ಈದ್ಗಾ ವಿವಾದ: ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿರುವ ಮೇಲ್ಮನವಿ ವಿಚಾರಣೆಯನ್ನು ಮಂಗಳವಾರ ನಡೆಸಲಿರುವ ಸುಪ್ರೀಂ

ಅರ್ಜಿಯನ್ನು ನಾಳೆ ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾ ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಸೂಚಿಸಿತು.
ಈದ್ಗಾ ವಿವಾದ: ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿರುವ ಮೇಲ್ಮನವಿ ವಿಚಾರಣೆಯನ್ನು ಮಂಗಳವಾರ ನಡೆಸಲಿರುವ ಸುಪ್ರೀಂ
A1
Published on

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಕೋರಿದ್ದ ಅರ್ಜಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ನಾಳೆ) ವಿಚಾರಣೆ ನಡೆಸಲಿದೆ.

ಒಂದು ವೇಳೆ ನಾಳೆ ಮೇಲ್ಮನವಿ ವಿಚಾರಣೆ ನಡೆಯದಿದ್ದರೆ ಅನಗತ್ಯ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.

Also Read
ಈದ್ಗಾ ಮೈದಾನದಲ್ಲಿ ಆ. 31ರಿಂದ ಸೀಮಿತ ಅವಧಿಗೆ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅನುಮತಿಸಿದ ಹೈಕೋರ್ಟ್‌

ಅರ್ಜಿಯಲ್ಲಿನ ದೋಷ ಸರಿಪಡಿಕೆಯ ನಂತರ ನಾಳೆ (ಆ.30, 2022) ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಮತ್ತು ನ್ಯಾ ಎಸ್‌ ರವೀಂದ್ರ ಭಟ್‌ ಅವರಿದ್ದ ಪೀಠ ಸೂಚಿಸಿತು.

ಹೈಕೋರ್ಟ್‌ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ, ಈದ್ಗಾ ಮೈದಾನವನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಮಾತ್ರ ಸಾರ್ವಜನಿಕ ಆಟದ ಮೈದಾನವಾಗಿ ಬಳಸಬೇಕು. ರಂಜಾನ್ ಹಾಗೂ ಬಕ್ರೀದ್ ಹಬ್ಬಗಳಂದು ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಲು ಉಪಯೋಗಿಸಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು.

Also Read
[ಈದ್ಗಾ ಮೈದಾನ ವಿವಾದ] ಯಥಾಸ್ಥಿತಿ ಕಾಪಾಡಿ; ರಮ್ಜಾನ್ ಮತ್ತು ಬಕ್ರೀದ್‌ನಲ್ಲಿ ಮಾತ್ರ ಪಾರ್ಥನೆಗೆ ಅವಕಾಶ: ಹೈಕೋರ್ಟ್‌

ಈ ಆದೇಶವನ್ನು ರಾಜ್ಯ ಸರ್ಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು. ಏಕಸದಸ್ಯ ಪೀಠದ ಆದೇಶ ಮಾರ್ಪಡಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಜಮೀನಿನ ವ್ಯಾಜ್ಯ ಬಾಕಿ ಇರುವಾಗಲೇ ಎಲ್ಲಾ ಬಗೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಲು ಕೋರಿರುವ ಅರ್ಜಿಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ತಿಳಿಸಿತು.

ಭಾರತೀಯ ಸಮಾಜ ಧಾರ್ಮಿಕ, ಭಾಷಿಕ, ಸ್ಥಳೀಯ ವೈವಿಧ್ಯತೆ ಹೊಂದಿದೆ. ವಿವಿಧ ಸಮುದಾಯಗಳ ನಡುವೆ ಸೋದರತೆಯನ್ನು ನಮ್ಮ ಸಮಾಜ ಪ್ರತಿಪಾದಿಸುತ್ತದೆ. ಧಾರ್ಮಿಕ ಸಹಿಷ್ಣುತೆಯ ತತ್ವ ಭಾರತೀಯ ನಾಗರಿಕತೆಯ ವೈಶಿಷ್ಟ್ಯವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

Also Read
ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿವಾದ: ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಜಮೀನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಹೆಸರಿಗೆ ಭೂಮಿಯ ದಾಖಲೆ ನೀಡಲು ನಿರಾಕರಿಸಿದ ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್‌ ಮಂಡಳಿ ಮೂಲ ಅರ್ಜಿ ಸಲ್ಲಿಸಿತ್ತು.

ಭೂಮಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸಿ ಮೈಸೂರು ರಾಜ್ಯ ವಕ್ಫ್ ಮಂಡಳಿ 1965ರಲ್ಲಿ ಹೊರಡಿಸಿದ್ದ ಅಧಿಸೂಚನೆಯ ಆಧಾರದಲ್ಲಿ ಆಸ್ತಿ ಮಂಡಳಿಗೆ ಸೇರಿದೆ ಎಂದು ಅರ್ಜಿದಾರರು ವಾದಿಸಿದ್ದರು. ವಕ್ಫ್ ನ್ಯಾಯಮಂಡಳಿಯು ಈ ಅಧಿಸೂಚನೆಯನ್ನು ಬದಿಗೆ ಸರಿಸುವವರೆಗೂ ಅಧಿಸೂಚನೆಗೆ ಸರ್ಕಾರವು ಬದ್ಧವಾಗಿರಬೇಕಾಗುತ್ತದೆ ಎಂದು ವಾದಿಸಿತ್ತು. ಆದರೆ ರಾಜ್ಯ ಸರ್ಕಾರ ʼಅಧಿಸೂಚನೆ ಯಾರನ್ನೂ ಬದ್ಧವಾಗಿಸುವುದಿಲ್ಲ. ಭೂಮಿಯು ಯಾವುದೇ ವ್ಯಕ್ತಿಗೆ ಸೇರಿರದ ಕಾರಣ ಅದು ಸರ್ಕಾರಕ್ಕೆ ಸೇರಿದ್ದು ಎಂದು ವಾದಿಸಿತ್ತು.

Kannada Bar & Bench
kannada.barandbench.com