ಮೊದಲೇ ಸೂಚನೆ ನೀಡದೆ, ವಿಚಾರಣೆ ಇಲ್ಲದೆ ಬಿಹಾರ ಮತದಾರರ ಪಟ್ಟಿಯಿಂದ ಹೆಸರು ಅಳಿಸುವುದಿಲ್ಲ: ಸುಪ್ರೀಂಗೆ ಇಸಿಐ

ಪ್ರತಿಕೂಲ ಕ್ರಮಕ್ಕೆ ತುತ್ತಾಗದ ರೀತಿಯಲ್ಲಿ ಪ್ರತಿಯೊಬ್ಬ ಮತದಾರನಿಗೂ ಪರಿಹಾರ ದೊರೆಯಲು ಸಾಧ್ಯವಾಗುವಂತೆ ಎರಡು ಹಂತದ ಮೇಲ್ಮನವಿ ಕಾರ್ಯವಿಧಾನದಿಂದ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಇಸಿಐ ಹೇಳಿದೆ.
Bihar SIR Plea
Bihar SIR Plea
Published on

ಮೊದಲೇ ಸೂಚನೆ ನೀಡದೆ, ವಿಚಾರಣೆಗೆ ಅವಕಾಶ ಇಲ್ಲದೆ ಮತ್ತು ಸಕ್ಷಮ ಪ್ರಾಧಿಕಾರದಿಂದ ಸಮಂಜಸ ಆದೇಶ ಇಲ್ಲದೆ ಬಿಹಾರದ ಕರಡು ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ತೆಗೆದುಹಾಕುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಚುನಾವಣಾ ಆಯೋಗ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ಕರಡು ಮತದಾರರ ಪಟ್ಟಿಯಿಂದ ಹೆಸರು ಅಳಿಸುವುದಿಲ್ಲ ಎಂದು ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Also Read
ಬಿಹಾರ ಮತದಾರರ ಪಟ್ಟಿಯಿಂದ ಏಕೆ ಹೊರಗಿಡಲಾಗಿದೆ ಎಂಬುದನ್ನು ವಿವರಿಸಲು ಕಾನೂನು ಇಲ್ಲ: ಸುಪ್ರೀಂ ಕೋರ್ಟ್‌ಗೆ ಇಸಿಐ

ಬಿಹಾರದಲ್ಲಿ ಮತದಾರರ ಸಮಗ್ರ ಪಟ್ಟಿ ಪರಿಷ್ಕಷರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಪ್ರತಿಕೂಲ ಕ್ರಮಕ್ಕೆ ತುತ್ತಾಗದಂತೆ ಪ್ರತಿಯೊಬ್ಬ ಮತದಾರನಿಗೂ ಪರಿಹಾರ ದೊರೆಯಲು ಸಾಧ್ಯವಾಗುವಂತೆ ಎರಡು ಹಂತದ ಮೇಲ್ಮನವಿ ಕಾರ್ಯವಿಧಾನದಿಂದ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಇಸಿಐ ಹೇಳಿದೆ.

ಬಿಹಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮೊದಲ ಹಂತ ಪೂರ್ಣಗೊಂಡಿದ್ದು ಅಸ್ತಿತ್ವದಲ್ಲಿರುವ ಮತದಾರರಿಂದ ಗಣತಿ ನಮೂನೆಗಳನ್ನು ಸಂಗ್ರಹಿಸಲು ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿದ ನಂತರ ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಕರಡು ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಸರಿಪಡಿಸುವುದಕ್ಕೆ ಅನುಕೂಲವಾಗುವಂತೆ, ನಮೂದು ನಮೂನೆಗಳು ದೊರೆಯದ ಮತದಾರರ ವಿವರಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಂಡಿರುವುದಾಗಿಯೂ ಅದು ಹೇಳಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ತೆಗೆದುಕೊಂಡ ಕ್ರಮಗಳನ್ನೂ ಅಫಿಡವಿಟ್ ವಿವರಿಸಿದ್ದು ಮತದಾರರು ಗರಿಷ್ಠ ಮಟ್ಟದಲ್ಲಿ ಭಾಗವಹಿಸಲು, ಮತ್ತು ಸುಳ್ಳೇ ಪಟ್ಟಿಯಿಂದ ತೆಗೆದುಹಾಕವುದುನ್ನು ತಡೆಯಲು ಹಾಗೂ   ಪ್ರತಿಯೊಬ್ಬ ಅರ್ಹ ಮತದಾರರನ್ನು ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅದು ವಿವರಿಸಿದೆ.

ಅದೇ ಪ್ರಕಾರ, 7.89 ಕೋಟಿ ಮತದಾರರಲ್ಲಿ, 7.24 ಕೋಟಿಗೂ ಹೆಚ್ಚು ಮತದಾರರು ರಾಜ್ಯ ಚುನಾವಣಾ ವ್ಯವಸ್ಥೆ, ಸ್ವಯಂಸೇವಕರು ಮತ್ತು ಪಕ್ಷದ ಏಜೆಂಟರ ಮೂಲಕ ತಮ್ಮ ನಮೂದು ನಮೂನೆಗಳನ್ನು ಸಲ್ಲಿಸಿದ್ದಾರೆ.

Also Read
ಬಿಹಾರ ಎಸ್ಐಆರ್ ಪ್ರಕರಣ: ದಾರಿ ತಪ್ಪಿದಲ್ಲಿ ಮಧ್ಯಪ್ರವೇಶಿಸುವುದಾಗಿ ಇಸಿಐಗೆ ಎಚ್ಚರಿಕೆ ನೀಡಿದ ಸುಪ್ರೀಂ

ವಲಸೆ ಕಾರ್ಮಿಕರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ದೇಶಾದ್ಯಂತ 246 ಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹೀರಾತುಗಳು ಪ್ರಕಟ ಮಾಡಲಾಗಿದೆ. ಇದಲ್ಲದೆ ಸೂಚನೆ ಮತ್ತು ಆದೇಶ ಇಲ್ಲದೆ ಹೆಸರು ತೆಗೆದುಹಾಕುವುದನ್ನು ತಡೆಯುವುದಕ್ಕಾಗಿ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಅದು ವಿವರಿಸಿದೆ.

ಜೂನ್ 24ರಂದು ಎಸ್‌ಐಆರ್‌ ಘೋಷಿಸಲಾಗಿತ್ತು. 2003ರ ನಂತರ ಬಿಹಾರದಲ್ಲಿ ಹೀಗೆ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸುತ್ತಿರುವುದು ಇದು ಮೊದಲನೆ ಬಾರಿ.  ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌, ಪಿಯುಸಿಎಲ್‌  ಮತ್ತಿತರರ ಸಂಘ ಸಂಸ್ಥೆಗಳು ಈ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ ಸಲ್ಲಿಸಿವೆ. ಸಾಂವಿಧಾನಿಕ ನಿಬಂಧನೆಗಳು ಮತ್ತು ಚುನಾವಣಾ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿವೆ. ಜುಲೈ 10ರಂದು, ಸುಪ್ರೀಂ ಕೋರ್ಟ್ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆ ನೀಡಲು ನಿರಾಕರಿಸಿತಾದರೂ ಆಧಾರ್, ಇಪಿಐಸಿ ಮತ್ತು ಪಡಿತರ ಚೀಟಿಯನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸುವಂತೆ ಇಸಿಐಗೆ ಸೂಚಿಸಿತ್ತು. ಈ ಪ್ರಕರಣದ ವಿಚಾರಣೆ ಆಗಸ್ಟ್ 12 ಮತ್ತು 13ರಂದು ನಡೆಯಲಿದೆ.

Kannada Bar & Bench
kannada.barandbench.com