
ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 65 ಲಕ್ಷ ಮಂದಿಯ ಹೆಸರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಭಾಗವಾಗಿ ಆಗಸ್ಟ್ 1ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದ ಚುನಾವಣಾ ಆಯೋಗ ಪಟ್ಟಿಯಿಂದ ಕೈಬಿಟ್ಟ 65 ಲಕ್ಷ ಮತದಾರರ ವಿವರಗಳನ್ನು ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಕರಣವನ್ನು ಬುಧವಾರ ಬೆಳಿಗ್ಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ಉಜ್ಜಲ್ ಭುಯಾನ್ ಹಾಗೂ ಎನ್ ಕೆ ಸಿಂಗ್ ಅವರಿದ್ದ ಪೀಠದೆದುರು ಪ್ರಸ್ತಾಪಿಸಿದರು.
"ಕರಡು ಪಟ್ಟಿಯಲ್ಲಿ 65 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ. ಆದರೆ ಆ 65 ಲಕ್ಷ ಹೆಸರುಗಳ ಪಟ್ಟಿಯನ್ನು ನೀಡಲಾಗಿಲ್ಲ. ಅದರಲ್ಲಿ 32 ಲಕ್ಷ ಮಂದಿ ವಲಸೆ ಹೋದವರು ಎಂದು ಹೇಳಲಾಗುತ್ತಿದೆ. ಇನ್ನುಳಿದ ವಿವರಗಳಿಲ್ಲ. ಚುನಾವಣಾ ಆಯೋಗ (ಆ ವಿವರಗಳನ್ನು) ಬಹಿರಂಗಪಡಿಸಬೇಕು. 65 ಲಕ್ಷ ಮಂದಿ ಯಾರು? ವಲಸೆ ಹೋದವರು ಯಾರು ಮತ್ತು ಮರಣವನ್ನಪ್ಪಿರುವವರು ಯಾರು? , ಬಿಎಲ್‌ಒಗಳು (ಬೂತ್ ಮಟ್ಟದ ಪಕ್ಷದ ಪ್ರತಿನಿಧಿಗಳು) ಮತದಾರರನ್ನು ತೆಗೆದುಹಾಕಬೇಕು ಅಥವಾ ತೆಗೆದುಹಾಕಬಾರದು ಎಂದು ಶಿಫಾರಸು ಮಾಡಿರುವುದು ಸ್ಪಷ್ಟವಾಗಿದೆ... ಇಸಿಐ ಎರಡು ಕ್ಷೇತ್ರಗಳಿಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸಿದೆ... ಆದರೆ ಇತರ ಪ್ರದೇಶಗಳ ಕತೆ ಏನು? ಈ ಎರಡು ವಾದಕಾಲೀನ ಅರ್ಜಿಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಒದಗಿಸಬೇಕು " ಎಂದು ಭೂಷಣ್ ವಾದಿಸಿದರು.
ಇಸಿಐ ಪಾಲಿಸುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ (ಎಸ್‌ಒಪಿ) ಪ್ರಕಾರ, ಪ್ರತಿಯೊಂದು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಲಾಗುತ್ತದೆ ಎಂದು ನ್ಯಾಯಮೂರ್ತಿ ಕಾಂತ್ ನೆನಪಿಸಿದರು.
ಆಗ ಇಸಿಐ ಪರ ವಾದ ಮಂಡಿಸಿದ ವಕೀಲರು ಅಂತಹ ಮಾಹಿತಿಯನ್ನು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಾಬೀತುಪಡಿಸುವುದಾಗಿ ಹೇಳಿದರು. ಈ ಅಂಶಗಳ ಕುರಿತು ಪ್ರತಿಕ್ರಿಯೆ ದಾಖಲಿಸುವಂತೆ ನ್ಯಾಯಾಲಯ ಇಸಿಐಗೆ ಸೂಚಿಸಿತು.
"ತೆಗೆದುಹಾಕಲಾದ ಮತದಾರರ ಪಟ್ಟಿಯನ್ನು ಯಾವ ಯಾವ ರಾಜಕೀಯ ಪಕ್ಷಗಳಿಗೆ ಒದಗಿಸಲಾಗಿದೆ ಎಂಬುದನ್ನು ವಿವರಿಸಿ. ಆಗಸ್ಟ್ 12ರಂದು ಪ್ರಕರಣದ ವಿಚಾರಣೆ ನಡೆಸುತ್ತೇವೆ. ಅಷ್ಟರೊಳಗೆ ನಿಮ್ಮ (ಇಸಿಐ) ಪ್ರತಿಕ್ರಿಯೆ ಸಲ್ಲಿಸಿ" ಎಂದು ನ್ಯಾಯಮೂರ್ತಿ ಕಾಂತ್ ಚುನಾವಣಾ ಆಯೋಗದ ವಕೀಲರಿಗೆ ತಿಳಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ಭೂಷಣ್ ಅವರ ವಾದವೊಂದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ "ಮತದಾರರ ಪಟ್ಟಿ ಪರಿಷ್ಕರಣೆಯ ಪರಿಣಾಮಕ್ಕೆ ಒಳಗಾಗುವ ಪ್ರತಿಯೊಬ್ಬ ಮತದಾರರಿಗೂ ಅಗತ್ಯವಿರುವ ಮಾಹಿತಿ ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ" ಎಂದಿತು.
ಇತ್ತ ಇಸಿಐ ವಕೀಲರನ್ನು ಉದ್ದೇಶಿಸಿದ ಪೀಠ " ಶನಿವಾರದೊಳಗೆ ಪ್ರತಿಕ್ರಿಯೆ ಸಲ್ಲಿಸಿ. ಭೂಷಣ್ ಅವರು ಅದನ್ನು ಪರಿಶೀಲಿಸಲಿ. ನಂತರ ಯಾವ ಮತದಾರರ ಹೆಸರನ್ನು ಬಹಿರಂಗಪಡಿಸಲಾಗಿದೆ ಅಥವಾ ಇಲ್ಲ ಎಂಬುದನ್ನು ನಾವು ವಿಚಾರಣೆ ನಡೆಸಬಹುದು" ಎಂದಿತು.
ಜುಲೈ 25 ರಂದು ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆ ನೀಡಿ, ಸುಮಾರು 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿತ್ತು.
ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಲು ಭಾರತೀಯ ಚುನಾವಣಾ ಆಯೋಗ ಕೈಗೊಂಡ ನಿರ್ಧಾರ ಪ್ರಶ್ನಿಸಿ ಎಡಿಆರ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯೊಂದಿಗೆ ಆಗಸ್ಟ್ 12 ರಂದು ಪ್ರಸ್ತುತ ಅರ್ಜಿಯ ವಿಚಾರಣೆಯೂ ನಡೆಯಲಿದೆ.