ಮತದಾರರ ಪಟ್ಟಿಯಿಂದ ಹೊರಗುಳಿದವರು ಆಕ್ಷೇಪಣೆ ಸಲ್ಲಿಸಲು ರಾಜಕೀಯ ಪಕ್ಷಗಳು ಸಹಾಯ ಮಾಡುವಂತೆ ಸುಪ್ರೀಂ ಸಲಹೆ

ಹೆಸರು ಹೊರಗುಳಿದಿರುವ ಮತದಾರರು ನಮೂನೆ-6 ಜೊತೆ ಆಧಾರ್ ಕಾರ್ಡ್ ಅಥವಾ ಚುನಾವಣೆ ಆಯೋಗವು ತಿಳಿಸಿರುವ ಯಾವುದೇ 11 ಗುರುತಿನ ದಾಖಲೆಗಳಲ್ಲಿ ಒಂದನ್ನು ಬಳಸಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
Supreme Court, Election Commission
Supreme Court, Election Commission
Published on

ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಜನರಿಗೆ ಸಹಾಯ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದೆ.

ಬಿಹಾರದಲ್ಲಿ 1.60 ಲಕ್ಷಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಇದ್ದರೂ ಕೇವಲ ಎರಡು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದ್ದಕ್ಕೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಆಶ್ಚರ್ಯ ವ್ಯಕ್ತಪಡಿಸಿತು.

Also Read
ಬಿಹಾರ ಮತದಾರರ ಪಟ್ಟಿಯಿಂದ ತೆಗೆಯಲಿರುವ 65 ಲಕ್ಷ ಮಂದಿಯ ವಿವರ ಪ್ರಕಟಿಸಿ, ಕಾರಣ ತಿಳಿಸುವಂತೆ ಇಸಿಐಗೆ ಸುಪ್ರೀಂ ಆದೇಶ

ಆದರೆ ಬೂತ್‌ ಮಟ್ಟದ ಏಜೆಂಟ್‌ಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂಬ ರಾಜಕೀಯ ಪಕ್ಷಗಳ ಮನವಿಯನ್ನು ಗಣನೆಗೆ ತೆಗೆದುಕೊಂಡ ಅದು  ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಕ್ಕೆ ಮತದಾರರು ನಮೂನೆ-6 ಜೊತೆ ಆಧಾರ್ ಕಾರ್ಡ್ ಅಥವಾ ಚುನಾವಣೆ ಆಯೋಗವು ತಿಳಿಸಿರುವ ಯಾವುದೇ 11 ಗುರುತಿನ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಲು ಸಹಾಯ ಮಾಡಲು ಏಜೆಂಟ್‌ಗಳಿ ಸೂಚನೆ ನೀಡಬೇಕೆಂದು ನಿರ್ದೇಶಿಸಿತು.

ಇದರರ್ಥ ಆಧಾರ್ ಅನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಪುರಾವೆಯಾಗಿ ಬಳಸಬಹುದು ಎನ್ನುವುದಾಗಿದೆ.

ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರು ತಮ್ಮ ಆಕ್ಷೇಪಣೆಗಳನ್ನು ಅಗತ್ಯ ನಮೂನೆಯೊಂದಿಗೆ ಆಧಾರ್ ಕಾರ್ಡ್ ಬಳಸಿ ಸಲ್ಲಿಸಬಹುದಾಗಿದೆ.

ಇಂದಿನ ವಿಚಾರಣೆ ವೇಳೆ 12 ನೋಂದಾಯಿತ ರಾಜಕೀಯ ಪಕ್ಷಗಳನ್ನು ಪ್ರಕರಣದ ಮಧ್ಯಪ್ರವೇಶ ಪಕ್ಷಕಾರರನ್ನಾಗಿ ನ್ಯಾಯಾಲಯ ಸೇರ್ಪಡೆ ಮಾಡಿಕೊಂಡಿತು.

ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವ್ಯಕ್ತಿಗಳು ಅಥವಾ ಬಿಎಲ್‌ಎಗಳು ಅರ್ಹರು ಎಂದು ಪುನರುಚ್ಚರಿಸಿದ ಅದು ಅದಕ್ಕಾಗಿ ಭೌತಿಕ ದಾಖಲೆ  ಸಲ್ಲಿಸುವ ಅಗತ್ಯವಿಲ್ಲ ಎಂದಿತು.

ಸಾವನ್ನಪ್ಪಿದವರು ಅಥವಾ ಸ್ವಯಂಪ್ರೇರಣೆಯಿಂದ ಪಟ್ಟಿಯಲ್ಲಿಲ್ಲದವರನ್ನು ಹೊರತುಪಡಿಸಿ,ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದ 65 ಲಕ್ಷ ಹೆಸರುಗಳ ವ್ಯಕ್ತಿಗಳು, ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಹಾಯ ಮಾಡುವಂತೆ ಏಜೆಂಟ್‌ಗಳಿಗೆ ನ್ಯಾಯಾಲಯ ಸೂಚಿಸಿತು.

" ಭೌತಿಕ ಅರ್ಜಿಗಳನ್ನು ಸಲ್ಲಿಸಿದ ಕಡೆಗಳಲ್ಲೆಲ್ಲಾ, ಬೂತ್ ಮಟ್ಟದ ಅಧಿಕಾರಿಗಳಿಗೆ ಅರ್ಜಿ  ಪುರಸ್ಕರಿಸಲು ನಿರ್ದೇಶಿಸಲಾಗಿದೆ " ಎಂದು ಅದು ಹೇಳಿತು.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯ ಆಮೂಲಾಗ್ರ ಪರಿಷ್ಕರಣೆಗೆ ಆದೇಶಿಸಿದ್ದ ಚುನಾವಣಾ ಆಯೋಗದ ನಿರ್ದೇಶನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

Also Read
ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ಹೊರಕ್ಕೆ: ಇಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಬಿಹಾರದಲ್ಲಿ ಮತದಾರರ ಪಟ್ಟಿಯ ಆಮೂಲಾಗ್ರ ಪರಿಷ್ಕರಣೆ ವೇಳೆ ಪಟ್ಟಿಯಿಂದ ತೆಗೆದುಹಾಕಲು ಪ್ರಸ್ತಾಪಿಸಲಾದ 65 ಲಕ್ಷ ಮತದಾರರ ವಿವರಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವಂತೆ ಆಗಸ್ಟ್ 14 ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ಸೂಚಿಸಿತ್ತು.

ಆಯೋಗದ ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿದ್ದ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಸ್ಥೆ ಸೇರಿದಂತೆ ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌, ಮತ್ತೊಬ್ಬ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ನ್ಯಾಯವಾದಿಗಳಾದ ವೃಂದಾ ಗ್ರೋವರ್, ನಿಜಾಮ್ ಪಾಷಾ ಮತ್ತು ಫೌಜಿಯಾ ಶಕೀಲ್ ಇಂದು ವಾದ ಮಂಡಿಸಿದರು.

Kannada Bar & Bench
kannada.barandbench.com