

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಇತರೆ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯವು ಉಪನಿಷತ್, ರಾಜಧರ್ಮ, ತಪ್ಪಿತಸ್ಥಿತ ಪೊಲೀಸರ ವಿರುದ್ಧ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು 623 ಪುಟದ ಸುದೀರ್ಘ ತೀರ್ಪನ್ನು ಪ್ರಕಟಿಸಿದ್ದು, ದಿವಂಗತ ನಿವೃತ್ತ ನ್ಯಾಯಮೂರ್ತಿ ಎಂ ರಾಮಾ ಜೋಯಿಷ್ ಅವರ ʼರಾಜಧರ್ಮʼ ಕೃತಿಯಲ್ಲಿನ ನೈತಿಕತೆಯ ಕುರಿತು ಪ್ರಸ್ತಾಪಿಸಿದ್ದಾರೆ.
“ಕಾನೂನನ್ನು ಧರ್ಮ ಎಂದು ಬಣ್ಣಿಸಲಾಗಿದೆ. ಕಾನೂನು ಧರ್ಮವಾಗಿಯೂ, ಧರ್ಮವನ್ನು ರಾಜನನ್ನಾಗಿಯೂ, ರಾಜನಾದವನು ಅಶಕ್ತರನ್ನು ಬಲಾಢ್ಯರಿಂದ ರಕ್ಷಿಸಬೇಕು ಎಂದು ನಾಗರಿಕ ಸಮಾಜ ಬಯಸುತ್ತದೆ" ಎಂಬ ಉಪನಿಷತ್‌ನ ಸುಪ್ರಸಿದ್ಧ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮತ್ತು ಪಂಜಾಬ್ ಮತ್ತು ಹರಿಯಾಣದ ಮಾಜಿ ರಾಜ್ಯಪಾಲರಾದ ರಾಮಾ ಜೋಯಿಸ್ ಅವರ ʼರಾಜಧರ್ಮʼ ಪುಸ್ತಕದಲ್ಲಿನ “ಧರ್ಮ ರಕ್ಷಣೆ ಮಾಡುವವರನ್ನು ರಕ್ಷಿಸುತ್ತದೆ, ನಾಶ ಮಾಡುವವರನ್ನು ನಾಶ ಮಾಡುತ್ತದೆ” ಎಂದು ವಿಚಾರವನ್ನು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
“ಶಾಸಕನೊಬ್ಬ ಅಧಿಕಾರದಲ್ಲಿದ್ದಾಗ ಕೊಲೆ ಮಾಡಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಸಮಾಜ ತನ್ನ ಪ್ರತಿನಿಧಿಯಿಂದ ಸಮಾಜ ಸುಧಾರಿಸಬೇಕು ಎಂದು ಬಯಸುತ್ತದೆ. ಜನರ ಕಲ್ಯಾಣ ಮತ್ತು ಕಾನೂನು ರೂಪಿಸುವ ಪರಮಾಧಿಕಾರ ಶಾಸಕಾಂಗಕ್ಕೆ ಇರುತ್ತದೆ, ಶಾಸಕಾಂಗದ ಭಾಗವಾಗಿರುವ ಶಾಸಕರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ” ಎಂದು ನ್ಯಾಯಾಧೀಶರು ತಿಳಿಸಿದ್ದರು.
ಇನ್ನು, ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರ ಬಗ್ಗೆ ನ್ಯಾಯಾಲಯವು ತೀವ್ರ ಅತೃಪ್ತಿ ದಾಖಲಿಸಿದೆ. “ದೇಶದಲ್ಲೇ ದಕ್ಷತೆಗೆ ಹೆಸರಾದ ಕರ್ನಾಟಕ ಪೊಲೀಸ್ ಇಲಾಖೆ, ಯೋಗೀಶ್ ಗೌಡ ಪ್ರಕರಣದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ. ಪ್ರಮಾಣವಚನ ಸ್ವೀಕರಿಸಿಯೂ ಸುಳ್ಳು ಹೇಳಿಕೆ ಪೊಲೀಸ್ ಅಧಿಕಾರಿಗಳು ಸುಳ್ಳು ಸಾಕ್ಷಿ ನುಡಿದಿದ್ದಾರೆ. ಶೌರ್ಯ ಮತ್ತು ಧೈರ್ಯಕ್ಕೆ ಹೆಸರಾದ ಕರ್ನಾಟಕ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ನ್ಯಾಯಾಲಯದ ಎದುರು ಬಹಿರಂಗವಾಗಿಯೇ ಸುಳ್ಳು ಹೇಳಿಕೆ ನೀಡಿದ್ದು, ಅದನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಧರ್ಮ ರಕ್ಷಕನನ್ನು ಧರ್ಮ ಧ್ವಂಸಕರಿಂದ ಧರ್ಮ (ಕಾನೂನು) ರಕ್ಷಿಸುತ್ತದೆ. ಆದ್ದರಿಂದ ಧರ್ಮ ನಾಶವಾಗಕೂಡದು” ಎಂದಿದೆ.
“ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ಒಪ್ಪಿಕೊಂಡಿದ್ದ ಪೊಲೀಸ್ ಅಧಿಕಾರಿಗಳ ಕ್ರಮಕ್ಕೆ ನ್ಯಾಯಾಲಯವು ಕಟು ಟೀಕೆ ಮಾಡಿದೆ. ಪೊಲೀಸ್ ಅಧಿಕಾರಿಗಳ ಇಂತಹ ಕೃತ್ಯವು ನ್ಯಾಯ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ನಿರಂತರವಾಗಿ ಕುಗ್ಗಿಸಲಿದೆ. ರಾಷ್ಟ್ರಮಟ್ಟದಲ್ಲಿ ಹೆಚ್ಚು ಸಮರ್ಥ ಮತ್ತು ದಕ್ಷ ಎಂದು ಗುರುತಿಸಲ್ಪಟ್ಟ ರಾಜ್ಯದ ಪೊಲೀಸರೇ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಮೂವರು ಪೊಲೀಸ್ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ ಮತ್ತು ಶಂಕರಗೌಡ ಬಸನಗೌಡ ಪಾಟೀಲ್ ವಿರುದ್ಧ ಸುಳ್ಳು ಸಾಕ್ಷ್ಯಾಧಾರದ ಪ್ರಕರಣ ದಾಖಲಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
“ಮೂವರು ಅಧಿಕಾರಿಗಳು ಸಿಆರ್ಪಿಸಿ ಸೆಕ್ಷನ್ 164ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಿರುವುದು ಹಾಗೂ ವಿಚಾರಣೆ ವೇಳೆ ಹೇಳಿರುವ ಅಂಶಗಳು ವಿಭಿನ್ನವಾಗಿವೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ಒತ್ತಡ ಹೇರಿದ್ದರು ಎಂಬುದಾಗಿ ತಿಳಿಸಿದ್ದಾರೆ. ಆದರೆ, ವಿದ್ಯಾವಂತರಾಗಿರುವ ಈ ಮೂವರು ಪೊಲೀಸರು ಸಿಬಿಐ ಅಧಿಕಾರಿಗಳು ಒತ್ತಡ ಹೇರಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಹಿರಿಯ ಅಧಿಕಾರಿಗಳು ಇಲ್ಲವೇ, ನ್ಯಾಯಾಲಯದ ಮುಂದೆ ದೂರು ಸಲ್ಲಿಸುವುದಕ್ಕೆ ಮುಂದಾಗಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
“ತಪ್ಪಿತಸ್ಥ ಅಧಿಕಾರಿಗಳು ನ್ಯಾಯಾಂಗ ವ್ಯವಸ್ಥೆಯನ್ನು ಅತ್ಯಂತ ಹಗುರವಾಗಿ ಪರಿಗಣಿಸಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಪ್ರಮಾಣ ಮಾಡಿ ಸುಳ್ಳು ಸಾಕ್ಷ್ಯ ನುಡಿದಿದ್ದಾರೆ. ಅತ್ಯಂತ ಅಜಾಗರೂಕತೆಯಿಂದ ನಡೆದುಕೊಂಡಿದ್ದಾರೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.
ಯೋಗೀಶ್ ಗೌಡರನ್ನು ಕೊಲೆ ಮಾಡುವುದಕ್ಕಾಗಿ ಬೆಂಗಳೂರು ಬಾಯ್ಸ್ ಎಂಬ ಗುಂಪನ್ನು ರಚನೆ ಮಾಡಿ 20 ಲಕ್ಷ ರೂಪಾಯಿಯನ್ನು ಪಾವತಿಸಲಾಗಿತ್ತು. ಕೊಲೆ ಆರೋಪಿಗಳು ಎಂಬುದಾಗಿ ಮತ್ತೊಂದು ಗುಂಪು ರಚನೆ ಮಾಡಿ 6 ಲಕ್ಷ ರೂಪಾಯಿ ಪಾವತಿಸಿ, ಕೊಲೆ ಪ್ರಕರಣದಲ್ಲಿ ಶರಣಾಗುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ, ಕೊಲೆ ನಡೆಯಲಿದೆ ಎಂಬುದಾಗಿ ಯೋಗೀಶ್ ಗೌಡ ಮನೆಗೆ ಅನಾಮಧೇಯ ಪತ್ರ ಬಂದಿತ್ತು. ಈ ಪತ್ರವನ್ನು ಮೊದಲ ಆರೋಪಿ ಬಸವರಾಜ ಮುತ್ತಗಿಯೇ ಬರೆದ್ದರೂ ಎಂದು ಅವರು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿರುವ ಸಂಬಂಧ ಆದೇಶದಲ್ಲಿ ಹೇಳಲಾಗಿದೆ.
ಪ್ರಕರಣ ಸಂಬಂಧ ತನಿಖಾಧಿಕಾರಿಯಾಗಿರುವ ಚನ್ನಕೇಶವ ಟಿಂಗರಿಕರ್ ಅವರು ಆರೋಪಿ ವಿನಯ್ ಕುಲಕರ್ಣಿ ಅವರೊಂದಿಗೆ ಕೈಜೋಡಿಸಿ ನಡೆಸಿರುವ ಪಿತೂರಿಯ ಭಾಗವಾಗಿದ್ದು, ದೋಷಪೂರಿತ ತನಿಖೆ ನಡೆಸಲಾಗಿದೆ. ಯೋಗೀಶ್ ಗೌಡ ಕೊಲೆಗೂ ಮುನ್ನ ವಿನಯ್ ಕುಲಕರ್ಣಿ ಅವರ ಡೇರಿ ಫಾರ್ಮ್ನಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಅಂದಿನ ಹಿರಿಯ ಪೊಲೀಸ್ ಅಧಿಕಾರಿಗಳು (ಪೊಲೀಸ್ ಆಯುಕ್ತ, ಸಹಾಯಕ ಆಯುಕ್ತರು, ತನಿಖಾಧಿಕಾರಿ ಟಿಂಗರಿಕರ್) ಭಾಗಿಯಾಗಿದ್ದರು ಎಂಬ ಅಂಶ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದ ಬಸವರಾಜ ಮುತ್ತಗಿ ವಿವರಿಸಿದ್ದಾರೆ. ಅಲ್ಲದೆ, ತನಿಖಾಧಿಕಾರಿಯಾಗಿದ್ದ ಟಿಂಗರಿಕರ್, ಆರೋಪಿಯೊಂದಿಗೆ ಸೇರಿ ಅವರನ್ನು ಆರೋಪ ಮುಕ್ತರನ್ನಾಗಿ ಮಾಡುವುದಕ್ಕಾಗಿ ತನಿಖೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಒಂದು ರಾಜಕೀಯ ಪಕ್ಷದಲ್ಲಿರುವ ವಿನಯ್ ಕುಲಕರ್ಣಿ, ತಮ್ಮ ರಾಜಕೀಯ ಎದುರಾಳಿ ವಿರುದ್ಧ ದ್ವೇಷ ಸಾಧಿಸುವ ಭಯಾನಕ ಕೃತ್ಯ ಎಸಗಿರುವುದರಿಂದ ಪ್ರಕರಣದ ಗಂಭೀರತೆ ಹೆಚ್ಚಾಗಿದೆ. ಇದು ಆಕಸ್ಮಿಕವಾಗಿ ನಡೆದ ಕೃತ್ಯವಲ್ಲ. ಬದಲಿಗೆ ಕಾನೂನು ಜಾರಿ ಸಂಸ್ಥೆಯ ಬೆಂಬಲದಿಂದ ಮಾಡಿರುವ ಕ್ರೂರ ಕೃತ್ಯವಾಗಿದೆ. ಅಪರಾಧಿಗಳ ವಿರುದ್ಧ ಮೃದು ಧೋರಣೆ ಅನುಸರಿಸಬೇಕಾದರೂ ಇದು ನಂಬಿಕೆಯನ್ನು ಕುಗ್ಗಿಸಿ, ಸಮಾಜದ ಮೇಲೆ ಪರಿಣಾಮ ಬೀರುವ ಭಯಾನಕ ಅಪರಾಧಗಳನ್ನು ಉದಾರವಾಗಿ ನಿರ್ವಹಿಸಲಾಗುತ್ತದೆ ಎಂಬ ತೀರ್ಮಾನಕ್ಕೆ ಬರಬಹುದು ಎಂದು ನ್ಯಾಯಾಲಯ ಒತ್ತಿ ಹೇಳಿದೆ.