ʼಇಂಡಿಯಾ: ದ ಮೋದಿ ಕ್ವಶ್ಚನ್ʼ ಹೆಸರಿನ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಕುರಿತು ದೆಹಲಿ ನ್ಯಾಯಾಲಯ ಬುಧವಾರ ಬಿಬಿಸಿಗೆ ಸಮನ್ಸ್ ನೀಡಿದೆ.
ವಿಕಿಪೀಡಿಯಾಕ್ಕೆ ನಿಧಿ ಒದಗಿಸುವ ವಿಕಿಮೀಡಿಯಾ ಮತ್ತು ಇಂಟರ್‌ನೆಟ್ ಆರ್ಕೈವ್ ಎಂಬ ಅಮೆರಿಕ ಮೂಲದ ಡಿಜಿಟಲ್ ಲೈಬ್ರೆರಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ (ADJ) ರುಚಿಕಾ ಸಿಂಗ್ಲಾ ಅವರು ಸಮನ್ಸ್ ಜಾರಿ ಮಾಡಿದರು. ಸಮನ್ಸ್ ನೀಡಿದ ದಿನದಿಂದ 30 ದಿನದೊಳಗೆ ಪ್ರತಿವಾದಿಗಳು ಲಿಖಿತ ಹೇಳಿಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಜಾರ್ಖಂಡ್ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಕ್ರಿಯ ಸ್ವಯಂಸೇವಕ ಎಂದು ಕರೆದುಕೊಂಡಿರುವ ಕುಮಾರ್ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸಾಕ್ಷ್ಯಚಿತ್ರದಲ್ಲಿ ಆರ್‌ಎಸ್‌ಎಸ್, ವಿಎಚ್‌ಪಿ ಹಾಗೂ ಬಿಜೆಪಿಯನ್ನು ಅವಮಾನಿಸಲಾಗಿದ್ದು ಭಯದ ವಾತಾವರಣ ಸೃಷ್ಟಿ ಮಾಡಲಾಗಿದೆ ಎಂದು ವಕೀಲ ಮುಖೇಶ್ ಶರ್ಮಾ ಅವರ ಮೂಲಕ ಸಲ್ಲಿಸಲಾದ ಮೊಕದ್ದಮೆಯಲ್ಲಿ ಹೇಳಲಾಗಿದೆ.
ಭಾರತ ಸರ್ಕಾರ ಸಾಕ್ಷ್ಯಚಿತ್ರ ನಿಷೇಧಿಸಿದ್ದರೂ, ವಿಕಿಪೀಡಿಯ ಪುಟ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಲಿಂಕ್‌ಗಳನ್ನು ಒದಗಿಸುತ್ತದೆ ಮತ್ತು ಸಾಕ್ಷ್ಯಚಿತ್ರದ ವಸ್ತುವಿಷಯ ಇಂಟರ್ನೆಟ್ ಆರ್ಕೈವ್‌ನಲ್ಲಿ ಇನ್ನೂ ಲಭ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಹೀಗಾಗಿ ಆರ್‌ಎಸ್‌ಎಸ್, ವಿಎಚ್‌ಪಿ ವಿರುದ್ಧ ಸಾಕ್ಷ್ಯಚಿತ್ರ ಅಥವಾ ಇನ್ನಾವುದೇ ವಿಚಾರಗಳನ್ನು ಪ್ರಕಟಿಸದಂತೆ ಬಿಬಿಸಿ, ವಿಕಿಮೀಡಿಯಾ ಹಾಗೂ ಇಂಟರ್‌ನೆಟ್ ಆರ್ಕೈವ್‌ಗಳನ್ನು ಪ್ರತಿಬಂಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಧೀಶೆ ಸಿಂಗ್ಲಾ ಅವರು ಮೇ 11ರಂದು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.