ಸಂಪುಟ ರಚನೆ: ಕಾನೂನು ಖಾತೆ ಹೊಣೆ ಯಾರಿಗೆ? ಜಯಚಂದ್ರ, ರಾಯರೆಡ್ಡಿ, ಕೃಷ್ಣ, ಪ್ರಿಯಾಂಕ್‌, ಪೊನ್ನಣ್ಣ ಹೆಸರು ಚಾಲ್ತಿಗೆ

ಖಾತೆ ಹಂಚಿಕೆ ಮಾಡುವಾಗ ಅರ್ಹತೆ, ಸಾಮರ್ಥ್ಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಮುಂತಾದ ವಿಷಯಗಳು ಪ್ರಮುಖ ಪಾತ್ರವಹಿಸಲಿವೆ.
T B Jayachandra, Basavaraj Rayareddy, Krishna Byre Gowda, Priyank Kharge and A S Ponnanna
T B Jayachandra, Basavaraj Rayareddy, Krishna Byre Gowda, Priyank Kharge and A S Ponnanna

ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಚಂಡ ಬಹುತ ಗಳಿಸಿದ ಬಳಿಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್‌ ಆಯ್ಕೆಯಾದ ಬೆನ್ನಿಗೇ ಯಾರೆಲ್ಲಾ ಸಚಿವ ಸಂಪುಟ ಸೇರಲಿದ್ದಾರೆ ಎನ್ನುವ ತುರುಸಿನ ಲೆಕ್ಕಾಚಾರ ಇದೀಗ ಆರಂಭವಾಗಿದೆ.

ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿರುವ ವಿವಾದಿತ ಗೋಹತ್ಯೆ, ಮತಾಂತರ ನಿಷೇಧ ಕಾಯಿದೆ ಮುಂತಾದ ಶಾಸನಾತ್ಮಕ ವಿಚಾರಗಳೇ ಇರಲಿ, ಸರ್ಕಾರದ ನೀತಿ-ನಿರ್ಧಾರದ ಭಾಗವಾಗಿ ತೆಗೆದುಕೊಂಡಿರುವ ಹಲವು ಆಡಳಿತಾತ್ಮಕ ವಿಚಾರಗಳೇ ಆಗಲಿ ಅನೇಕ ಮಹತ್ವದ, ಸೂಕ್ಷ್ಮ ಸಂಗತಿಗಳನ್ನು ಸಮರ್ಥವಾಗಿ ನಿಭಾಯಿಸಬೇಕಾದ ಸವಾಲು ಕಾನೂನು ಖಾತೆಯನ್ನು ನಿರ್ವಹಿಸುವವರ ಹೊಣೆಗೇರಲಿದೆ. ಇದಲ್ಲದೆ, ಗಡಿ ವಿವಾದಗಳು, ಜಲ ವಿವಾದಗಳ ವಿಚಾರದಲ್ಲಿ ರಾಜ್ಯದ ನಿಲುವನ್ನು ಸಮರ್ಥವಾಗಿ ಕಾನೂನಾತ್ಮಕವಾಗಿ ಪ್ರತಿಪಾದಿಸುವುದನ್ನು ಖಾತರಿಪಡಿಸಬೇಕಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ಈ ಬಾರಿ ಮತ್ತಷ್ಟು ಮಹತ್ವ ಲಭ್ಯವಾಗಿದೆ.

ಹೀಗಾಗಿ, ಈ ಸಚಿವಾಲಯದ ಹೊಣೆಗಾರಿಕೆಯನ್ನು ಯಾರು ಹೊರಬಹುದು ಎನ್ನುವ ಚರ್ಚೆ ಕಾಂಗ್ರೆಸ್‌ ಪಡಸಾಲೆಯಲ್ಲಿ ಜೋರಾಗಿ ನಡೆದಿದೆ. ಇದೇ ರೀತಿ, ಯಾರು ಕಾನೂನು ಮತ್ತು ಸಂಸದೀಯ ಸಚಿವರಾದರೆ ಉತ್ತಮ ಎನ್ನುವ ಆಸಕ್ತಿಕರ ಚರ್ಚೆ ಕಾನೂನು ವಲಯದಲ್ಲಿಯೂ ಕೇಳಿ ಬರುತ್ತಿದೆ. ಈ ಚರ್ಚೆ, ಊಹೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರುಗಳೆಂದರೆ ಮಾಜಿ ಸಚಿವರಾದ ಟಿ ಬಿ ಜಯಚಂದ್ರ, ಬಸವರಾಜ ರಾಯರೆಡ್ಡಿ, ಕೃಷ್ಣ ಭೈರೇಗೌಡ, ಪ್ರಿಯಾಂಕ್‌ ಖರ್ಗೆ ಮತ್ತು ಎ ಎಸ್‌ ಪೊನ್ನಣ್ಣ ಅವರದ್ದು. ಖಾತೆ ಹಂಚಿಕೆ ಮಾಡುವಾಗ ಅರ್ಹತೆ, ಸಾಮರ್ಥ್ಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಈ ಎಲ್ಲ ಅಂಶಗಳೂ ಪ್ರಮುಖ ಪಾತ್ರವಹಿಸಲಿವೆ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ಮೇಲೆ ಉಲ್ಲೇಖಿಸಲಾದ ಹೆಸರುಗಳಲ್ಲದೆ ಇನ್ನೂ ಅನೇಕ ಸಮರ್ಥ ಅನುಭವಿಗಳು ಪಕ್ಷದಲ್ಲಿರುವುದನ್ನು ಯಾರೂ ಅಲ್ಲಗಳೆಯಲಾಗದು. ಹಾಗಾಗಿ, ಪಟ್ಟಿ ಇನ್ನೂ ಉದ್ದವಾಗುವುದರಲ್ಲಿ ಅನುಮಾನವಿಲ್ಲ.

ಮೇಲೆ ಕೇಳಿಬರುತ್ತಿರುವ ಹೆಸರುಗಳ ಪೈಕಿ ಒಂದೊಂದೇ ಹೆಸರುಗಳನ್ನು ನೋಡುವುದಾದರೆ, ಹಿರಿಯ ಶಾಸಕ ಟಿ ಬಿ ಜಯಚಂದ್ರ ಅವರ ಹೆಸರು ಚರ್ಚೆಯಲ್ಲಿದೆ. ಏಳನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿರುವ ಜಯಚಂದ್ರ ಅವರು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಪಶು ಸಂಗೋಪನೆ, ಸಣ್ಣ ನೀರಾವರಿ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮುನ್ನ ಕೃಷಿ ಸಚಿವರಾಗಿಯೂ ಅವರು ಕೆಲಸ ಮಾಡಿದ್ದಾರೆ. ಆಡಳಿತಾತ್ಮಕವಾಗಿ, ರಾಜಕೀಯವಾಗಿ ಸಾಕಷ್ಟು ಅನುಭವ ಜಯಚಂದ್ರ ಅವರ ಬೆನ್ನಿಗೆ ಇದೆ.

ಮತ್ತೊಬ್ಬ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರು ಆರು ಬಾರಿ ಯಲಬುರ್ಗಾ ಶಾಸಕರಾಗಿ, ಒಮ್ಮೆ ಲೋಕಸಭಾ ಸದಸ್ಯರಾಗಿ ಅಪಾರವಾದ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಉತ್ತಮ ಸದನ ಪಟುವಾದ ಅವರು ಸೂಕ್ಷ್ಮ ವಿಷಯಗಳನ್ನು ಗಹನವಾಗಿ ಅಭ್ಯಸಿಸಬಲ್ಲರು, ನಿಭಾಯಿಸಬಲ್ಲರು ಎನ್ನುವ ಅಭಿಪ್ರಾಯವಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅವರು ಉನ್ನತ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಶೈಕ್ಷಣಿಕ ದೃಷ್ಟಿಯಿಂದ ಗಮನಿಸಿದರೆ ಅವರು ಬಿ ಎ ಮತ್ತು ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ.

ಸತತ ಆರನೇ ಬಾರಿಗೆ ಶಾಸಕರಾಗಿ ಹಾಲಿ ಬ್ಯಾಟರಾಯನಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕೃಷ್ಣ ಭೈರೇಗೌಡ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಒಂದು ವರ್ಷ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮುನ್ನ ಸಿದ್ದರಾಮಯ್ಯ ಸರ್ಕಾರದಲ್ಲಿ ಐದು ವರ್ಷಗಳ ಕಾಲ ಕೃಷಿ ಸಚಿವರಾಗಿ ಗಮನಾರ್ಹ ಕೆಲಸ ಮಾಡಿದ್ದರು. ವಾಷಿಂಗ್ಟನ್‌ನಲ್ಲಿರುವ ಅಮೆರಿಕಾದ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಇಂಟರ್‌ನ್ಯಾಷನಲ್‌ ಸರ್ವೀಸಸ್‌ನಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಸೈದ್ಧಾಂತಿಕ ಸ್ಪಷ್ಟತೆ ಹೊಂದಿರುವ, ಪಕ್ಷದ ಒಲವು-ನಿಲುವುಗಳಿಗೆ ಹತ್ತಿರವಿರುವ ಹಾಗೂ ಸಮಕಾಲೀನ ವಿದ್ಯಮಾನಗಳೆಡೆಗೆ ಸ್ಪಂದನಶೀಲರಾಗಿರುವ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಪ್ರಿಯಾಂಕ್‌ ಖರ್ಗೆ ಅವರ ಹೆಸರು ಸಹ ಪಕ್ಷ ಹಾಗೂ ಕಾನೂನು ವಲಯಗಳಲ್ಲಿದೆ. ಸಾಮಾಜಿಕ ನ್ಯಾಯವನ್ನು ಸಮರ್ಥವಾಗಿ ಎತ್ತಿಹಿಡಿಯುವ ನಿಟ್ಟಿನಲ್ಲಿ ಮೂರನೇ ಬಾರಿಗೆ ಚಿತ್ತಾಪುರ ಶಾಸಕರಾಗಿ ಆಯ್ಕೆಯಾಗಿರುವ ಪ್ರಿಯಾಂಕ್‌ ಖರ್ಗೆ ಅವರಿಗೆ ಖಾತೆಯ ಹೊಣೆ ಹೊರಿಸುವುದು ಉತ್ತಮ ಸಂದೇಶವಾಗಬಹುದು ಎನ್ನುವ ಅಭಿಪ್ರಾಯವೂ ಇದೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ, ಆನಂತರ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ ಅನುಭವಿಯಾಗಿರುವ ಪ್ರಿಯಾಂಕ್‌ ಅವರು ಡಿಪ್ಲೊಮಾ ಇನ್‌ ಗ್ರಾಫಿಕ್ಸ್‌ ಶಿಕ್ಷಣ ಪಡೆದಿದ್ದಾರೆ.

Also Read
ಬದಲಾದ ಸರ್ಕಾರ: ಯಾರಾಗಲಿದ್ದಾರೆ ಅಡ್ವೊಕೇಟ್‌ ಜನರಲ್?

ಸಿದ್ದರಾಮಯ್ಯ ಸರ್ಕಾರ ಹಾಗೂ ಆನಂತರ ಕುಮಾರಸ್ವಾಮಿ ಸರ್ಕಾರದಲ್ಲಿ ಒಟ್ಟು ಆರು ಬಾರಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕೆಲಸ ಮಾಡಿರುವ ಹಿರಿಯ ವಕೀಲ, ಇತ್ತೀಚಿನವರೆಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಕಾನೂನು ಘಟಕದ ಅಧ್ಯಕ್ಷರಾಗಿದ್ದ, ಸದ್ಯ ವಿರಾಜಪೇಟೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎ ಎಸ್‌ ಪೊನ್ನಣ್ಣ ಅವರ ಹೆಸರು ವಿಶೇಷವಾಗಿ ಕಾನೂನು ವಲಯದಲ್ಲಿ ಧ್ವನಿಸುತ್ತಿದೆ.

ಪೊನ್ನಣ್ಣ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪೂರೈಸಿದ್ದಾರೆ. ಉತ್ತಮ ಕಾನೂನು ಅರಿವು, ಅಗಾಧ ಉತ್ಸಾಹವಿದೆ. ಅವರಿಗೆ ಕಾನೂನು ಖಾತೆಯ ಹೊಣೆ ಹೊರಿಸಿದರೆ ವಕೀಲ ಸಮುದಾಯಕ್ಕೆ, ಹೊಸ ಮುಖಕ್ಕೆ ಪ್ರಾತಿನಿಧ್ಯವೂ ಸಿಕ್ಕಲಿದೆ, ಪ್ರಾದೇಶಿಕ ಆಶೋತ್ತರಗಳಿಗೂ ದನಿ ಲಭಿಸಲಿದೆ ಎನ್ನುವ ಅಭಿಪ್ರಾಯಗಳಿವೆ. ಈಚೆಗೆ ಕೆಪಿಸಿಸಿಯ ಕಾನೂನು ಘಟಕವು ಅವರನ್ನು ಸಚಿವ ಹುದ್ದೆಗೆ ಪರಿಗಣಿಸಲು ಕೋರಿ ನಿರ್ಣಯ ಅಂಗೀಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com