

ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ದುರುಪಯೋಗಪಡಿಸಿಕೊಂಡರೆ ₹5 ಕೋಟಿ ವರೆಗೆ ದಂಡ ವಿಧಿಸುವ ಪ್ರಸ್ತಾಪವನೆ ಇರುವ ಖಾಸಗಿ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಅನಧಿಕೃತ ಎಐ ಆಧಾರಿತ ನಿಗಾವ್ಯವಸ್ಥೆ, ತಾರತಮ್ಯಯುಕ್ತ ಆಲ್ಗರಿದಮ್ ಆಧಾರಿತ ನಿರ್ಧಾರಕ್ಕೆ ತಡೆ ಹಾಗೂ ಎಐ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದೆ ಹೋದರೆ ದಂಡ ವಿಧಿಸುವ ಪ್ರಸ್ತಾವನೆ ಬಿಜೆಪಿ ಸಂಸದೆ ಭಾರತಿ ಪಾರ್ಧಿ ಮಂಡಿಸಿದ ಮಸೂದೆಯಲ್ಲಿದೆ.
ಕೇಂದ್ರ ಸರ್ಕಾರ ಕೃತಕ ಬುದ್ಧಿಮತ್ತೆಗಾಗಿ ನೈತಿಕ ಸಮಿತಿ ಸ್ಥಾಪಿಸಬೇಕೆಂಬ ಅಂಶ ಮಸೂದೆಯಲ್ಲಿದ್ದು ಸಮಿತಿಯಲ್ಲಿ ಕಾನೂನು ತಂತ್ರಜ್ಞಾನ, ದತ್ತಾಂಶ ವಿಜ್ಞಾನ, ಮಾನವ ಹಕ್ಕು, ಶಿಕ್ಷಣ, ಕೈಗಾರಿಕೆ ಹಾಗೂ ನಾಗರಿಕ ಸಮಾಜದ ತಜ್ಞರು ಇರಬೇಕು ಎಂದಿದೆ.
ಎಐಗೆ ಸಂಬಂಧಿಸಿದ ನೈತಿಕ ಮಾರ್ಗಸೂಚಿಗಳನ್ನು ರೂಪಿಸುವುದು, ನಿಯಮ ಪಾಲನೆ ಮೇಲ್ವಿಚಾರಣೆ, ದುರುಪಯೋಗ ಮತ್ತು ಪಕ್ಷಪಾತದ ಪ್ರಕರಣಗಳ ಪರಿಶೀಲನೆ ಜಾಗೃತಿ ಮತ್ತು ಹೊಣೆಗಾರಿಕೆಗೆ ಉತ್ತೇಜನ ನೀಡುವುದು ನೈತಿಕ ಸಮಿತಿಯ ಜವಾಬ್ದಾರಿ ಎಂದು ಮಸೂದೆ ತಿಳಿಸಿದೆ.
ಕಾನೂನುಬದ್ಧ ಉದ್ದೇಶಗಳಿಗೆ ಮಾತ್ರ ಎಐ ಆಧಾರಿತ ನಿಗಾ ವ್ಯವಸ್ಥೆ ಇರಬೇಕು. ಅಲ್ಲದೆ ಕಾನೂನು ಜಾರಿ, ಉದ್ಯೋಗ ಮತ್ತು ಹಣಕಾಸು ನಿರ್ಧಾರಗಳಂತಹ ಸಂವೇದನಾಶೀಲ ಕ್ಷೇತ್ರಗಳಲ್ಲಿ ಬಳಸುವ ಎಐ ವ್ಯವಸ್ಥೆಗಳು ನೈತಿಕ ಪರಿಶೀಲನೆಗೆ ಒಳಪಟ್ಟಿರಬೇಕು ಎಂದು ಅದು ವಿವರಿಸಿದೆ.
ಅಲ್ಲದೆ ಎಐ ಅಭಿವೃದ್ಧಿಪಡಿಸುವವರು ಮತ್ತು ಅದರ ಬಳಕೆದಾರರು ಪಾರದರ್ಶಕ ನಿರ್ಧಾರ ಪ್ರಕ್ರಿಯೆ ಖಾತ್ರಿಪಡಿಸಬೇಕು. ಆಲ್ಗರಿದಮ್ ಪಕ್ಷಪಾತ ಮತ್ತು ತಾರತಮ್ಯವನ್ನು ತಪ್ಪಿಸಬೇಕು. ಎಐ ವ್ಯವಸ್ಥೆಯನ್ನು ಆಗಿಂದಾಗ್ಗೆ ತಪಾಸಣೆ ನಡೆಸುತ್ತಿರಬೇಕು. ಜೊತೆಗೆ ಎಐ ದುರುಪಯೋಗಕ್ಕೆ ತುತ್ತಾದವರು ನೈತಿಕ ಸಮಿತಿಗೆ ದೂರು ಸಲ್ಲಿಸುವ ಹಕ್ಕು ಹೊಂದಿರಬೇಕು ಎಂದು ಮಸೂದೆ ಹೇಳಿದೆ.
ಸರ್ಕಾರದ ಸಚಿವರಲ್ಲದ; ಸಂಸದರು ಮಂಡಿಸುವ ಖಾಸಗಿ ಮಸೂದೆಗಳು ಕಾಯಿದೆಯಾಗುವುದು ವಿರಳವಾದರೂ ಸರ್ಕಾರ ಗಮನಿಸದೆ ಇರುವ ಅಂಶಗಳತ್ತ ಗಮನ ಸೆಳೆದು ಸರ್ಕಾರವೇ ನಿರ್ದಿಷ್ಟ ವಿಷಯದ ಕುರಿತು ಖುದ್ದು ಕಾಯಿದೆ ರೂಪುಗೊಳ್ಳುವಂತೆ ಮಾಡುತ್ತವೆ.