ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ: ಮೂವರು ಆರೋಪಿಗಳ ಜಾಮೀನು ಮನವಿ ವಜಾ ಮಾಡಿದ ಸಿಟಿ ಸಿವಿಲ್‌ ನ್ಯಾಯಾಲಯ

ಕಳೆದ ಜೂನ್ 24 ರಂದು ಕದಿರೇಶ್‌ ಅವರ ಎರಡನೇ ಪತ್ನಿಯಾಗಿದ್ದ ರೇಖಾ ಅವರನ್ನು ಫ್ಲವರ್‌ ಗಾರ್ಡನ್‌ನಲ್ಲಿರುವ ಅವರ ಕಚೇರಿ ಬಳಿಯಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
BBMP ex Member Rekha Kadiresh
BBMP ex Member Rekha KadireshThe Bengaluru Live

“ಮಹಿಳೆಯರ ವಿರುದ್ಧದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ” ಎಂದಿರುವ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಛಲವಾದಿಪಾಳ್ಯ ವಾರ್ಡ್‌ನ ಬಿಜೆಪಿ ಮಾಜಿ‌ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಈಚೆಗೆ ಜಾಮೀನು ನಿರಾಕರಿಸಿದೆ.

ರೇಖಾ ಕದಿರೇಶ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಾಟನ್‌ ಪೇಟೆಯ ಅಂಜನಪ್ಪ ಗಾರ್ಡನ್‌ ನಿವಾಸಿಗಳಾದ ಸ್ಟೀಫನ್‌, ಪುರುಷೋತ್ತಮ್‌ ಮತ್ತು ಅಜಯ್‌ ಅವರು ಸಲ್ಲಿಸಿದ್ದ ಜಾಮೀನು ಮನವಿಯನ್ನು 71ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್‌ ಅವರು ವಜಾ ಮಾಡಿದ್ದಾರೆ.

ಇದು ಪಿತೂರಿ ಪ್ರಕರಣವಾಗಿದ್ದು, ಅರ್ಜಿದಾರರು ರೇಖಾ ಕದಿರೇಶ್‌ ಅವರನ್ನು ಕೊಲೆ ಮಾಡಲು ಪಿತೂರಿ ನಡೆಸಿದ್ದಾರೆ. ವಿಚಾರಣೆ ಮುಗಿಯುವವರೆಗೆ ಆರೋಪಿಗಳ ಮುಗ್ಧತೆ ರುಜುವಾತಾಗುವುದಿಲ್ಲ. ಆರೋಪಿಗಳಿಗೆ ಜಾಮೀನು ನೀಡಿದರೆ ಅವರು ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು ಅಥವಾ ನಾಪತ್ತೆಯಾಗಬಹುದು. ಇದರಿಂದ ವಿಚಾರಣೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಪ್ರಾಸಿಕ್ಯೂಷನ್‌ ತೀವ್ರವಾಗಿ ವಿರೋಧಿಸಿತ್ತು.

ಆರೋಪಿಗಳು 2021ರ ಜುಲೈ 5ರಿಂದ ನ್ಯಾಯಾಂಗ ಬಂಧನದಲ್ಲಿರುವುದೇ ಜಾಮೀನು ನೀಡಲು ಮಾನದಂಡವಾಗದು. ಅಲ್ಲದೇ, ಆರೋಪಿಗಳು ಜಾಮೀನು ಮಂಜೂರು ಮಾಡಲು ನೀಡಿರುವ ಕಾರಣಗಳು ಅರ್ಹವಾಗಿಲ್ಲ ಎಂದು ಪೀಠ ಹೇಳಿದೆ.

Also Read
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ: ಕದಿರೇಶ್‌ ಅಕ್ಕ ಮಾಲಾ, ಸೆಲ್ವರಾಜ್‌ ಜಾಮೀನು ಮನವಿ ತಿರಸ್ಕಾರ

ಕಳೆದ ಜೂನ್ 24 ರಂದು ಕದಿರೇಶ್‌ ಅವರ ಎರಡನೇ ಪತ್ನಿಯಾಗಿದ್ದ ರೇಖಾ ಅವರನ್ನು ಫ್ಲವರ್‌ ಗಾರ್ಡನ್‌ನಲ್ಲಿರುವ ಅವರ ಕಚೇರಿ ಬಳಿಯಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ದೂರು ದಾಖಲಿಸಿಕೊಂಡಿದ್ದ ಕಾಟನ್‌ ಪೇಟೆ ಪೊಲೀಸರು ಈ ಸಂಬಂಧ ಪೀಟರ್, ಸೂರ್ಯ, ಸ್ಟೀಫನ್, ಪುರುಷೋತ್ತಮ್, ಅಜಯ್, ಅರುಣ್ ಕುಮಾರ್, ಮಾಲಾ, ಸೆಲ್ವರಾಜ್ ಎಂಬುವರನ್ನು ಬಂಧಿಸಿದ್ದರು.

ಪ್ರಮುಖ ಆರೋಪಿಗಳಾದ ಮಾಲಾ ಹಾಗೂ ಸೆಲ್ವರಾಜ್ ಅವರು ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಹೈಕೋರ್ಟ್‌ನಲ್ಲಿ ಜಾಮೀನಿಗೆ ಮನವಿ ಮಾಡಿದ್ದರು. ಪ್ರಕರಣದ ತೀವ್ರತೆ ಪರಿಗಣಿಸಿ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿದ್ದನ್ನು ಇಲ್ಲಿ ನೆನೆಯಬಹುದು.

Attachment
PDF
Stefan and others Versus State of Karnataka.pdf
Preview

Related Stories

No stories found.
Kannada Bar & Bench
kannada.barandbench.com