
ಬಿಹಾರದಲ್ಲಿ ಮತದಾರರ ಪಟ್ಟಿಯ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಪಟ್ಟಿಯಿಂದ ತೆಗೆದುಹಾಕಲು ಪ್ರಸ್ತಾಪಿಸಲಾದ 65 ಲಕ್ಷ ಮತದಾರರ ವಿವರಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿದೆ.
ಹಾಗೆಯೇ ಅವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಕಾರಣ ಏನೆಂಬುದನ್ನು ವಿವರಿಸುವಂತೆಯೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಆದೇಶಿಸಿತು. ಅದರಲ್ಲಿಯೂ 65 ಲಕ್ಷ ಮಂದಿಯಲ್ಲಿ 22 ಲಕ್ಷ ಜನ ಈಗಾಗಲೇ ಮರಣ ಹೊಂದಿದ್ದಾರೆ ಎಂದಿರುವ ಇಸಿಐನ ಕರಡುಪಟ್ಟಿಯ ಮೇಲೆ ಗಮನ ಹರಿಸಿತು.
“ನನಗೆ ಅರಿವಿಲ್ಲದ ಒಂದು ನಿರೂಪ (ನರೇಟಿವ್) ಇದೆ. ನೀವಿದನ್ನು ಸಾರ್ವಜನಿಕವಾಗಿ ಪ್ರಕಟಿಸಿದರೆ ಆ ನಿರೂಪ ಮರೆಯಾಗಲಿದೆ “ ಎಂದು ನ್ಯಾ. ಕಾಂತ್ ಮಾರ್ಮಿಕವಾಗಿ ನುಡಿದರು.
ಪ್ರಸ್ತುತ ಜನರು ಬೂತ್ ಮಟ್ಟದ ಅಧಿಕಾರಿಗಳು ಅಥವಾ ರಾಜಕೀಯ ಪಕ್ಷಗಳ ಮರ್ಜಿಯಲ್ಲಿದ್ದಾರೆ ಎಂದು ನ್ಯಾಯಾಲಯ ಕುಟುಕಿತು.
"ಇಂತಹವರು ಮರಣಹೊಂದಿದ, ಸ್ಥಳಾಂತರಗೊಂಡ ಅಥವಾ ನಕಲಿ ವ್ಯಕ್ತಿಗಳು ಎಂದು ಜಾಲತಾಣದಲ್ಲಿ ಏಕೆ ಪ್ರದರ್ಶಿಸಬಾರದು" ಎಂದು ನ್ಯಾಯಾಲಯ ಆಯೋಗವನ್ನು ಪ್ರಶ್ನಿಸಿತು.
ಇದಕ್ಕೆ ಇಸಿಐ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ ನ್ಯಾ. ಬಾಗ್ಚಿ ಅವರು ವಿಶೇಷ ಸಂದರ್ಭಗಳು ಇಲ್ಲದಿದ್ದಾಗ ಚುನಾವಣೆ ನಡೆಯುವ ವರ್ಷದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದಕ್ಕೆ ಅನುಮತಿ ಇರುವುದಿಲ್ಲ. ವಲಸಿಗ ಬಿಹಾರಿಗಳ ಸಂಖ್ಯೆ ಹೆಚ್ಚಿರುವಾಗ ಈ ಕುರಿತಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಕ್ಕೆ ವ್ಯಾಪಕ ಪ್ರಚಾರ ನೀಡುವ ಅಗತ್ಯವಿದೆ ಎಂದು ಬುದ್ಧಿವಾದ ಹೇಳಿದರು.
ಅಲ್ಲದೆ ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿರಬೇಕು ಅದಕ್ಕಾಗಿ ಪಟ್ಟಿಯಿಂದ ತೆಗೆದು ಹಾಕಬೇಕೆಂದಿರುವವರ ವಿವರಗಳನ್ನು ಜಾಲತಾಣದಲ್ಲಿ ಪ್ರಕಟಿಸುವಂತೆ ಅದು ಇಸಿಐಗೆ ನಿರ್ದೇಶಿಸಿತು.
2025ರ ಪಟ್ಟಿಯಲ್ಲಿ ಹೆಸರು ಇದ್ದರೂ ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗದ 65 ಲಕ್ಷ ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ ಜಾಲತಾಣಗಳಲ್ಲಿ ಪ್ರದರ್ಶಿಸಬೇಕು. ಮಾಹಿತಿಯು ಬೂತ್ ಮಟ್ಟದ್ದಾಗಿರಬೇಕು. ಇಪಿಐಸಿ ಸಂಖ್ಯೆ ನಮೂದಿಸಿ ಅದರ ವಿವರಗಳನ್ನು ಪಡೆಯಲು ಸಾಧ್ಯವಾಗುವಂತಿರಬೇಕು. ಪಟ್ಟಿಗಳನ್ನು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಯ ಜಾಲತಾಣದಲ್ಲಿ ಪ್ರಕಟಿಸಬೇಕು.
ಕರಡು ಪಟ್ಟಿಯಲ್ಲಿ ಹೆಸರು ಸೇರಿಸದಿರುವುದಕ್ಕೆ ಕಾರಣಗಳನ್ನು ಕೂಡ ಬಹಿರಂಗಪಡಿಸಬೇಕು.
ಪಟ್ಟಿ ಪ್ರಕಟಿಸುವ ಬಗ್ಗೆ ಪತ್ರಿಕೆ, ಇ-ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ಜಿಲ್ಲಾ ಚುನಾವಣಾ ಅಧಿಕಾರಿಗೆ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ಇದ್ದರೆ, ಅವರು ಅಲ್ಲಿಯೂ ಸಹ ಪ್ರದರ್ಶಿಸಬೇಕು.
ಬಾಧಿತ ವ್ಯಕ್ತಿ ಆಧಾರ್ ಕಾರ್ಡ್ ಪ್ರತಿಯೊಂದಿಗೆ ತಮ್ಮ ವಾದ ಮಂಡಿಸಬಹುದು ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು.
ಮತದಾರರ ಪಟ್ಟಿಯನ್ನು ಪಂಚಾಯತ್ ಮತ್ತು ವಲಯ ಅಭಿವೃದ್ಧಿ ಅಧಿಕಾರಿಗಳ ಕಚೇರಿಗಳಲ್ಲಿ ಪ್ರದರ್ಶಿಸಬೇಕು.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಆದೇಶಿಸಿ ಇಸಿಐ ಜೂನ್ 24ರಂದು ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರಗಳನ್ನು ತಿಳಿಸಿತು.