ಗಾಡ್ ಫಾದರ್ ಇಲ್ಲದ ವಕೀಲರಿಗೆ ಅವಕಾಶ ನೀಡುವಂತೆ ಸಿಜೆಐ ಗವಾಯಿ ಅವರಿಗೆ ಬಿಸಿಐ ಅಧ್ಯಕ್ಷ ಮನವಿ

ನ್ಯಾ. ಗವಾಯಿ ಅವರು ಎಂದೆಂದಿಗೂ ದೇಶದ ಆಸ್ತಿಯಾಗಿದ್ದು ನಿವೃತ್ತಿ ಬಳಿಕ ಹುದ್ದೆಗಳನ್ನು ಸ್ವೀಕರಿಸಲು ಅವರು ಹಿಂಜರಿಯಬಾರದು ಎಂದು ಮಿಶ್ರಾ ಹೇಳಿದರು.
Manan Kumar Misra
Manan Kumar Misra
Published on

ಕಾನೂನು ವೃತ್ತಿಯಲ್ಲಿ ಗಾಡ್ ಫಾದರ್ ಇಲ್ಲದ ವಕೀಲರಿಗೆ ಹಿರಿಯ ವಕೀಲರು ಮತ್ತು ನ್ಯಾಯಾಧೀಶರಾಗಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರ ಅಧಿಕಾರಾವಧಿಯಲ್ಲಿ ಅವಕಾಶ ದೊರೆಯಬೇಕು ಎಂದು ಭಾರತೀಯ ವಕೀಲರ ಪರಿಷತ್ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದರು.

ದೇಶದ 52ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನ್ಯಾ. ಗವಾಯಿ ಅವರ ಗೌರವಾರ್ಥ ನವದೆಹಲಿಯಲ್ಲಿ ಬಿಸಿಐ ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಿಶ್ರಾ ಮಾತನಾಡಿದರು.

Also Read
ಸಿಜೆಐ ಬಿ ಆರ್ ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂನ ಸದಸ್ಯರು ಇವರು

"ಸಾಮಾನ್ಯ ವಕೀಲರು ನಿಮ್ಮಿಂದ ಅಪಾರ ಭರವಸೆ ಮತ್ತು ನಿರೀಕ್ಷೆ ಹೊಂದಿದ್ದಾರೆ. ನೀವು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಅವಧಿಯಲ್ಲಿ, ಗಾಡ್‌ಫಾದರ್ ಇಲ್ಲದ, ನ್ಯಾಯಾಧೀಶರ ಕುಟುಂಬದವರಲ್ಲದ ಆದರೆ ಅರ್ಹರಾಗಿರುವವರು ನ್ಯಾಯಾಧೀಶರು ಮತ್ತು ಹಿರಿಯ ವಕೀಲರಾಗಲು ಅವಕಾಶವನ್ನು ಅವರು ಪಡೆಯಬಹುದು. ಎಲ್ಲಾ ಜಾತಿ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ಅರ್ಹತೆ ಮತ್ತು ಪ್ರಾತಿನಿಧ್ಯ ದೊರೆಯುವಂತಾಗಬೇಕು" ಎಂದು ಅವರು ಹೇಳಿದರು.

ಬೌದ್ಧ ಸಮುದಾಯದಿಂದ ಬಂದ ಮೊದಲ ಸಿಜೆಐ ಮತ್ತು ಪರಿಶಿಷ್ಟ ಜಾತಿ ಸಮುದಾಯದಿಂದ ಬಂದ ಎರಡನೇ ಸಿಜೆಐ ಆಗಿರುವುದರಿಂದ ನ್ಯಾಯಮೂರ್ತಿ ಗವಾಯಿ ಅವರ ನೇಮಕಾತಿ ಐತಿಹಾಸಿಕ ಮಹತ್ವದ್ದಾಗಿದೆ ಎಂದು ಮಿಶ್ರಾ ಬಣ್ಣಿಸಿದರು.

ನ್ಯಾ. ಗವಾಯಿ ಅವರು ಸದಾ ದೇಶದ ಆಸ್ತಿಯಾಗಿದ್ದು ನಿವೃತ್ತಿ ಬಳಿಕ ಹುದ್ದೆಗಳನ್ನು ಸ್ವೀಕರಿಸಲು ಹಿಂಜರಿಯಬಾರದು ಎಂದು ಅವರು ಇದೇ ವೇಳೆ ತಿಳಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ 81,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿರುವುದು ಮತ್ತು ಹೈಕೋರ್ಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ನ್ಯಾಯಾಂಗ ಹುದ್ದೆಗಳು ಖಾಲಿ ಇರುವುದು ನೂತನ ಸಿಜೆಐ ಅವರಿಗೆ ದೊಡ್ಡ ಸವಾಲು ಎಂದು ಮಿಶ್ರಾ ಹೇಳಿದರು.

ಭಾರತದಲ್ಲಿ ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳ ಪ್ರವೇಶಕ್ಕೆ ಅವಕಾಶ ನೀಡುವ ಬಿಸಿಐನ ಇತ್ತೀಚಿನ ಕ್ರಮದ ಕುರಿತು ಪ್ರತಿಕ್ರಿಯಿಸಿದ ಮಿಶ್ರಾ, "ನಮ್ಮದೇ ಆದ ವಕೀಲರ ಹಿತಾಸಕ್ತಿಯೊಂದಿಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವಕೀಲರು ಪ್ರಾಕ್ಟೀಸ್ ಮಾಡುವ ದೇಶಗಳ ವಕೀಲರಿಗೆ ಮಾತ್ರ ಅವಕಾಶ ನೀಡಲಾಗುವುದು. ಪರಸ್ಪರ ಸಂಬಂಧವೇ ಏಕೈಕ ಆಧಾರ" ಎಂದರು.

Also Read
ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ ಆರ್ ಗವಾಯಿ ಪ್ರಮಾಣ ವಚನ ಸ್ವೀಕಾರ

ಕೆಲ ದಿನಗಳ ಹಿಂದೆ ನಿವೃತ್ತರಾದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರಿಗೆ ಸುಪ್ರೀಂ ಕೋರ್ಟ್ ವಕೀಲರ ಸಂಘಗಳು ಬೀಳ್ಕೊಡುಗೆ ನೀಡದೆ ಇದ್ದುದನ್ನು ಪ್ರಸ್ತಾಪಿಸಿದ ಮಿಶ್ರಾ ಅವರು, ಸಿಜೆಐ ಗವಾಯಿ ಅವರು ಈ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು ಸರಿಯಾಗಿಯೇ ಇದೆ ಎಂದು ಹೇಳಿದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಧ್ಯಸ್ಥಿಕೆ ಸಮ್ಮೇಳನದಿಂದ "ಸಾಮಾನ್ಯ ವಕೀಲರನ್ನು" ಹೊರಗಿಡಲಾಗಿದೆ ಎಂಬ ಆರೋಪವನ್ನು ಮಿಶ್ರಾ ಅಲ್ಲಗಳೆದರು. ಸಾಮಾನ್ಯ ವಕೀಲರನ್ನು ಒಳಗೊಳ್ಳದೆಯೇ ಸಮ್ಮೇಳನ ಯಶಸ್ವಿಯಾಗಿದೆ ಎಂದು ಭಾವಿಸುವುದು ತಪ್ಪು ಎಂದರು.

Kannada Bar & Bench
kannada.barandbench.com