

ಪ್ರತ್ಯೇಕ ಲಡಾಖ್ ರಾಜ್ಯ ಪರ ಹೋರಾಟಗಾರ ಹಾಗೂ ಪರಿಸರ ಕಾರ್ಯಕರ್ತ, ಚಿಂತಕ ಸೋನಮ್ ವಾಂಗ್‌ಚುಕ್ ಅವರನ್ನು ಆರೋಗ್ಯ ಕಾರಣಗಳನ್ನು ಆಧರಿಸಿ ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಲೇಹ್ ಆಡಳಿತ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.
ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿರುವ ವೇಳೆ ಅವರ ಆರೋಗ್ಯ ಹದಗೆಟ್ಟಿರುವುದನ್ನು ಪರಿಗಣಿಸಿ ವಾಂಗ್‌ಚುಕ್ ಅವರನ್ನು ಬಂಧನದಲ್ಲಿಡುವ ನಿರ್ಧಾರವನ್ನು ಮರುಪರಿಶೀಲಿಸಲು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠ ಕಳೆದ ವಾರ ಸರ್ಕಾರಕ್ಕೆ ಸೂಚಿಸಿತ್ತು.
ಆದರೆ ವಾಂಗ್‌ಚುಕ್ ಅವರು ಆರೋಗ್ಯವಾಗಿದ್ದು, ಆರೋಗ್ಯ ಕಾರಣಗಳನ್ನು ಆಧರಿಸಿ ಅವರನ್ನು ಬಿಡುಗಡೆ ಮಾಡಲು ಆಗುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ವಾಂಗ್‌ಚುಕ್ ಅವರ ಆರೋಗ್ಯವನ್ನು 24 ಬಾರಿ ಪರಿಶೀಲಿಸಲಾಗಿದ್ದು ಅವರು ಕ್ಷೇಮವಾಗಿದ್ದಾರೆ; ಅವರಿಗೆ ಸಣ್ಣ ಜೀರ್ಣಕ್ರಿಯೆ ಸಮಸ್ಯೆ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ, ಗಂಭೀರ ಸಮಸ್ಯೆಯಿಲ್ಲ. ಆದ್ದರಿಂದ ಆರೋಗ್ಯ ಕಾರಣಗಳನ್ನು ಆಧರಿಸಿ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಎಂದು ಮೆಹ್ತಾ ವಿವರಿಸಿದರು.
ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ವಾಂಗ್‌ಚುಕ್ ಅವರನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ಅಂಗ್ಮೋ ಅವರ ಪರ ವಕೀಲರು ವಾದ ಮಂಡಿಸಿ, ಸರ್ಕಾರವನ್ನು ಟೀಕಿಸುವುದು ಮತ್ತು ವಿರೋಧ ವ್ಯಕ್ತಪಡಿಸುವುದು ವಾಂಗ್‌ಚುಕ್ ಅವರ ಪ್ರಜಾಸತ್ತಾತ್ಮಕ ಹಕ್ಕು; ಇಂತಹ ಅಭಿಪ್ರಾಯಗಳು ರಾಷ್ಟ್ರದ ಭದ್ರತೆಗೆ ಧಕ್ಕೆಯಾಗಿ ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಅವು ಬಂಧನಕ್ಕೆ ಕಾರಣವಾಗುವಂತಿಲ್ಲ ಎಂದು ತಿಳಿಸಿದ್ದರು.
ಆದರೆ ಇದಕ್ಕೇ ಆಕ್ಷೇಪಿಸಿದ್ದ ಕೇಂದ್ರ ಸರ್ಕಾರ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆದಂತೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ದಂಗೆ ಮತ್ತು ಹಿಂಸಾಚಾರ ನಡೆಯಬೇಕು ಎಂದು ವಾಂಗ್‌ಚುಕ್ ಯತ್ನಿಸುತ್ತಿದ್ದಾರೆ. ಜೆನ್ ಜೀ (1997ರಿಂದ 2012ರವರೆಗೆ ಜನಿಸಿದ ಪೀಳಿಗೆ) ಯುವಕರನ್ನು ರಕ್ತಪಾತ ಮತ್ತು ಆಂತರಿಕ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದಿತ್ತು.
ವಾಂಗ್‌ಚುಕ್ ವಿರುದ್ಧ ಬಂಧನ ಆದೇಶ ಹೊರಡಿಸುವ ವೇಳೆ ಎಲ್ಲಾ ಪ್ರಕ್ರಿಯಾತ್ಮಕ ಭದ್ರತಾ ಕ್ರಮಗಳನ್ನು ಪಾಲಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. ಜೊತೆಗೆ, ಕಳೆದ ವರ್ಷದ ಲೇಹ್ ಹಿಂಸಾಚಾರಕ್ಕೂ ವಾಂಗ್‌ಚುಕ್ ಕಾರಣ ಎಂದು ದೂರಿತ್ತು.
ವಿಚಾರಣೆಯ ಒಂದು ಹಂತದಲ್ಲಿ ವಾಂಗ್‌ಚುಕ್ ಅರ್ಜಿಯನ್ನು ವಿರೋಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್, ನೇಪಾಳದಲ್ಲಿ ನಡೆದಂತೆ ಲಡಾಖ್‌ನಲ್ಲಿ ಹಿಂಸಾತ್ಮಕ ಆಂದೋಲನ ನಡೆಯಬಹುದು ಎಂದು ವಾಂಗ್‌ಚುಕ್ ಎಚ್ಚರಿಸಿದ್ದಾರೆ.ಯುವಕರು ಶಾಂತಿಯುತ ವಿಧಾನಗಳ ಪರಿಣಾಮಕಾರಿತನದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ವಾದಿಸಿದರು.
ಆದರೆ ಈ ವಾದವನ್ನು ಒಪ್ಪದ ಪೀಠವು, ವಾಂಗ್‌ಚುಕ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆಯೇ ಹೊರತು ಎಚ್ಚರಿಕೆಯನ್ನಲ್ಲ ಎಂದಿತು. "ಅವರು ಚಿಂತಿತರಾಗಿದ್ದಾರೆ... ನಾವು (ಅವರು ಹೇಳಿದ) ಸಂಪೂರ್ಣ ವಾಕ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ... ಅದನ್ನು ಒಮ್ಮೆ ಓದಿ... 'ಕೆಲವರು ಗಾಂಧಿವಾದಿ ಶಾಂತಿಯುತ ಮಾರ್ಗಗಳನ್ನು ತ್ಯಜಿಸುತ್ತಿದ್ದಾರೆ. ಇದು ಚಿಂತಾಜನಕವಾಗಿದೆ' ಎಂದು ಅವರು ಹೇಳಿದ್ದಾರೆ... ಇಲ್ಲಿ ಗಮನ ಕೇಂದ್ರೀಕರಿಸಿರುವುದು ಅಹಿಂಸಾತ್ಮಕ ಮಾರ್ಗದಿಂದ ನಿರ್ಗಮಿಸುತ್ತಿರುವ ಬಗ್ಗೆ, ಅಂತಹ ನಿರ್ಗಮನವು ಕಳವಳಕಾರಿಯಾಗಿದೆ ಎಂದಿದ್ದಾರೆ" ಎಂದು ನ್ಯಾಯಾಲಯವು ಬೆರಳು ಮಾಡಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಎಎಸ್‌ಜಿ ನಟರಾಜ್ ಅವರು ವಾಂಗ್‌ಚುಕ್ ತಮ್ಮ ಭಾಷಣದಲ್ಲಿ "ಹೈಬ್ರಿಡ್ ಅಭಿವ್ಯಕ್ತಿಗಳನ್ನು" ಬಳಸಿದ್ದಾರೆ ಎಂದು ಹೇಳಿದರು. ಇದಕ್ಕೆ ನ್ಯಾಯಾಲಯವು, "(ಅವರ ಹೇಳಿಕೆಯ ಕುರಿತಾಗಿ) ಅತಿಯಾದ ಅರ್ಥವನ್ನು ಕಲ್ಪಿಸಲಾಗುತ್ತಿದೆ" ಎಂದಿತು.
ಕೇಂದ್ರ ಸರ್ಕಾರ ಮತ್ತು ಲಡಾಖ್ ಆಡಳಿತದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಾಂಗ್‌ಚುಕ್ ಅವರು ಪ್ರಸ್ತುತ ಬಂಧನದಲ್ಲಿರುವ ರಾಜಸ್ಥಾನದ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಿವ ಮಂಗಳ್ ಶರ್ಮಾ ಹಾಗೂ ವಕೀಲರಾದ ಅರ್ಕಜ್ ಕುಮಾರ್, ಆಸ್ಥಾ ಸಿಂಗ್ ಮತ್ತು ಅಮನ್ ಮೆಹ್ತಾ ಹಾಜರಾಗಿದ್ದರು.