ʼಜನ ಗಣ ಮನʼದಂತೆಯೇ ʼವಂದೇ ಮಾತರಂʼಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
‘ವಂದೇ ಮಾತರಂ ಗೀತೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿದ್ದು ಅದನ್ನು ಗೌರವಿಸಬೇಕು ಮತ್ತು ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ನೀಡಬೇಕು ಎಂದು ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದಾರೆ.
ವಂದೇ ಮಾತರಂಗೆ ಸಮಾನ ಸ್ಥಾನಮಾನ ನೀಡುವುದಕ್ಕೆ ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರ ಹೇಳಿಕೆ ಸ್ಪೂರ್ತಿ ಎಂದು ಅವರು ಹೇಳಿದ್ದಾರೆ.
ಪ್ರತಿ ಕೆಲಸದ ದಿನದಂದು ಎಲ್ಲಾ ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಗೀತೆ ಮತ್ತು 'ವಂದೇ ಮಾತರಂ' ಎರಡನ್ನೂ ನುಡಿಸುವಂತೆ ಮತ್ತು ಹಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೋಡಕೊಳ್ಳಬೇಕು ಎಂದು ಕೋರಲಾಗಿದೆ.
ಅರ್ಜಿಯ ಪ್ರಮುಖಾಂಶಗಳು
ಜನ ಗಣ ಮನದಲ್ಲಿ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ. ಆದರೆ, 'ವಂದೇ ಮಾತರಂ' ನಲ್ಲಿ ವ್ಯಕ್ತಪಡಿಸಿದ ಭಾವನೆಗಳು ರಾಷ್ಟ್ರದ ಸ್ವರೂಪ ಮತ್ತು ಶೈಲಿಯನ್ನು ಸೂಚಿಸುವುದರಿಂದ ಅದಕ್ಕೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಬೇಕು.
'ವಂದೇ ಮಾತರಂ' ಭಾರತದ ಇತಿಹಾಸ, ಸಾರ್ವಭೌಮತೆ, ಏಕತೆ ಮತ್ತು ಹೆಮ್ಮೆಯ ಸಂಕೇತವಾಗಿದ್ದು ಯಾವುದೇ ನಾಗರಿಕರು ಗುಟ್ಟಾಗಿ ಇಲ್ಲವೇ ಬಹಿರಂಗವಾಗಿ ಅಗೌರವ ತೋರಿದರೆ ಅದು ಸಮಾಜ ವಿರೋಧಿ ಚಟುವಟಿಕೆ ಮಾತ್ರವಲ್ಲದೆ ನಮ್ಮೆಲ್ಲಾ ಹಕ್ಕು ಮತ್ತು ಅಸ್ತಿತ್ವಕ್ಕೆ ವಿನಾಶಕಾರಿಯಾಗುತ್ತದೆ .
ಆದ್ದರಿಂದ ಪ್ರತಿಯೊಬ್ಬ ನಾಗರಿಕ ಕೂಡ ಅಂತಹ ಯಾವುದೇ ಚಟುವಟಿಕೆಗಳಿಂದ ದೂರವಿರುವುದಷ್ಟೇ ಅಲ್ಲದೆ ಯಾವುದೇ ಕಿಡಿಗೇಡಿಗಳು ‘ವಂದೇಮಾತರಂʼ ಗೆ ಅಗೌರವ ತೋರಿದರೆ ಅದನ್ನು ತಡೆಯಲು ಕೈಲಾದಷ್ಟು ಪ್ರಯತ್ನಿಸಬೇಕು.
ನಾವು ನಮ್ಮ ರಾಷ್ಟ್ರ, ನಮ್ಮ ಸಂವಿಧಾನ, ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಬಗ್ಗೆ ಹೆಮ್ಮೆ ಪಡಬೇಕು. ವೈಯಕ್ತಿಕ ಹಿತಾಸಕ್ತಿಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾದಾಗ ಮಾತ್ರ ನಾವು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಸಾಧ್ಯ.
‘ವಂದೇಮಾತರಂʼಗೆ ಪ್ರೋತ್ಸಾಹ ಮತ್ತು ಪ್ರಚಾರ ನೀಡಲು ರಾಷ್ಟ್ರೀಯ ನೀತಿ ರೂಪಿಸುವುದು ಕಾರ್ಯಾಂಗದ ಕರ್ತವ್ಯ,.