ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ: ಬಂಧಿತ ಬ್ರಹ್ಮೋಸ್‌ ಎಂಜಿನಿಯರ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನಿರಾಕರಣೆ

ರಾಷ್ಟ್ರೀಯ ಸುರಕ್ಷತೆ ಮತ್ತು ಭದ್ರತೆಯ ವಿಚಾರ ಭೀಕರ ಕೊಲೆ ಪ್ರಕರಣಗಳಿಗಿಂತ ಹೆಚ್ಚು ಗಂಭೀರವಾದುದು ಎಂದು ನ್ಯಾಯಾಲಯ ಹೇಳಿದೆ.
Nagpur Bench, Bombay High Court
Nagpur Bench, Bombay High Court
Published on

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸಿದ ಹಾಗೂ ಬ್ರಹ್ಮೋಸ್‌ ಕ್ಷಿಪಣಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಎಂಜಿನಿಯರ್ ನಿಶಾಂತ್ ಅಗರವಾಲ್‌ಗೆ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಈಚೆಗೆ ಜಾಮೀನು ನಿರಾಕರಿಸಿದೆ [ನಿಶಾಂತ್‌ ಅಗರವಾಲ್‌ ಮತ್ತು ಲಖನೌ ಭಯೋತ್ಪಾದಕ ನಿಗ್ರಹ ದಳ ನಡುವಣ ಪ್ರಕರಣ].

ವಿಚಾರಣಾ ನ್ಯಾಯಾಲಯದಿಂದ ದೋಷಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಿರಿಯ ಸಿಸ್ಟಂ ಇಂಜಿನಿಯರ್ ಅಗರವಾಲ್‌ ತನ್ನ ಶಿಕ್ಷೆ ಅಮಾನತುಗೊಳಿಸುವಂತೆ ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Also Read
ಅಧಿಕೃತ ರಹಸ್ಯ ಕಾಯಿದೆ ಸೆಕ್ಷನ್ 3ರಡಿ ಪೊಲೀಸ್ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ʼಬೇಹುಗಾರಿಕೆʼಯಾಗದು: ಬಾಂಬೆ ಹೈಕೋರ್ಟ್

ರಾಷ್ಟ್ರೀಯ ಸುರಕ್ಷತೆ ಮತ್ತು ಭದ್ರತೆಯ ವಿಚಾರ ಭೀಕರ ಕೊಲೆ ಪ್ರಕರಣಗಳಿಗಿಂತ ಹೆಚ್ಚು ಗಂಭೀರವಾದುದು ಎಂದು ಆಗಸ್ಟ್ 23ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವೃಶಾಲಿ ವಿ ಜೋಶಿ ಅವರಿದ್ದ ಪೀಠ ತಿಳಿಸಿದೆ.

“ದೇಶದ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಪ್ರಕರಣವನ್ನು ಹೆಚ್ಚು ಗಂಭಿರವಾಗಿ ನೋಡಬೇಕಿದೆ. ಅಪರಾಧದ ಪರಿಣಾಮ ದೇಶದ ಭದ್ರತೆಗೆ ಗಂಭೀರ ಅಪಾಯ ಉಂಟುಮಾಡಬಹುದು. ನಮ್ಮ ದೃಷ್ಟಿಯಲ್ಲಿ ರಾಷ್ಟ್ರೀಯ ಸುರಕ್ಷತೆ ಮತ್ತು ಭದ್ರತೆಯ ವಿಚಾರ ಭೀಕರ ಕೊಲೆ ಪ್ರಕರಣಗಳಿಗಿಂತ ಹೆಚ್ಚು ಗಂಭೀರವಾದುದು ಈ ಹಿನ್ನೆಲೆಯಲ್ಲಿ  ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುವ ತೊಂದರೆ ತೆಗೆದುಕೊಳ್ಳಲು ನಾವು ಸಿದ್ಧರಿಲ್ಲ, ”ಎಂದು ನ್ಯಾಯಾಲಯ ಹೇಳಿದೆ.

ಅಗರವಾಲ್ ಅವರು ನಾಗಪುರದ ಬ್ರಹ್ಮೋಸ್ ಕ್ಷಿಪಣಿ ಕೇಂದ್ರದ ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ಅಧಿಕೃತ ರಹಸ್ಯ ಕಾಯಿದೆ, ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಆತನನ್ನು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

ಸೆಷನ್ಸ್ ನ್ಯಾಯಾಧೀಶ  ಎಂ.ವಿ.ದೇಶಪಾಂಡೆ ಅವರು ಕಳೆದ ಜೂನ್ 3ರಂದು ಅಗರ್‌ವಾಲ್‌ ಅಪರಾಧಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದರು.

ತಾನು ಉದ್ಯೋಗ ಅರಸುತ್ತಿದ್ದಾಗ ಯಾವುದೇ ಉದ್ದೇಶವಿಲ್ಲದೆ ಮಾಲ್‌ವೇರ್‌ ಡೌನ್‌ಲೋಡ್‌ ಮಾಡಿದ್ದೆ. ತಾನು ಅನಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗೆ ಉಲ್ಲಂಘನೆಯಾಗಿದೆ ಎನ್ನಲು ಪೂರಕವಾದ ಬಾಹ್ಯ ಸಾಧನಗಳು ದೊರೆತಿಲ್ಲ ಎಂದು ಆತ ವಾದಿಸಿದ್ದ.

ಆದರೆ ವಿಚಾರಣೆ ವೇಳೆ ಬಲವಾದ ಪುರಾವೆ ಒದಗಿಸಿದ್ದ ಪ್ರಾಸಿಕ್ಯೂಷನ್‌, ಆರೋಪಿ ವರ್ಗೀಕೃತ ಮಾಹಿತಿಯನ್ನು ಬಳಸಿಕೊಂಡಿದ್ದು ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಬಂಧಿಸಿದ 19 ರಹಸ್ಯ ಕಡತಗಳು ಅವನ ವೈಯಕ್ತಿಕ ಲ್ಯಾಪ್‌ಟಾಪ್‌ನಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ, 16 ಕಡತಗಳು "ರಹಸ್ಯ" ಮತ್ತು 3 ಕಡತಗಳು "ನಿರ್ಬಂಧಿತ" ಮಾಹಿತಿಯಾಗಿದ್ದವು ಎಂದಿತ್ತು. 

Also Read
ಸೇನಾನೆಲೆಗಳಲ್ಲಿ 'ಕಂಡಲ್ಲಿ ಗುಂಡುʼ ಫಲಕದ ಎಚ್ಚರಿಕೆ ಸಮಂಜಸವಲ್ಲ: ಅಲಾಹಾಬಾದ್ ಹೈಕೋರ್ಟ್

ಆರೋಪಿ ಪಾಕಿಸ್ತಾನದ ಇಸ್ಲಾಮಾಬಾದ್‌ ಜೊತೆ ನಂಟಿರುವ ಸಾಮಾಜಿಕ ಮಾಧ್ಯಮ ಖಾತೆಗಳೊಂದಿಗೆ ಸಂವಹನ ನಡೆಸಿದ್ದು, ರಾಷ್ಟ್ರೀಯ ಭದ್ರತೆಗೆ ಸಂಭವನೀಯ ಬೆದರಿಕೆ ಇರುವ  ಬಗ್ಗೆ ಗಮನಾರ್ಹ ಕಳವಳ ಎದುರಾಗಿದೆ ಎಂದು ಪ್ರಾಸಿಕ್ಯೂಷನ್ ದೂರಿತ್ತು.

ವಾದ ಆಲಿಸಿದ ನ್ಯಾಯಾಲಯವು ಅಪರಾಧಿಯು ಮೇಲ್ಮನವಿಯಲ್ಲಿ ಯಶಸ್ವಿಯಾಗಬಹುದು ಎಂದು ಮೇಲ್ನೋಟಕ್ಕೆ ಅಭಿಪ್ರಾಯ ರೂಪಿಸಿಕೊಳ್ಳಬಹುದಾದ ಪ್ರಕರಣ ಇದಾಗಿಲ್ಲ. ಹಾಗಾಗಿ, ಶಿಕ್ಷೆ ಅಮಾನತುಗೊಳಿಸುವುದು ಸೂಕ್ತವಲ್ಲ. ಅಪರಾಧದ ಗಂಭೀರತೆ ತನ್ನ ಈ ನಿರ್ಧಾರಕ್ಕೆ ಪೂರಕವಾಗಿದೆ ಎಂದು ಪ್ರತಿಪಾದಿಸಿತು.

Kannada Bar & Bench
kannada.barandbench.com