ಬಿಹಾರ ಎಸ್ಐಆರ್: ಮತದಾರರಿಗೆ ನೆರವಾಗಲು ಅರೆ ಕಾನೂನು ಸ್ವಯಂಸೇವಕರ ನಿಯೋಜನೆಗೆ ಸುಪ್ರೀಂ ಸೂಚನೆ

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇಸಿಐ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1ರವರೆಗೆ ವಿಧಿಸಲಾಗಿದ್ದ ಗಡುವನ್ನು ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿತು.
Bihar SIR Plea
Bihar SIR Plea
Published on

ಬಿಹಾರದ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಸಿದ್ಧಪಡಿಸಲಾಗುತ್ತಿರುವ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮತದಾರರು ಮತ್ತು ರಾಜಕೀಯ ಪಕ್ಷಗಳಿಗೆ ಸಹಾಯ ಮಾಡುವುದಕ್ಕಾಗಿ ಅರೆ ಕಾನೂನು ಸ್ವಯಂಸೇವಕರ ನಿಯೋಜನೆ ಮಾಡುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.

ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸುವವರೆಗೂ (ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೆ) ಸಲ್ಲಿಸಲಿರುವ ಆಕ್ಷೇಪಣೆಗಳು ಅರ್ಜಿಗಳನ್ನು ಪರಿಗಣಿಸಲಾಗುವುದು. ಮತದಾರರಿಗೆ ಇನ್ನೂ ಅವಕಾಶ ಇದೆ ಎಂದು ಭಾರತೀಯ ಚುನಾವಣಾ ಆಯೋಗ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 1ರವರೆಗೆ ವಿಧಿಸಲಾಗಿದ್ದ ಗಡುವು ವಿಸ್ತರಿಸಲು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠ ನಿರಾಕರಿಸಿತು.

Also Read
ಬಿಹಾರ ಮತದಾರರ ಪಟ್ಟಿಯಿಂದ ತೆಗೆಯಲಿರುವ 65 ಲಕ್ಷ ಮಂದಿಯ ವಿವರ ಪ್ರಕಟಿಸಿ, ಕಾರಣ ತಿಳಿಸುವಂತೆ ಇಸಿಐಗೆ ಸುಪ್ರೀಂ ಆದೇಶ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂಬ ಚುನಾವಣಾ ಆಯೋಗದ ವಾದವನ್ನು ನ್ಯಾಯಾಲಯ ದಾಖಲಿಸಿಕೊಂಡಿತು.

ಈ ಹಿಂದೆ ಆಗಸ್ಟ್ 22ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ , ಕರಡು ಮತದಾರರ ಪಟ್ಟಿಯಿಂದ ಹೊರಗುಳಿದವರು  ಆಕ್ಷೇಪಣೆ ಸಲ್ಲಿಸಲು ಅಗತ್ಯ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿತ್ತು. ಆ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಆಧಾರ್‌ ಕಾರ್ಡನ್ನು ಪುರಾವೆಯಾಗಿ ಬಳಸಲು ಅನುವು ಮಾಡಿಕೊಟ್ಟಿತ್ತು. ಆದರೆ ರಾಜಕೀಯ ಪಕ್ಷಗಳು ಕೇವಲ ಎರಡು ಆಕ್ಷೇಪಣೆ ಸಲ್ಲಿಸಿವೆ ಎಂಬ ಚುನಾವಣಾ ಆಯೋಗದ ವಿವರಗಳಿಗೆ ಆಶ್ಚರ್ಯ ವ್ಯಕ್ತಪಡಿಸಿತ್ತು.

Also Read
ಮೊದಲೇ ಸೂಚನೆ ನೀಡದೆ, ವಿಚಾರಣೆ ಇಲ್ಲದೆ ಬಿಹಾರ ಮತದಾರರ ಪಟ್ಟಿಯಿಂದ ಹೆಸರು ಅಳಿಸುವುದಿಲ್ಲ: ಸುಪ್ರೀಂಗೆ ಇಸಿಐ

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಗುರುತಿನ ಪರಿಶೀಲನಾ ದಾಖಲೆಯಾಗಿ ಆಧಾರ್‌ಗೆ ಸೂಕ್ತ ಪ್ರಾಮುಖ್ಯತೆ ನೀಡಬೇಕೆಂದು ನ್ಯಾಯಾಲಯ ಪುನರುಚ್ಚರಿಸಿತು.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ   ವಕೀಲ ಪ್ರಶಾಂತ್ ಭೂಷಣ್,  ಚುನಾವಣಾ ಆಯೋಗದ ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಅರ್ಜಿದಾರರೊಬ್ಬರ ಪರವಾಗಿ ವಕೀಲ ನಿಜಾಂ ಪಾಷಾ ವಾದ ಮಂಡಿಸಿದರು. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷವನ್ನು ಹಿರಿಯ ವಕೀಲ ಶೋಯೆಬ್ ಆಲಂ ಪ್ರತಿನಿಧಿಸಿದ್ದರು. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಕೂಡ ವಾದ ಮಂಡಿಸಿದರು.

Kannada Bar & Bench
kannada.barandbench.com