ಬಿಹಾರ ಎಸ್ಐಆರ್ ಪ್ರಕರಣ: ದಾರಿ ತಪ್ಪಿದಲ್ಲಿ ಮಧ್ಯಪ್ರವೇಶಿಸುವುದಾಗಿ ಇಸಿಐಗೆ ಎಚ್ಚರಿಕೆ ನೀಡಿದ ಸುಪ್ರೀಂ

ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್ಐಆರ್) ಮಾಡಲು ಜೂನ್ 24ರಂದು ಚುನಾವಣಾ ಆಯೋಗ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Bihar SIR Plea
Bihar SIR Plea
Published on

ವರ್ಷಾಂತ್ಯಕ್ಕೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 12 ಅಥವಾ 13ರಂದು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.

ಎಸ್‌ಐಆರ್‌ಗೆ ಸಂಬಂಧಿಸಿದಂತೆ ಸೂಚಿಸಿರುವ ಮಾನದಂಡಗಳಿಂದ ಚುನಾವಣಾ ಆಯೋಗ ಅತ್ತಿತ್ತ ಸರಿದರೆ ತಾನು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಎಚ್ಚರಿಕೆ ನೀಡಿತು.

Justice Surya Kant and Justice Joymalya Bagchi
Justice Surya Kant and Justice Joymalya Bagchi
Also Read
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಆಧಾರ್‌, ರೇಷನ್‌ ಕಾರ್ಡ್‌ ಮಾನ್ಯವಲ್ಲ ಎನ್ನಲು ಚುನಾವಣಾ ಆಯೋಗ ನೀಡಿದ ಕಾರಣಗಳೇನು?

ಅಲ್ಲದೆ ಎರಡೂ ಕಡೆಯ ಪಕ್ಷಕಾರರು ಚುನಾವಣೆಗೆ ಇರುವ ಕಡಿಮೆ ಅವಧಿ ಇದೆ ಎಂದಿರುವುದನ್ನು ಪರಿಗಣಿಸಿ ಮತ್ತು ಪ್ರಕರಣದ ತುರ್ತು ಮತ್ತು ಅದರ ಸ್ವರೂಪವನ್ನು ಗಮನಿಸಿ ಆಗಸ್ಟ್ 12 ಅಥವಾ 13ರಂದು ವಿಚಾರಣೆ ನಡೆಸುವುದಾಗಿ ಅದು ಸ್ಪಷ್ಟಪಡಿಸಿತು.

 ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್ಐಆರ್) ಮಾಡಲು ಜೂನ್ 24ರಂದು ಚುನಾವಣಾ ಆಯೋಗ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಸಂವಿಧಾನದ 14, 19, 21, 325 ಮತ್ತು 326 ನೇ ವಿಧಿಗಳು, 1950ರ ಪ್ರಜಾ ಪ್ರತಿನಿಧಿ ಕಾಯಿದೆ ಹಾಗೂ 1960ರ ಮತದಾರರ ನೋಂದಣಿ ನಿಯಮ 21 ಎ ಸೆಕ್ಷನ್‌ಗಳನ್ನು ಆಯೋಗ ಉಲ್ಲಂಘಿಸಿದೆ. ಜೊತೆಗೆ 1950ರ ಜನ ಪ್ರತನಿಧಿ ಕಾಯಿದೆ ಮತ್ತು 1960ರ ಮತದಾರರ ನೋಂದಣಿ ನಿಯಮಾವಳಿ ಅಡಿ ನಿಗದಿಪಡಿಸಿದ ಕಾರ್ಯವಿಧಾನಕ್ಕಿಂತಲೂ ಆಯೋಗ ಕೈಗೊಂಡ ನಿರ್ಧಾರ ಭಿನ್ನವಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಆದರೆ ಸಂವಿಧಾನದ 324ನೇ ವಿಧಿ ಮತ್ತು 1950 ರ ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್ 21 (3) ರ ಅಡಿಯಲ್ಲಿ ಹಾಗೆ ಮಾಡಲು ತನಗೆ ಅಧಿಕಾರ ಇದೆ ಎಂದು  ಚುನಾವಣಾ ಆಯೋಗ ತಾನು ನೀಡಿದ್ದ ನಿರ್ದೇಶನವನ್ನು ಸಮರ್ಥಿಸಿಕೊಂಡಿತ್ತು.

ನಗರ ವಲಸೆ, ಜನಸಂಖ್ಯಾ ಬದಲಾವಣೆಗಳು ಮತ್ತು ಸುಮಾರು ಇಪ್ಪತ್ತು ವರ್ಷಗಳಿಂದ ಸಮಗ್ರವಾಗಿ ಪರಿಷ್ಕರಿಸದೆ ಇರುವ ಮತದಾರರ ಪಟ್ಟಿಯಲ್ಲಿನ ನಿಖರತೆಯ ಬಗ್ಗೆ ದೀರ್ಘಕಾಲದ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಅಗತ್ಯವಾಗಿದೆ ಎಂದು ಅದು ವಾದಿಸಿತ್ತು. ಮತದಾರರ ಪರಿಶೀಲನೆಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿ ಕುರಿತಂತೆ ಪ್ರತಿಕ್ರಿಯಿಸಿದ ಅದು ಆಧಾರ್ ಮತ್ತು ಪಡಿತರ ಚೀಟಿಗಳನ್ನು ಮೋಸದ ಅಥವಾ ಸುಳ್ಳು ದಾಖಲೆಗಳ ಮೂಲಕ ಪಡೆಯಬಹುದು ಎಂದಿತ್ತು. 

ಚುನಾವಣಾ ಆಯೋಗ ಸಲ್ಲಿಸುವಂತೆ ಸೂಚಿಸಿರುವ ದಾಖಲೆಗಳನ್ನು ಕೂಡ ನಕಲು ಮಾಡಬಹುದಾಗಿದ್ದು ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್‌ ಕಾರ್ಡ್‌ ಮತ್ತು ಚುನಾವಣಾ ಫೋಟೋ ಗುರುತಿನ ಚೀಟಿಗಳನ್ನಷ್ಟೇ (ಎಪಿಕ್) ಹೊರಗಿಟ್ಟಿರುವುದರ ತಾರ್ಕಿಕತೆಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ಪ್ರಶ್ನಿಸಿತ್ತು. ಅಂತೆಯೇ ಆಧಾರ್‌ ಕಾರ್ಡನ್ನು ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಲ್ಲಿ ಪರಿಗಣಿಸುವಂತೆ ಅದು ಇಸಿಐಗೆ ಸಲಹೆ ನೀಡಿತ್ತು.

Also Read
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಆಧಾರ್ ಪರಿಗಣಿಸುವಂತೆ ಸುಪ್ರೀಂ ಸಲಹೆ

ಇಂದು, ಅರ್ಜಿದಾರರಲ್ಲಿ ಒಬ್ಬರಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸಂಸ್ಥೆ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಈ ಪ್ರಕ್ರಿಯೆಯಲ್ಲಿ ಸುಮಾರು 65 ಲಕ್ಷ ಜನರನ್ನು ಹೊರಗಿಡಲಾಗುತ್ತಿದೆ. ಬಹುತೇಕರು ಸಾವನ್ನಪ್ಪಿದ್ದಾರೆ ಎಂದು ಇಸಿಐ ಹೇಳಿಕೊಳ್ಳುತ್ತಿದೆ ಎಂದು ವಾದಿಸಿದರು.

ಆದರೆ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರವೇ ಅಂತಿಮ ಸಂಖ್ಯೆಯನ್ನು ಬಹಿರಂಗಪಡಿಸಲಾಗುತ್ತದೆ ಎಂದು ಇಸಿಐ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದಿಸಿದರು.

ನಂತರ ನ್ಯಾಯಾಲಯ ಆಗಸ್ಟ್‌ ಇಲ್ಲವೇ ಸೆಪ್ಟಂಬರ್‌ನಲ್ಲಿ ಪ್ರಕರಣ ಆಲಿಸಬಹುದು ಎಂದು ಹೇಳಿತು. ಅರ್ಜಿದಾರರ ಪರವಾಗಿ ವಕೀಲೆ ನೇಹಾ ರಾಠಿ ಅವರನ್ನು ನೋಡಲ್ ವಕೀಲರನ್ನಾಗಿ ಅದು ನೇಮಿಸಿತು.

Kannada Bar & Bench
kannada.barandbench.com