ಕಾನೂನು ಲೋಕದ ಐವರು ದಿಗ್ಗಜರಿಗೆ ಬಿಸಿಐನ ಚೊಚ್ಚಲ 'ವಿಧಿ ರತ್ನʼ ಪ್ರಶಸ್ತಿ ಪ್ರದಾನ

ಹಿರಿಯ ವಕೀಲರಾದ ಕೆ ಪರಾಸರನ್, ಫಾಲಿ ಎಸ್ ನಾರಿಮನ್, ಕೆ ಕೆ ವೇಣುಗೋಪಾಲ್, ರಾಮ್ ಜೇಠ್ಮಲಾನಿ ಹಾಗೂ ಸೋಲಿ ಜೆ ಸೊರಾಬ್ಜಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
K Parasaran, Fali S Nariman, KK Venugopal, Ram Jethmalani and Soli J Sorabjee
K Parasaran, Fali S Nariman, KK Venugopal, Ram Jethmalani and Soli J Sorabjee

ಕಾನೂನು ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ವಕೀಲ ಲೋಕದ ಐವರು ದಿಗ್ಗಜರಿಗೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಚೊಚ್ಚಲ 'ವಿಧಿ ರತ್ನ ಪ್ರಶಸ್ತಿʼ ನೀಡಿ ಗೌರವಿಸಿತು.

ಭಾರತೀಯ ವಕೀಲರ ಪರಿಷತ್‌ ವತಿಯಿಂದ ನವದೆಹಲಿಯಲ್ಲಿ ಭಾನುವಾರ ನಡೆದ ಅಂತರರಾಷ್ಟ್ರೀಯ ವಕೀಲರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ವಕೀಲರಾದ ಕೆ ಪರಾಸರನ್, ಫಾಲಿ ಎಸ್ ನಾರಿಮನ್, ಕೆ ಕೆ ವೇಣುಗೋಪಾಲ್, ರಾಮ್‌ ಜೇಠ್ಮಲಾನಿ ಹಾಗೂ ಸೋಲಿ ಜೆ ಸೊರಾಬ್ಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೇಠ್ಮಲಾನಿ ಮತ್ತು ಸೊರಾಬ್ಜಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶಸ್ತಿ ಪ್ರಧಾನ ಮಾಡಿದರು. ಬಿಸಿಐ ಅಧ್ಯಕ್ಷ, ಹಿರಿಯ ವಕೀಲ ಮನನ್ ಮಿಶ್ರಾ ಅವರು ಪ್ರಶಸ್ತಿಯನ್ನು ಪ್ರತಿ ವರ್ಷ ಕಾನೂನು ಲೋಕದ ಐವರು ಗಣ್ಯರಿಗೆ ನೀಡಲಾಗುವುದು ಎಂದು ಘೋಷಿಸಿದರು.

Also Read
ನ್ಯಾಯಾಧೀಶರು ಸೆಲೆಬ್ರಿಟಿಗಳಲ್ಲ; ನಮ್ಮೆಲ್ಲಾ ಚಲನವಲನಗಳನ್ನು ಆನ್‌ಲೈನ್ ವೇದಿಕೆಗಳು ವರದಿ ಮಾಡಬೇಕಿಲ್ಲ: ನ್ಯಾ. ಕರೋಲ್

ಕೆ ಪರಾಸರನ್‌ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಅಧಿಕಾರಾವಧಿಯಲ್ಲಿ ಭಾರತದ ಸಾಲಿಸಿಟರ್‌ ಜನರಲ್‌ (ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ) ಆಗಿ ಸೇವೆ ಸಲ್ಲಿಸಿದ್ದರು. ರಾಜೀವ್‌ ಗಾಂಧಿಯವರ ಅಧಿಕಾರಾವಧಿ ಅಂತ್ಯದವರೆಗೆ ಅವರು ಭಾರತದ ಅಟಾರ್ನಿ ಜನರಲ್‌ (ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ) ಹುದ್ದೆ ಅಲಂಕರಿಸಿದ್ದರು.

ಸಾಂವಿಧಾನಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತಿ ಪ್ರತಿಷ್ಠಿತ ವಕೀಲರಲ್ಲಿ ಒಬ್ಬರಾದ ಫಾಲಿ ಎಸ್‌ ನಾರಿಮನ್‌ ಅವರು ಅನೇಕ ಪ್ರಮುಖ ಪ್ರಕರಣಗಳಲ್ಲಿ ವಾದಿಸಿದವರು. ಅವರು ಮೇ 1972ರಿಂದ ಜೂನ್ 1975ರವರೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು.

ಕೆ ಕೆ ವೇಣುಗೋಪಾಲ್‌ ಅವರು 2017ರಿಂದ 2022ರವರೆಗೆ ಭಾರತದ ಅಟಾರ್ನಿ ಜನರಲ್‌ ಆಗಿದ್ದರು. ಅಲ್ಲದೆ, ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್‌) ಪ್ರತಿಷ್ಠಿತ ಪ್ರಾದೇಶಿಕ ಸಂಸ್ಥೆಯಾದ ಸಾರ್ಕ್‌ಲಾನ ಪೋಷಕರು. ಈ ಹಿಂದೆ ಅವರು ಅದರ ಅಧ್ಯಕ್ಷರಾಗಿದ್ದರು. ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಉನ್ನತ ಕಾನೂನು ಅಧ್ಯಯನಕ್ಕಾಗಿ ಇರುವ ಎಂ ಕೆ ನಂಬ್ಯಾರ್‌ ಸಾರ್ಕ್‌ಲಾ ಕೇಂದ್ರದ ಸಂಸ್ಥಾಪಕರಾಗಿದ್ದಾರೆ.

Also Read
ದೇಶಕ್ಕೆ ಬಲಿಷ್ಠ, ಸ್ವತಂತ್ರ ನ್ಯಾಯಾಂಗದ ಅಗತ್ಯವಿದೆ: ಪ್ರಧಾನಿ ನರೇಂದ್ರ ಮೋದಿ

ವಕೀಲರಷ್ಟೇ ಅಲ್ಲದೆ ರಾಜಕಾರಣಿಯೂ ಆಗಿದ್ದವರು ರಾಮ್‌ ಜೇಠ್ಮಲಾನಿ. ವೃತ್ತಿಜೀವನದ ಮಹತ್ವದ ಮಜಲುಗಳನ್ನು ದಾಟಿದ ಅವರು ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿ, ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರಾಗಿಯೂ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ.

ಸೋಲಿ ಜೆ ಸೊರಾಬ್ಜಿಯವರು 1971 ರಲ್ಲಿ ಬಾಂಬೆ ಹೈಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು. ಮುಂದೆ ಸೋಲಿ ಸೊರಾಬ್ಜಿ  ಸಾಲಿಸಿಟರ್‌ ಜನರಲ್‌ ಹುದ್ದೆಗೇರಿದರು. ತದನಂತರ ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಹುದ್ದೆಯಾದ ಅಟಾರ್ನಿ ಜನರಲ್‌ ಹುದ್ದೆಯಲ್ಲಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com