ಲಿವ್‌-ಇನ್ ಸಂಗಾತಿಯ ಕೊಂದು ದೇಹ ತುಂಡು ತುಂಡಾಗಿ ಕತ್ತರಿಸಿದ್ದ ಆರೋಪಿಗೆ ಬಾಂಬೆ ಹೈಕೋರ್ಟ್ ಜಾಮೀನು

ದೇಹದ ಭಾಗಗಳು ಹತ್ಯೆಗೀಡಾದ ಸಂತ್ರಸ್ತೆಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ಕಾಣೆಯಾದ ಸಂಗಾತಿಯ ಸಂಬಂಧಿಕರಿಂದ ಡಿಎನ್ಎ ಮಾದರಿ ಸಂಗ್ರಹಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾ. ಅಮಿತ್ ಬೋರ್ಕರ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
Bombay High Court
Bombay High Court
Published on

ಸಹಜೀವನ ಸಂಗಾತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ ಆರೋಪಿಗೆ ಬಾಂಬೆ ಹೈಕೋರ್ಟ್ ಜುಲೈ 27ರಂದು ಜಾಮೀನು ನೀಡಿದೆ [ಹನುಮಂತ್ ಅಶೋಕ್ ಶಿಂಧೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ದೇಹದ ಭಾಗಗಳು ಹತ್ಯೆಗೀಡಾದ ಯುವತಿಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ಕಾಣೆಯಾದ ಸಂಗಾತಿಯ ಸಂಬಂಧಿಕರಿಂದ ಡಿಎನ್‌ಎ ಮಾದರಿ ಸಂಗ್ರಹಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಮೃತರ ಸಂಪೂರ್ಣ ಕೊಳತೆ ದೇಹ ಪರಿಗಣಿಸಿ ಅದನ್ನು ವಿಚಾರಣೆ ವೇಳೆ ನಿರ್ಧರಿಸುವ ಅಗತ್ಯವಿತ್ತು. ಆದರೂ ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಸಾಕ್ಷ್ಯಗಳು ಈ ಹಂತದಲ್ಲಿ ಆತನನ್ನು ಮತ್ತಷ್ಟು ದಿನಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುವುದಿಲ್ಲ ಎಂದು ನ್ಯಾಯಮೂರ್ತಿಗಳು ತಮ್ಮ 5 ಪುಟಗಳ ಆದೇಶದಲ್ಲಿ ದಾಖಲಿಸಿದ್ದಾರೆ.

ರೋಸಿನಾ ಪನ್ಸಾರೆ ಅಲಿಯಾಸ್‌ ಕವಿತಾ ಚೌಧರಿ ಆಗಸ್ಟ್ 8, 2021ರಿಂದ ಕಾಣೆಯಾಗಿದ್ದಾರೆ ಎಂದು ಪುಣೆ ಪೊಲೀಸರಿಗೆ ಆಗಸ್ಟ್ 2021ರಲ್ಲಿ ದೂರು ಬಂದಿತ್ತು. ಆಕೆಯ ಸಹಜೀವನ ಸಂಗಾತಿ ಹನುಮಂತ್‌ ಶಿಂಧೆಯ ವಿಚಾರಣೆ ನಡೆಸಿದಾಗ ಮದುವೆ ವಿಚಾರದಲ್ಲಿ ಆಗಾಗ್ಗೆ ಇಬ್ಬರ ಮಧ್ಯೆ ಜಗಳ ನಡೆಯುತ್ತಿದ್ದುದು ತಿಳಿದುಬಂದಿತ್ತು.

Also Read
ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ, ಮುಕ್ತ ಸಂಬಂಧದಿಂದ ಯುವಜನರ ಜೀವನ ಹಾಳು: ಅಲಾಹಾಬಾದ್ ಹೈಕೋರ್ಟ್

ಶಿಂಧೆಯನ್ನು ಆಗಸ್ಟ್ 24, 2021 ರಂದು ಬಂಧಿಸಲಾಯಿತು. ಆತ ತನ್ನ ಸಂಗಾತಿಯನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ಗೋಣಿಚೀಲಗಳಲ್ಲಿ ತುಂಬಿ ಬೇರೆ ಬೇರೆ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಆರೋಪಿಸಲಾಯಿತು.  

ಆರೋಪಿ ಮಾಹಿತಿ ನೀಡಿದ್ದಂತೆ ಆತ ತೋರಿಸಿದ ಸ್ಥಳಗಳಲ್ಲಿ ದೇಹದ ಭಾಗಗಳು ಪತ್ತೆಯಾಗಿದ್ದವು ಎಂಬುದನ್ನು ಗಮನಿಸಿದ ಪುಣೆಯ ಸೆಷನ್ಸ್ ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶಿಂಧೆ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಪತ್ತೆಯಾದ ದೇಹದ ಭಾಗಗಳು ಶಿಂಧೆಯ ಕಾಣೆಯಾದ ಸಂಗಾತಿಯದ್ದು ಎಂದು ಸಾಬೀತುಪಡಿಸಲು ಯಾವುದೇ ಡಿಎನ್‌ಎ ವರದಿ ಇಲ್ಲ ಎಂದು ಆರೋಪಿಗಳ ಪರ ವಕೀಲೆ ಸನಾ ರಯೀಸ್ ಖಾನ್‌ ವಾದ ಮಂಡಿಸಿದ್ದರು. ಪಂಚನಾಮೆ ಸ್ವೀಕಾರಾರ್ಹವಾಗಿಲ್ಲ ಎಂಬುದು ಅವರ ವಾದವಾಗಿತ್ತು.

ಪಂಚನಾಮೆ ಸ್ವೀಕಾರವು ವಿಚಾರಣೆಗೊಳಪಟ್ಟ ವಿಷಯ ಎಂದು ಹೈಕೋರ್ಟ್ ತೀರ್ಮಾನಿಸಿತು. ಆದರೆ ಕಾಣೆಯಾದ ಸಂಗಾತಿಯ ಉತ್ತರಾಧಿಕಾರಿಯಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ತಿಳಿಸಿತು. ಅಲ್ಲದೆ, ವಿಚಾರಣೆಯು ಹತ್ತಿರದ ಭವಿಷ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿತು.

Kannada Bar & Bench
kannada.barandbench.com