
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ರಾಜ್ಯ ಚುನಾವಣಾ ಆಯೋಗವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಅಂತಿಮ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮುರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪೀಠವು ಯಾವಾಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿತು.
ಇದಕ್ಕೆ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಮತದಾರರ ಅಂತಿಮ ಪಟ್ಟಿಯನ್ನು ಸೆಪ್ಟೆಂಬರ್ 22ಕ್ಕೆ ಪ್ರಕಟಿಸುವ ಸಾಧ್ಯತೆಯಿದೆ. ಅದಾದ ಬಳಿಕವಷ್ಟೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗುವುದು” ಎಂದು ವಿವರಿಸಿದರು.
ಈ ವೇಳೆ ಅರ್ಜಿದಾರರ ಪರ ವಕೀಲರು “ನಿಯಮಗಳಿಗೆ ಅನುಸಾರವಾಗಿ ವಾರ್ಡ್ ಮರು ವಿಂಗಡಣೆ ಮಾಡಿಲ್ಲ. ಆದ್ದರಿಂದ ವಾರ್ಡ್ ಮರು ವಿಂಗಡಣೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು” ಎಂದು ಮಧ್ಯಂತರ ಮನವಿ ಮಾಡಿದರು.
ಇದಕ್ಕೆ ಒಪ್ಪದ ಪೀಠವು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ ನಂತರವೇ ಚುನಾವಣಾ ವೇಳಾಪಟ್ಟಿ ಹೊರಡಿಸಲಾಗುವುದು ಎಂದು ಆಯೋಗ ತಿಳಿಸಿದೆ. ಹೀಗಾಗಿ, ಸೆಪ್ಟೆಂಬರ್ 22ರೊಳಗೆ ವಿಚಾರಣೆ ಪೂರ್ಣಗೊಳಿಸಲಾಗುವುದು. ಆದರೆ, ಇಂದು ಮಧ್ಯಂತರ ಆದೇಶದ ಬಗ್ಗೆ ನಿರ್ಧರಿಸುವುದಿಲ್ಲ ಎಂದು ತಿಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿತು.