ನೋಂದಣಿಯಾಗದ ಅಥವಾ ಕಾನೂನು ಪ್ರಕಾರ ಅಮಾನ್ಯವಾದ ಮದುವೆಯಿಂದ ಜನಿಸಿದ ಮಕ್ಕಳು ಎಂಬ ಕಾರಣಕ್ಕೆಅಂತಹ ಮಕ್ಕಳ ಜನನ ನೋಂದಣಿ ನಿರಾಕರಿಸುವಂತಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಕಾನೂನಿನ ಮಾನ್ಯತೆ ಇರದ ಸಂಬಂಧದಿಂದ ಉಂಟಾದ ಮಕ್ಕಳ ಜನನವನ್ನು ಅಂತಹ ಸಂಬಂಧದಿಂದ ಸ್ವತಂತ್ರವಾಗಿ ಪರಿಗಣಿಸಬೇಕಾಗುತ್ತದೆ. ಹಾಗೆ ಜನಿಸಿದ ಮಗು ಉಳಿದ ಮಕ್ಕಳಿಗೆ ದೊರೆಯುವ ಎಲ್ಲಾ ಹಕ್ಕುಗಳನ್ನು ಪಡೆಯಲು ಅರ್ಹವಾಗಿದೆ ಇದು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 16(3)ರ ತಿದ್ದುಪಡಿಯ ತಿರುಳಾಗಿದೆ ಎಂದು ಅಕ್ಟೋಬರ್ 17ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
ಅಂತಹ ಮಕ್ಕಳು ಜೀವಂತ ಇರುವವರಾಗಿದ್ದು ಅವರನ್ನು ಕಾನೂನಿನಡಿ ಸ್ವೀಕರಿಸಬೇಕಿದೆ ಎಂದು ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಲ್ ದುವಾ ಅವರು ತಿಳಿಸಿದರು.
ತನ್ನ ಮೂವರು ಅಪ್ರಾಪ್ತ ಮಕ್ಕಳ ಪರವಾಗಿ ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮಕ್ಕಳ ಪೋಷಕರ ನಡುವೆ 2011 ರಲ್ಲಿ ವಿವಾಹ ನಿಶ್ಚಯವಾಗಿದ್ದು, ಅಂದಿನಿಂದ ದಂಪತಿಗಳು ಪತಿ-ಪತ್ನಿಯಾಗಿ ಜೀವನ ನಡೆಸುತ್ತಿದ್ದರು. ಪತಿ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಇದ್ದುದರಿಂದ ಎರಡನೇ ವಿವಾಹ ನೋಂದಣಿ ಸಾಧ್ಯವಾಗಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮೊದಲ ಪತ್ನಿ ಎರಡನೇ ಮದುವೆಯಾಗಲು ತನ್ನ ಪತಿಗೆ ಅನುಮತಿ ನೀಡಿದ್ದರು
ಆದರೆ ವ್ಯಕ್ತಿಯು ಇನ್ನೊಬ್ಬ ಜೀವಂತ ಸಂಗಾತಿಯನ್ನು ಹೊಂದಿರುವುದು 1954ರ ವಿಶೇಷ ವಿವಾಹ ಕಾಯಿದೆಯ ಸೆಕ್ಷನ್ 4(ಎ) ಅನ್ನು ಉಲ್ಲಂಘಿಸುವುದರಿಂದ ಎರಡನೇ ಮದುವೆಯನ್ನು ಕಾನೂನುಬದ್ಧವಾಗಿ ಮಾನ್ಯ ಅಲ್ಲ.
ಮದುವೆ ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ ಅಥವಾ ನೋಂದಾಯಿಸಲಾಗಿಲ್ಲವಾದ್ದರಿಂದ, ಎರಡನೇ ಮದುವೆಯಿಂದ ಜನಿಸಿದ ಮಕ್ಕಳ ಜನನವನ್ನು ಪಂಚಾಯತ್ ದಾಖಲೆಗಳಲ್ಲಿ, ಅಂದರೆ ಜನನ ನೋಂದಣಿ ಮತ್ತು ಪರಿವಾರ್ (ಕುಟುಂಬ) ನೋಂದಣಿಯಲ್ಲಿ ನೋಂದಾಯಿಸಲು ಸರ್ಕಾರಿ ಅಧಿಕಾರಿಗಳು ನಿರಾಕರಿಸಿದ್ದರು.
ಆದರೆ, ಪಂಚಾಯತ್ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯ ಒಪ್ಪಲ್ಲ ಅಮಾನ್ಯ ವಿವಾಹದಿಂದ ಮಕ್ಕಳಿಗೆ ಕಾನೂನಿನಲ್ಲಿ ಮಾನ್ಯತೆ ನಿರಾಕರಿಸಲಾಗುವುದಿಲ್ಲ. ಮದುವೆ ಅನೂರ್ಜಿತವಾಗಿದ್ದರೂ, ಅಂತಹ ಮದುವೆಯಿಂದ ಜನಿಸಿದ ಮಗುವನ್ನು ಕಾನೂನುಬದ್ಧವಾಗಿ ಪರಿಗಣಿಸಬೇಕು ಎಂದು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 16 (3) ರಲ್ಲೂ ಹೇಳಲಾಗಿದೆ ಎಂಬುದಾಗಿ ನ್ಯಾಯಾಲಯ ವಿವರಿಸಿತು.
ಗಮನಾರ್ಹವಾಗಿ ಮೊದಲ ಪತ್ನಿ ತನ್ನ ಗಂಡನ ಎರಡನೇ ವಿವಾಹದಿಂದ ಜನಿಸಿದ ಮಕ್ಕಳ ಹೆಸರನ್ನು ಜನನ ಇಲ್ಲವೇ ಕುಟುಂಬದ ದಾಖಲೆಗಳಲ್ಲಿ ನೋಂದಾಯಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹೆಸರನ್ನು ಪಂಚಾಯಿತಿ ದಾಖಲೆಗಳಲ್ಲಿ ನಮೂದಿಸಬೇಕು ಎಂದು ನ್ಯಾಯಾಲಯ ಹೇಳಿತು.