ಹಿಂದಿ ಭಾಷಿಕರ ವಿರುದ್ಧ ರಾಜ್‌ ಠಾಕ್ರೆ ದ್ವೇಷ ಭಾಷಣ: ನಿರ್ದಿಷ್ಟ ವಿವರ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ಸೂಚನೆ

ಉತ್ತರ ಭಾರತೀಯರ ವಿರುದ್ಧದ ಅಭಿಯಾನವನ್ನು ತಾವು ವಿರೋಧಿಸಿದ್ದಕ್ಕಾಗಿ ತಮ್ಮನ್ನು ಗುರಿಯಾಗಿಸಲಾಗಿದೆ ಎಂದು ಉತ್ತರ ಭಾರತೀಯ ವಿಕಾಸ್‌ ಸೇನಾ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಸುನೀಲ್‌ ಶುಕ್ಲಾ ಸಲ್ಲಿಸಿದ್ದ ಅರ್ಜಿ ತಿಳಿಸಿತ್ತು.
Raj Thackeray
Raj Thackeray Facebook
Published on

ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮುಖ್ಯಸ್ಥ ರಾಜ್‌ ಠಾಕ್ರೆ ಹಾಗೂ ಪಕ್ಷದ ಕಾರ್ಯಕರ್ತರು ಹಿಂದಿಯೇತರ ಭಾಷಿಕರ ವಿರುದ್ಧ ದ್ವೇಷ ಭಾಷಣ ನಡೆಸಿದ್ದಾರೆ ಎನ್ನಲಾದ ಘಟನೆಗಳ ನಿರ್ದಿಷ್ಟ ವಿವರ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ಗುರುವಾರ ಸೂಚಿಸಿದೆ [ಸುನಿಲ್‌ ಶುಕ್ಲಾ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ “ಉತ್ತರ ಭಾರತೀಯರ ವಿರುದ್ಧದ ಅಭಿಯಾನ”ವನ್ನು ತಾವು ವಿರೋಧಿಸಿದ್ದಕ್ಕಾಗಿ ತಮ್ಮನ್ನು ಗುರಿಯಾಗಿಸಲಾಗಿದೆ ಎಂದು ಉತ್ತರ ಭಾರತೀಯ ವಿಕಾಸ್‌ ಸೇನಾ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಸುನೀಲ್‌ ಶುಕ್ಲಾ ಸಲ್ಲಿಸಿದ್ದ ಅರ್ಜಿ ತಿಳಿಸಿತ್ತು.

Also Read
ಸನಾತನ ಧರ್ಮ ಕುರಿತ ಉದಯನಿಧಿ ಭಾಷಣ ನರಮೇಧದ ಸೂಚಕ ಎಂದ ಮದ್ರಾಸ್‌ ಹೈಕೋರ್ಟ್; ಮಾಳವಿಯಾ ವಿರುದ್ಧದ ಎಫ್‌ಐಆರ್‌ ರದ್ದು

ನಡೆದಿದೆ ಎನ್ನಲಾದ ಘಟನೆಗಳ ಕುರಿತು ಹೆಚ್ಚಿನ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್‌ ಮತ್ತು ನ್ಯಾ. ಗೌತಮ್‌ ಅಂಖಾಡ್‌ ಅವರಿದ್ದ ಪೀಠ ವಿಚಾರಣೆ ಮುಂದೂಡಿತು.

2024–25ರಲ್ಲಿ ತಮ್ಮ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಲು ಯತ್ನಿಸಿದ ಘಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹತ್ಯೆ ಬೆದರಿಕೆ ಹಾಕಿದ ಪ್ರಕರಣಗಳನ್ನು ಅರ್ಜಿದಾರರು ಉಲ್ಲೇಖಿಸಿದ್ದರು.

ಟಿವಿ ಚರ್ಚೆಗಳಲ್ಲಿ ಭಾಗವಹಿಸಿದ್ದುದರಿಂದ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಎಂಎನ್‌ಎಸ್ ವಿರುದ್ಧ ಮನವಿ ಸಲ್ಲಿಸಿದ್ದ ಹಿನ್ನೆಲೆ ಬೆದರಿಕೆಗಳು ಹೆಚ್ಚಾದವು. ಗುಡಿ ಪಾಡ್ವಾ ಮೆರವಣಿಗೆ ವೇಳೇ ರಾಜ್ ಠಾಕ್ರೆ ಮಾಡಿದ ಭಾಷಣದ ನಂತರ ಮರಾಠಿ ಮಾತನಾಡದ ಹಿಂದಿ ಭಾಷಿಕ ಸಿಬ್ಬಂದಿ ಗುರಿಯಾಗಿದ್ದು, ಕೆಲವರ ಮೇಲೆ ದಾಳಿ ನಡೆದಿದೆಯೆಂದು ಅವರು ದೂರಿದ್ದರು.

Also Read
ವಾಂಗ್‌ಚುಕ್‌ ಆರೋಗ್ಯ ಚೆನ್ನಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ: ಬಿಡುಗಡೆಗೆ ನಕಾರ

ಮುಖ್ಯಮಂತ್ರಿ, ಡಿಜಿಪಿ, ಮುಂಬೈ ಪೊಲೀಸ್ ಆಯುಕ್ತ, ಭಾರತೀಯ ಚುನಾವಣಾ ಆಯೋಗ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಎಫ್‌ಐಆರ್ ದಾಖಲಿಸದಿರುವುದರಿಂದ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಶುಕ್ಲಾ ವಾದಿಸಿದ್ದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಜನಪ್ರತಿನಿಧಿಗಳ ಕಾಯಿದೆ ಸೆಕ್ಷನ್ 125ನ್ನು ರಾಜ್‌ ಠಾಕ್ರೆ ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.

ರಾಜ್ ಠಾಕ್ರೆ ಮತ್ತು ಬೆದರಿಕೆ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅಪರಾಧ ತನಿಖೆ ನಡೆಸಬೇಕು. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಎಂಎನ್‌ಎಸ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನ್ಯಾಯಾಲಯ ನಿರ್ದೇಶನ ನೀಡಬೇಕು. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ರಾಜ್ ಠಾಕ್ರೆ ಪ್ರಚೋದನಾತ್ಮಕ ಹೇಳಿಕೆ ನೀಡದಂತೆ ತಡೆ ನೀಡಬೇಕು ಎಂದು ಅವರು ಕೋರಿದ್ದರು

Kannada Bar & Bench
kannada.barandbench.com