ನಾನು ಯಾವುದೇ ಆಸ್ಪತ್ರೆಗೆ ದಾಖಲಾಗಲು ಇಚ್ಛಿಸುವುದಿಲ್ಲ ಎಂದಿರುವ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಎಂಬತ್ನಾಲ್ಕು ವರ್ಷದ ಪಾದ್ರಿ ಸ್ಟ್ಯಾನ್ ಸ್ವಾಮಿ ತಮ್ಮನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಯಾವುದೇ ಆಸ್ಪತ್ರೆಗೆ ಸೇರಲು ನಾನು ಬಯಸುವುದಿಲ್ಲ, ಬದಲಿಗೆ ಜೈಲಿನಲ್ಲೇ ಸಾಯುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಸ್ವಾಮಿ ಅವರನ್ನು ಹಾಜರುಪಡಿಸುವಂತೆ ನ್ಯಾಯಾಲಯ ತಲೋಜ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಬುಧವಾರ ಸೂಚಿಸಿತ್ತು. ಸ್ವಾಮಿ ಅವರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾದಾಗ, ನ್ಯಾಯಮೂರ್ತಿಗಳಾದ ಎಸ್ ಜೆ ಕಥಾವಲ್ಲಾ ಮತ್ತು ಎಸ್.ಪಿ.ತಾವಡೆ ಅವರಿದ್ದ ಪೀಠ ಜೈಲಿನಲ್ಲಿ ಸ್ವಾಮಿ ಅವರ ಆರೋಗ್ಯ ಮತ್ತು ಬದುಕಿನ ಸ್ಥಿತಿ ಬಗ್ಗೆ ವಿಚಾರಿಸಿದರು. ಆರೋಗ್ಯ ಸುಧಾರಿಸುವವರೆಗೆ ಕೆಲ ದಿನಗಳ ಕಾಲ ಜೆ ಜೆ ಆಸ್ಪತ್ರೆಗೆ ದಾಖಲಾಗಲು ಸಿದ್ಧರಿದ್ದೀರಾ ಎಂದು ಕಥಾವಲ್ಲಾ ಪ್ರಶ್ನಿಸಿದರು. ಆಗ ಸ್ವಾಮಿ ಅವರು ಆಸ್ಪತ್ರೆಗೆ ಎರಡು ಬಾರಿ ದಾಖಲಾಗಿದ್ದ ಮಾಹಿತಿ ನೀಡಿದರು. “ನಾನು ಜೆ ಜೆ ಆಸ್ಪತ್ರೆಗೆ ದಾಖಲಾಗುವುದಿಲ್ಲ. ಅದರಿಂದ ಆರೋಗ್ಯ ಸುಧಾರಿಸದೆ ಪರಿಸ್ಥಿತಿ ಹೀಗೆಯೇ ಇರುತ್ತದೆ. ಈಗ ಇರುವಂತೆಯೇ ಇದ್ದರೆ ಇನ್ನು ಕೆಲ ದಿನಗಳಲ್ಲಿ ನಾನು ಸಾಯುತ್ತೇನೆ” ಎಂದು ಸ್ವಾಮಿ ಹೇಳಿದರು.
ಆಸ್ಪತ್ರೆಯ ಸ್ಥಿತಿಗತಿಯಿಂದಾಗಿ ಸ್ವಾಮಿ ಅವರು ಅಲ್ಲಿಗೆ ದಾಖಲಾಗಲು ಬಯಸದೇ ಇರಬಹುದು ಎಂದು ಸ್ವಾಮಿ ಅವರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮಿಹಿರ್ ದೇಸಾಯಿ ತಿಳಿಸಿದರು. ಬೇರೆ ಆಸ್ಪತ್ರೆಗೆ ದಾಖಲಾಗಲು ಬಯಸುತ್ತೀರಾ ಎಂದು ಪೀಠ ಕೇಳಿದಾಗಲೂ ಸ್ವಾಮಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
“ಎಂಟು ತಿಂಗಳ ಹಿಂದೆ ಜೈಲಿಗೆ ಕರೆತಂದಾಗ ಕ್ರಿಯಾಶೀಲವಾಗಿದ್ದೆ. ಆದರೆ ಅಂದಿನಿಂದ ನನ್ನ ಆರೋಗ್ಯ ಸ್ಥಿತಿ ಹದಗೆಡುತ್ತಾ ಬಂತು. ಜೆಜೆ ಆಸ್ಪತ್ರೆಯಲ್ಲಿ ಸಾಕಷ್ಟು ಮಂದಿ ಇದ್ದರು. ಆದರೆ ನನಗೆ ಏನು ಅಗತ್ಯವಿದೆ ಎಂದು ವಿವರಿಸಲು ನನಗೆ ಯಾವುದೇ ಅವಕಾಶ ಇರಲಿಲ್ಲ. ಜೈಲಿನ ಅಧಿಕಾರಿಗಳು ನನಗೆ ಕೆಲ ಔಷಧಗಳನ್ನು ನೀಡಿದರು. ಆದರೆ ನನ್ನ ಆರೋಗ್ಯದ ಕುಸಿತವನ್ನು ಅವರ ಮಾತ್ರೆಗಳು ತಡೆಯದಾದವು," ಎಂದು ಸ್ವಾಮಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಜೈಲಿನ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಿದ ವೈದ್ಯರು ಕೂಡ ಇಲ್ಲ ಎಂದು ವಕೀಲ ಮಿಹಿರ್ ದೇಸಾಯಿ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ ವಿಚಾರಣೆಯ ನಡುವೆ ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ಸ್ವಾಮಿ ಅವರ ಮನವೊಲಿಸಲು ಯತ್ನಿಸಿದರು. ಆದರೆ ಆರೋಗ್ಯ ಕ್ಷೀಣಿಸುತ್ತಿದ್ದು ಕೂಡಲೇ ಮಧ್ಯಂತರ ಜಾಮೀನು ನೀಡುವಂತೆ ಸ್ವಾಮಿ ಮನವಿ ಮಾಡಿದರು.
ಮಧ್ಯಂತರ ಜಾಮೀನಿನ ವಿಚಾರಣೆ ಮುಂದುವರೆಸುವ ಕುರಿತಂತೆ ನಿರ್ಧರಿಸುವ ಮೊದಲು ಸ್ವಾಮಿ ಅವರೊಂದಿಗೆ ಸಮಾಲೋಚಿಸಲು ಸ್ವಲ್ಪ ಸಮಯ ನೀಡುವಂತೆ ದೇಸಾಯಿ ನ್ಯಾಯಾಲಯವನ್ನು ಕೋರಿದರು. “ಅವರು ಪಾದ್ರಿಯಾಗಿದ್ದು ʼಉಳಿದವರನ್ನು ಕ್ಷಮಿಸು, ನನ್ನನ್ನು ಶಿಕ್ಷಿಸುʼ ಎಂಬ ಧೋರಣೆ ಅಳವಡಿಸಿಕೊಂಡಿರಬಹುದು. ಹೀಗಾಗಿ ಸ್ವಾಮಿ ಒಪ್ಪಿದರೆ ನಾನು ಮುಂದುವರೆಯಲು ಸ್ವಾತಂತ್ರ್ಯ ನೀಡಿ” ಎಂದರು.
ಆದರೆ ನ್ಯಾಯಾಲಯ ಸ್ವಾಮಿ “ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರು ಬುದ್ಧಿವಂತ ವ್ಯಕ್ತಿ. ತಾವು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವುದು ತಿಳಿದು ತಮಗೆ ಮಧ್ಯಂತರ ಜಾಮೀನು ನೀಡುವಂತೆ ಒತ್ತಾಯಿಸುತ್ತಿದ್ದಾರೆ” ಎಂದಿತು.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜೂನ್ 7ಕ್ಕೆ ಮುಂದೂಡಿದೆ.