
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸೇರ್ಪಡೆ ಮಾಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದೆ.
ಚುನಾವಣಾ ಆಯೋಗ ಸಲ್ಲಿಸುವಂತೆ ಸೂಚಿಸಿರುವ ದಾಖಲೆಗಳನ್ನು ಕೂಡ ನಕಲು ಮಾಡಬಹುದಾಗಿದ್ದು ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಮತ್ತು ಚುನಾವಣಾ ಫೋಟೋ ಗುರುತಿನ ಚೀಟಿಗಳನ್ನಷ್ಟೇ (ಎಪಿಕ್) ಹೊರಗಿಟ್ಟಿರುವುದರ ತಾರ್ಕಿಕತೆಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಪ್ರಶ್ನಿಸಿತು.
" ಈ ಎರಡು ದಾಖಲೆಗಳನ್ನು ಸೇರಿಸಿ. ಮುಂದೆ ಆಧಾರ್ ಮಾತ್ರವಲ್ಲದೆ 11 ದಾಖಲೆಗಳನ್ನು ಕೂಡ ನಕಲಿ ಮಾಡಿರುವುದು ನಿಮಗೆ ತಿಳಿಯಬಹುದು. ಅದು ಬೇರೆ ವಿಚಾರ. ಆದರೆ ನಾವು (ಮತದಾರರನ್ನು) ಸಾಮೂಹಿಕವಾಗಿ ಮತದಾನದಿಂದ ಹೊರಗಿಡುತ್ತಿರುವುದರ ಮಾತನಾಡುತ್ತಿದ್ದೇವೆ. ಅದು ಸಾಮೂಹಿಕ ಸೇರ್ಪಡೆಯಾಗಬೇಕು. ದಯವಿಟ್ಟು ಆಧಾರ್ ಪರಿಗಣಿಸಿ " ಎಂದು ನ್ಯಾಯಾಲಯ ಕಿವಿಮಾತು ಹೇಳಿತು.
ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮಾಡುವಂತೆ ಜೂನ್ 24ರಂದು ಚುನಾವಣಾ ಆಯೋಗ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಸಂವಿಧಾನದ 14, 19, 21, 325 ಮತ್ತು 326 ನೇ ವಿಧಿಗಳು, 1950ರ ಪ್ರಜಾ ಪ್ರತಿನಿಧಿ ಕಾಯಿದೆ ಹಾಗೂ 1960ರ ಮತದಾರರ ನೋಂದಣಿ ನಿಯಮ 21 ಎ ಸೆಕ್ಷನ್‌ಗಳನ್ನು ಆಯೋಗ ಉಲ್ಲಂಘಿಸಿದೆ. ಜೊತೆಗೆ 1950ರ ಜನ ಪ್ರತನಿಧಿ ಕಾಯಿದೆ ಮತ್ತು 1960ರ ಮತದಾರರ ನೋಂದಣಿ ನಿಯಮಾವಳಿ ಅಡಿ ನಿಗದಿಪಡಿಸಿದ ಕಾರ್ಯವಿಧಾನಕ್ಕಿಂತಲೂ ಆಯೋಗ ಕೈಗೊಂಡ ನಿರ್ಧಾರ ಭಿನ್ನವಾಗಿದೆ ಎಂದು ಅರ್ಜಿದಾರರು ದೂರಿದ್ದರು.
ಆದರೆ ಸಂವಿಧಾನದ 324ನೇ ವಿಧಿ ಮತ್ತು 1950 ರ ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್ 21 (3) ರ ಅಡಿಯಲ್ಲಿ ಹಾಗೆ ಮಾಡಲು ತನಗೆ ಅಧಿಕಾರ ಇದೆ ಎಂದು ಚುನಾವಣಾ ಆಯೋಗ ತಾನು ನೀಡಿದ್ದ ನಿರ್ದೇಶನವನ್ನು ಸಮರ್ಥಿಸಿಕೊಂಡಿತು.
ನಗರ ವಲಸೆ, ಜನಸಂಖ್ಯಾ ಬದಲಾವಣೆಗಳು ಮತ್ತು ಸುಮಾರು ಇಪ್ಪತ್ತು ವರ್ಷಗಳಿಂದ ಸಮಗ್ರವಾಗಿ ಪರಿಷ್ಕರಿಸದೆ ಇರುವ ಮತದಾರರ ಪಟ್ಟಿಯಲ್ಲಿನ ನಿಖರತೆಯ ಬಗ್ಗೆ ದೀರ್ಘಕಾಲದ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಅಗತ್ಯವಾಗಿದೆ ಎಂದು ಅದು ವಾದಿಸಿತ್ತು. ಮತದಾರರ ಪರಿಶೀಲನೆಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿ ಕುರಿತಂತೆ ಪ್ರತಿಕ್ರಿಯಿಸಿದ ಅದು ಆಧಾರ್ ಮತ್ತು ಪಡಿತರ ಚೀಟಿಗಳನ್ನು ಮೋಸದ ಅಥವಾ ಸುಳ್ಳು ದಾಖಲೆಗಳ ಮೂಲಕ ಪಡೆಯಬಹುದು ಎಂದಿತು.
ಇಸಿಐ ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಅರ್ಜಿದಾರರಲ್ಲಿ ಒಬ್ಬರಾದ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ಸಭೆ ಇದ್ದುದರಿಂದ ಕಲಾಪ ಮೊಟಕುಗೊಳಿಸಿದ ನ್ಯಾಯಾಲಯ ತಮ್ಮ ವಾದ ಮಂಡನೆಗೆ ಕಾಲಮಿತಿ ವಿವರಿಸುವಂತೆ ವಕೀಲರಿಗೆ ಸೂಚಿಸಿತು.