ಸನಾತನ ಧರ್ಮ ಕುರಿತ ಉದಯನಿಧಿ ಭಾಷಣ ನರಮೇಧದ ಸೂಚಕ ಎಂದ ಮದ್ರಾಸ್‌ ಹೈಕೋರ್ಟ್; ಮಾಳವಿಯಾ ವಿರುದ್ಧದ ಎಫ್‌ಐಆರ್‌ ರದ್ದು

ಮಾಳವೀಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರಶ್ನೆಯ ರೂಪದಲ್ಲಿದ್ದು, ಅದು ಹಿಂಸೆಗೆ ಅಥವಾ ಉದ್ರೇಕಕ್ಕೆ ಕರೆ ನೀಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸನಾತನ ಧರ್ಮ ಕುರಿತ ಉದಯನಿಧಿ ಭಾಷಣ ನರಮೇಧದ ಸೂಚಕ ಎಂದ ಮದ್ರಾಸ್‌ ಹೈಕೋರ್ಟ್; ಮಾಳವಿಯಾ ವಿರುದ್ಧದ ಎಫ್‌ಐಆರ್‌ ರದ್ದು
Published on

ಸನಾತನ ಧರ್ಮವನ್ನು "ನಿರ್ಮೂಲನೆ" ಮಾಡಲು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ನೀಡಿದ ಕರೆಯು ನರಮೇಧಕ್ಕೆ ಕುಮ್ಮಕ್ಕು ನೀಡುವುದಕ್ಕೆ ಸಮ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಸೋಮವಾರ ತಿಳಿಸಿದ್ದು ಇದೇ ವೇಳೆ ಬಿಜೆಪಿ ಐಟಿ ಕೋಶದ ಮುಖ್ಯಸ್ಥ ಅಮಿತ್‌ ಮಾಳವೀಯ ವಿರುದ್ಧದ ಎಫ್‌ಐಆರ್‌ ರದ್ದುಗೊಳಸಿದೆ [ಅಮಿತ್‌ ಮಾಳವೀಯ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸ್ಟಾಲಿನ್ ಅವರ ಭಾಷಣದ ವಿಡಿಯೋವನ್ನು ʼಎಕ್ಸ್’ನಲ್ಲಿ ಹಂಚಿಕೊಂಡಿದ್ದ ಮಾಳವೀಯ ಅವರು ಸನಾತನ ಧರ್ಮ ಪಾಲಿಸುವ ಭಾರತದ ಶೇ 80ರಷ್ಟು ಜನರ ನರಮೇಧಕ್ಕೆ ಕರೆ ನೀಡಿದಂತೆ ಇದೆಯೇ ಈ ಭಾಷಣ? ಎಂದು ಈ ಹಿಂದೆ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಮಾಳವೀಯ ಅವರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ಅನ್ನು ನ್ಯಾ. ಎಸ್‌ ಶ್ರೀಮತಿ ಅವರು ರದ್ದುಪಡಿಸಿದರು.

Also Read
[ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ತಡೆ] ಪಾಕ್‌ ಜಿಂದಾಬಾದ್‌ ಎಂದವರ ವಿರುದ್ಧದ ಪ್ರಕರಣವೇ ವಜಾ: ನ್ಯಾ. ಶ್ರೀಶಾನಂದ

ಸನಾತನ ಧರ್ಮವನ್ನು ಅನುಸರಿಸುವ ಜನರೇ ಇರಬಾರದು ಎಂಬ ಅರ್ಥವಿದ್ದರೆ, ಅದಕ್ಕೆ ಸೂಕ್ತ ಪದ ‘ಜನಾಂಗೀಯ ಹತ್ಯೆ. ಸನಾತನ ಧರ್ಮವು ಒಂದು ಧರ್ಮವಾಗಿದ್ದರೆ, ಅದನ್ನು ‘ಧರ್ಮಹತ್ಯೆʼ ಎನ್ನಬಹುದು. ಇದಲ್ಲದೆ ಪರಿಸರ ನಾಶ, ಸತ್ಯನಾಶ, ಸಂಸ್ಕೃತಿಹತ್ಯೆಮುಂತಾದ ವಿಭಿನ್ನ ವಿಧಾನಗಳ ಮೂಲಕ ಜನರನ್ನು ನಿರ್ಮೂಲನೆ ಮಾಡುವ ಅರ್ಥವನ್ನೂ ಇದು ಒಳಗೊಂಡಿದೆ. ಆದ್ದರಿಂದ ‘ಸನಾತನ ಒಳಿಪ್ಪುʼ ಎಂಬ ಪದಪ್ರಯೋಗ ಸ್ಪಷ್ಟವಾಗಿ ಜನಾಂಗೀಯ ಹತ್ಯೆ ಅಥವಾ ಸಾಂಸ್ಕೃತಿಕ ಹತ್ಯೆಯ ಅರ್ಥ ನೀಡುತ್ತದೆ" ಎಂದು ನ್ಯಾಯಾಲಯ ವ್ಯಾಖ್ಯಾನಿಸಿದೆ.

ಚೆನ್ನೈನ ತೇನಂಪೇಟೆಯಲ್ಲಿ 2023ರ ಸೆಪ್ಟೆಂಬರ್‌ 4ರಂದು ತಮಿಳುನಾಡು ಪ್ರಗತಿಶೀಲ ಬರಹಗಾರರು ಮತ್ತು ಕಲಾವಿದರ ಸಂಘಟನೆ ಆಯೋಜಿಸಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಸನಾತನ ಧರ್ಮವನ್ನು ಡೆಂಘಿ, ಮಲೇರಿಯಾ ಹಾಗೂ ಕೊರೊನಾಕ್ಕೆ ಹೋಲಿಕೆ ಮಾಡಿ ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಹೇಳಿದ್ದರು. “ಸನಾತನ ಧರ್ಮವನ್ನು ವಿರೋಧಿಸಬಾರದು ಅಥವಾ ಎದುರಿಸಬಾರದು; ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಇಲ್ಲವೇ ನಿರ್ಮೂಲನೆ ಮಾಡಬೇಕು,” ಎಂದು ಅವರು ತಮಿಳಿನಲ್ಲಿ ನೀಡಿದ ಭಾಷಣದಲ್ಲಿ ಹೇಳಿದರು. ‘ಸನಾತನ ಒಳಿಪ್ಪುʼ ಎಂಬ ಪದವನ್ನು ಅವರು ಆಗ ಬಳಸಿದ್ದರು.

ಈ ಭಾಷಣದ ವಿಡಿಯೊವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡು, ಸನಾತನ ಧರ್ಮ ಪಾಲಿಸುವ “ಭಾರತದ ಶೇ 80ರಷ್ಟು ಜನರ ಜನಾಂಗ ಹತ್ಯೆಗೆ ಭಾಷಣ ಕರೆ ನೀಡುತ್ತಿದೆಯೇ?” ಎಂದು ಅವರು ಕೇಳಿದ್ದರು. ನಂತರ ಮಾಳವೀಯ ಅವರ ವಿರುದ್ಧ ವಿವಿಧ ಸಮೂಹಗಳ ನಡುವೆ ವೈಷಮ್ಯ ಉಂಟುಮಾಡಿದ ಆರೋಪದಡಿ ಐಪಿಸಿ ಸೆಕ್ಷನ್‌ 153A (ದ್ವೇಷ ಭಾಷಣ) ಮತ್ತು 505 (ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಹೇಳಿಕೆಗಳು) ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಾಳವೀಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಮಾಳವೀಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರಶ್ನೆಯ ರೂಪದಲ್ಲಿದ್ದು, ಅದು ಹಿಂಸೆಗೆ ಅಥವಾ ಉದ್ರೇಕಕ್ಕೆ ಕರೆ ನೀಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಚಿವರ ಭಾಷಣದ ಪರಿಣಾಮಗಳ ಬಗ್ಗೆ ಪ್ರಶ್ನಿಸುವುದನ್ನು ದ್ವೇಷ ಭಾಷಣ ಎಂದು ಪರಿಗಣಿಸಲಾಗುವುದಿಲ್ಲ. ಐಪಿಸಿ ಸೆಕ್ಷನ್‌ 153 ಎ ಮತ್ತು 505 ಅಡಿಯ ಅಪರಾಧ ಅನ್ವಯಿಸಲು ಅಗತ್ಯವಾದ ಪ್ರಜ್ಞಾಪೂರ್ವಕ ತಪ್ಪು ಉದ್ದೇಶವಾಗಲಿ, ಕನಿಷ್ಠ ಎರಡು ಗುರುತಿಸಬಹುದಾದ ಸಮುದಾಯಗಳ ನಡುವೆ ವೈಷಮ್ಯ ಉಂಟುಮಾಡುವ ಅಂಶವಾಗಲಿ ಈ ಪ್ರಕರಣದಲ್ಲಿ ಅವು ಕಂಡುಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

Also Read
ಹದಿಹರಯದ ಪ್ರೇಮ ಸಂಬಂಧಕ್ಕೆ ಪೋಕ್ಸೊ ಕುಣಿಕೆ ತಪ್ಪಿಸಲು ʼರೋಮಿಯೊ ಜ್ಯೂಲಿಯಟ್ ಅನುಚ್ಛೇದʼ ಜಾರಿಗೆ ಬರಲಿ: ಸುಪ್ರೀಂ

ಉದಯನಿಧಿ ಅವರ ಹೇಳಿಕೆ ಸಮರ್ಥಿಸುವುದಕ್ಕಾಗಿ ಗಾಂಧೀಜಿ, ಬುದ್ಧ, ರಾಮಾನುಜಾಚಾರ್ಯ, ವಳ್ಳಲಾರ್, ಕಾಮರಾಜ್ ಮೊದಲಾದವರ ಹೇಳಿಕೆಗಳನ್ನು ರಾಜ್ಯ ಸರ್ಕಾರದ ಪರ ವಕೀಲರು ಉಲ್ಲೇಖಿಸಿದರಾದರೂ ಈ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಇವರು ಯಾರೂ ಸನಾತನ ಧರ್ಮದ ವಿರುದ್ಧ ಮಾತನಾಡಿಲ್ಲ ಎಂದು ಅದು ಹೇಳಿತು.

ದ್ವೇಷ ಭಾಷಣ ಆರಂಭಿಸುವವರ ವಿರುದ್ಧ ಕ್ರಮ ಕೈಗೊಳ್ಳದೆ, ಅದಕ್ಕೆ ಪ್ರತಿಕ್ರಿಯಿಸಿದವರ ಮೇಲೆ ಮಾತ್ರ ಕಾನೂನು ಕ್ರಮ ಜರುಗುತ್ತಿರುವುದು ಕಳವಳಕಾರಿ ಎಂದು ನ್ಯಾಯಾಲಯ ಟೀಕಿಸಿತು. ತನಿಖಾಧಿಕಾರಿಗಳು ರಾಜಕೀಯ ಪಕ್ಷಪಾತ ತೋರಬಾರದು ಎಂದು ಕೂಡ ಅದು ಕಿವಿಮಾತು ಹೇಳಿತು. ಅಂತೆಯೇ ಮಾಳವೀಯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಅದು ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಿತು.

Kannada Bar & Bench
kannada.barandbench.com