ಬಿಹಾರ ಮತದಾರರ ಪಟ್ಟಿಯಿಂದ ಏಕೆ ಹೊರಗಿಡಲಾಗಿದೆ ಎಂಬುದನ್ನು ವಿವರಿಸಲು ಕಾನೂನು ಇಲ್ಲ: ಸುಪ್ರೀಂ ಕೋರ್ಟ್‌ಗೆ ಇಸಿಐ

ಕರಡು ಪಟ್ಟಿಯಲ್ಲಿ ಸೇರಿಸದೆ ಇರಲು ಕಾರಣ ನೀಡುವುದನ್ನು ನಿಯಮಗಳು ಕಡ್ಡಾಯಗೊಳಿಸಿಲ್ಲ. ಜೊತೆಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸುಮಾರು 65 ಲಕ್ಷ ಮತದಾರರ ವಿವರವಾದ ಬೂತ್‌ವಾರು ಮಾಹಿತಿ ನೀಡಲಾಗಿದೆ ಎಂದು ಇಸಿಐ ಹೇಳಿದೆ.
Election Commission of India
Election Commission of India
Published on

ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ಪ್ರತ್ಯೇಕ ವಿವರ ಸಿದ್ಧಪಡಿಸಲು ಅಥವಾ ಹೊರಗುಳಿಯುವುದಕ್ಕೆ ಕಾರಣ ಒದಗಿಸಬೇಕು ಎಂಬ ಯಾವುದೇ ಕಾನೂನು ಇಲ್ಲ ಎಂದು ಬಿಹಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ)  ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 65 ಲಕ್ಷ ಮಂದಿಯ ಹೆಸರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಈ ಹಿಂದೆ ಸುಪ್ರೀಂ ಕೋರ್ಟ್‌ ಇಸಿಐಗೆ ಸೂಚಿಸಿತ್ತು. ಈ ಸಂಬಂದ ಪ್ರತಿಕ್ರಿಯೆ ನೀಡಿರುವ ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರು  1950ರ ಪ್ರಜಾಪ್ರತಿನಿಧಿ ಕಾಯಿದೆ ಮತ್ತು 1960ರ ಮತದಾರರ ನೋಂದಣಿ ನಿಯಮಾವಳಿಗಳಲ್ಲಿ ಪ್ರಕಾರ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದವರ ಪ್ರತ್ಯೇಕ ಪಟ್ಟಿ ಸಿದ್ಧಪಡಿಸುವ ಅಥವಾ ಹಂಚಿಕೊಳ್ಳುವ ಅಥವಾ ಅದಕ್ಕೆ ಕಾರಣಗಳನ್ನು ಇಸಿಐ ನೀಡುವ ಅಗತ್ಯವಿಲ್ಲ ಎಂದರು.

Also Read
ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ಹೊರಕ್ಕೆ: ಇಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಆಗಸ್ಟ್ 1ರಂದು ಪ್ರಕಟವಾದ ಕರಡು ಪಟ್ಟಿಯಲ್ಲಿ ಗಣತಿ ನಮೂನೆಗಳನ್ನು ಸ್ವೀಕರಿಸಿದ ಎಲ್ಲರ ಹೆಸರುಗಳಿವೆ ಎಂದು ಆಯೋಗ ಹೇಳಿದೆ. ಪಟ್ಟಿಯಲ್ಲಿ ಹೆಸರು ಇಲ್ಲದವರು ಸೆಪ್ಟೆಂಬರ್ 1ರೊಳಗೆ ನಿಗದಿತ ಘೋಷಣೆಯೊಂದಿಗೆ ನಮೂನೆ 6ರಡಿ ಅರ್ಜಿ ಸಲ್ಲಿಸಬಹುದು, ನಂತರ ಚುನಾವಣಾ ನೋಂದಣಿ ಅಧಿಕಾರಿಗಳು ವಿಚಾರಣೆ ನಡೆಸಿ ಸೇರ್ಪಡೆಗೆ ವಿವಾದವಿರುವ ಸಂದರ್ಭಗಳಲ್ಲಿ ಕಾರಣಗಳನ್ನು ನೀಡಬೇಕು ಎಂದು ಅದು ವಿವರಿಸಿದೆ.

ಜೊತೆಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸುಮಾರು 65 ಲಕ್ಷ ಮತದಾರರ ವಿವರವಾದ ಬೂತ್‌ವಾರು ಮಾಹಿತಿ ನೀಡಲಾಗಿದೆ ಎಂದು ಇಸಿಐ ಹೇಳಿದೆ.

ಬಿಹಾರದಲ್ಲಿ ಎಸ್‌ಐಆರ್‌ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಮತದಾರರ ಪಟ್ಟಿಯಿಂದ ತೆಗೆದುಹಾಕಲಾದವರ ವಿವರಗಳನ್ನು ಪ್ರಕಟಿಸುತ್ತಿದ್ದ ಈ  ಹಿಂದಿನ ಪದ್ಧತಿಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ ಎಂದು ಎಡಿಆರ್ ದೂರಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದುಹಾಕಿದವರ ಅಥವಾ ಸೇರ್ಪಡೆ ಮಾಡಿದವರ ಸಂಖ್ಯೆಯನ್ನು ಸಹ ಒದಗಿಸಲಾಗಿಲ್ಲ ಎಂದಿತ್ತು.

ಆದರೆ ಆರೋಪಗಳನ್ನು ನಿರಾಕರಿಸಿರುವ ಚುನಾವಣಾ ಆಯೋಗ ಅರ್ಜಿದಾರರ ಹೇಳಿಕೆ ಅತ್ಯಂತ ಸುಳ್ಳು ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ ಎಂದಿದೆ. ನ್ಯಾಯಾಲಯವನ್ನು ದಾರಿತಪ್ಪಿಸುವ ಉದ್ದೇಶದಿಂದ ಸುಳ್ಳು ಹೇಳಿಕೆ ನೀಡಿರುವುದರಿಂದ ಅರ್ಜಿಯನ್ನು ವಜಾಗೊಳಿಸಿ ದಂಡ ವಿಧಿಸಬೇಕು. ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ಹೂಡಬೇಕು ಎಂದು ಇಸಿಐ ನ್ಯಾಯಾಲಯವನ್ನು ಕೋರಿದೆ.

Also Read
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಆಧಾರ್ ಪರಿಗಣಿಸುವಂತೆ ಸುಪ್ರೀಂ ಸಲಹೆ

ಅಲ್ಲದೆ ಪೂರ್ವ ಸೂಚನೆ, ವಿಚಾರಣೆಗೆ ಅವಕಾಶ ಮತ್ತು ಸಕ್ಷಮ ಪ್ರಾಧಿಕಾರದಿಂದ ಸಮಂಜಸ ಆದೇಶವಿಲ್ಲದೆ ಬಿಹಾರದ ಕರಡು ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ಕೈಬಿಡುವುದಿಲ್ಲ ಎಂದು ಇಸಿಐ  ಪ್ರತ್ಯೇಕ ಅಫಿಡವಿಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಜುಲೈ 10ರಂದು, ಸುಪ್ರೀಂ ಕೋರ್ಟ್ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆ ನೀಡಲು ನಿರಾಕರಿಸಿತಾದರೂ ಆಧಾರ್, ಇಪಿಐಸಿ ಮತ್ತು ಪಡಿತರ ಚೀಟಿಯನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸುವಂತೆ ಇಸಿಐಗೆ ಸೂಚಿಸಿತ್ತು. ಈ ಪ್ರಕರಣದ ವಿಚಾರಣೆ ಆಗಸ್ಟ್ 12 ಮತ್ತು 13ರಂದು ನಡೆಯಲಿದೆ.

Kannada Bar & Bench
kannada.barandbench.com