಾ ಆರೋಪಗಳ ಬಗ್ಗೆ ತನಿಖೆ ನಡೆಸುವವರೆಗೆ  ನಿವೃತ್ತಿಯ ನಂತರದ ನೇಮಕಾತಿಗೆ ಒಪ್ಪಿಗೆ ಸೂಚಿಸದಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Also Read
ನಿವೃತ್ತಿ ಬಳಿಕವೂ ನ್ಯಾ. ಮೇರಿ ತೀರ್ಪು ಬರೆಯುತ್ತಿದ್ದಾರೆ: ಕೇರಳ ಹೈಕೋರ್ಟ್ ಸಿಜೆಗೆ ವಕೀಲರ ಸಂಘದ ಅಧ್ಯಕ್ಷ ಪತ್ರ

ಜೂನ್ 2ರಂದು ನಿವೃತ್ತರಾಗಿರುವ ನ್ಯಾಯಮೂರ್ತಿ ಮೇರಿ ಜೋಸೆಫ್ ಅವರು ಆ ಬಳಿಕವೂ ತೀರ್ಪು ಬರೆಯುವುದನ್ನು ಮುಂದುವರೆಸಿದ್ದು ಹೈಕೋರ್ಟ್‌ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ ಎಂಬುದು ನ್ಯಾ. ಮೇರಿ ಅವರ ವಿರುದ್ಧ ಶೆಣೈ ಮಾಡಿರುವ ಆರೋಪವಾಗಿದೆ.

ನ್ಯಾ. ಮೇರಿ ಅವರು ನಿವೃತ್ತರಾದ ವಾರದೊಳಗೆ ಈ ಬಗ್ಗೆ ಕೇರಳ ಹೈಕೋರ್ಟ್‌ಗೆ ಶೆಣೈ ಅವರು ಕೇರಳ ಹೈಕೋರ್ಟ್‌ಗೆ ಪತ್ರ ಬರೆದ ಬಳಿಕ  ನ್ಯಾಯಮೂರ್ತಿಗಳ ನಿವೃತ್ತಿ, ವರ್ಗಾವಣೆ ಅಥವಾ ಪದೋನ್ನತಿ ಕುರಿತು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಮುಖ್ಯ ನ್ಯಾಯಮೂರ್ತಿ ಎ ಜೆ ದೇಸಾಯಿ ಹೊರಡಿಸಿದ್ದರು.

ಶೆಣೈ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ  ಚಂದ್ರಚೂಡ್ ಅವರಿಗೂ ಇದೇ ವಿಷಯ ಪ್ರಸ್ತಾಪಿಸಿ ಪತ್ರ ಬರೆದಿದ್ದರು. ಆದರೂ, ಮಾದಕವಸ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆಯಡಿ ವಿಚಾರಣಾ ನ್ಯಾಯಾಲಯಗಳಿಂದ ಶಿಕ್ಷೆಗೊಳಗಾದ ವಿವಿಧ ವ್ಯಕ್ತಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ನ್ಯಾ. ಮೇರಿ ಜೋಸೆಫ್‌ ತೀರ್ಪು ನೀಡಿದ್ದಾರೆ ಎಂದು ಅವರು ದೂರಿದ್ದರು.  

Also Read
ನ್ಯಾ. ಮೇರಿ ಜೋಸೆಫ್ ಅವರಿಗೆ ಕಡಿಮೆ ಪ್ರಕರಣ ಹಂಚಿಕೆ ಆರೋಪ: ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್

ನ್ಯಾಯಮೂರ್ತಿಗಳಿಗೂ ಮಾದಕ ದ್ರವ್ಯ ಮಾಫಿಯಾಕ್ಕೂ ನಂಟಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಲು ನಿರ್ದೇಶನ ನೀಡಬೇಕೆಂದೂ ಅವರು ಸಿಜೆಐ ಅವರನ್ನು ಕೋರಿದ್ದರು.

ನಿವೃತ್ತಿ ದಿನ ನ್ಯಾ. ಜೋಸೆಫ್‌ ಅವರು ತೀರ್ಪು ನೀಡಿದ್ದ ಚುನಾವಣಾ ಅರ್ಜಿ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದರು. ಇದು ಅಧಿಕಾರರೂಢ ಸರ್ಕಾರಕ್ಕೆ ಅನುಕೂಲಕರವಾಗುವ ರೀತಿಯಲ್ಲಿದೆ ಎಂದು ಅವರು ಆರೋಪಿಸಿದ್ದರು.

ರಾಜ್ಯಪಾಲರಿಗೆ ಸಲ್ಲಿಸಿರುವ ಪ್ರಸ್ತುತ ಪತ್ರದಲ್ಲಿ ಶೆಣೈ ಅವರು ಈ ವಿವಾದಗಳನ್ನು ಮತ್ತೆ ಪ್ರಸ್ತಾಪಿಸಿದ್ದು ಎಲ್ಲ ಆರೋಪಗಳಿಂದ ಮುಕ್ತರಾಗುವವರೆಗೆ ನ್ಯಾಯಮೂರ್ತಿ ಮೇರಿ ಅವರನ್ನು ಯಾವುದೇ ಹುದ್ದೆಗೆ ನೇಮಿಸಬಾರದು ಎಂದು ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com