ಸುಶಾಂತ್ ಸಿಂಗ್ ಪ್ರಕರಣ: ಮಾಧ್ಯಮಗಳ ವಿಚಾರಣೆ ಕುರಿತಂತೆ ನಾಳೆ ಬಾಂಬೆ ಹೈಕೋರ್ಟ್ ತೀರ್ಪು

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರಿದ್ದ ಪೀಠ ನಾಳೆ ಬೆಳಿಗ್ಗೆ 11 ಗಂಟೆಗೆ ತೀರ್ಪು ನೀಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 6 ರಂದು ಆದೇಶ ಕಾಯ್ದಿರಿಸಲಾಗಿತ್ತು.
Bombay High Court, Sushant Singh Rajput
Bombay High Court, Sushant Singh Rajput

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಮಾಧ್ಯಮ ವಿಚಾರಣೆ ನಡೆದಿತ್ತು ಎಂದು ಆರೋಪಿಸಿ ಈ ಹಿಂದೆ ಸಲ್ಲಿಸಲಾಗಿದ್ದ ಸಾರ್ವಾಜನಿಕ ಅರ್ಜಿಗಳ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌ ನಾಳೆ (ಸೋಮವಾರ) ತೀರ್ಪು ನೀಡಲಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ‌ ಎಸ್ ಕುಲಕರ್ಣಿ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್‌ 6ರಂದು ತೀರ್ಪು ಕಾಯ್ದಿರಿಸಲಾಗಿತ್ತು.

ಕೆಳಗಿನ ಮನವಿಗಳನ್ನು ಒಳಗೊಂಡ ವಿವಿಧ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು:

  • ನಟನ ನಿಧನದ ತನಿಖೆಗೆ ಅಡ್ಡಿ ಉಂಟುಮಾಡುವ ವರದಿಗಳನ್ನು ಪ್ರಸಾರ ಮಾಡದಂತೆ ಟಿವಿ ವಾಹಿನಿಗಳಿಗೆ ನಿರ್ದೇಶನ ನೀಡಬೇಕು.

  • ಕೆಲ ಮಾಧ್ಯಮಗಳು ಮುಂಬೈ ಪೊಲೀಸರ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದನ್ನು ತಡೆಯಬೇಕು.

  • ಎಫ್‌ಐಆರ್‌ ಸಲ್ಲಿಕೆ ಹಂತದಲ್ಲಿ ಮಾಡಲಾದ ಪ್ರಕಟಣೆಗಳು ನ್ಯಾಯಾಂಗ ನಿಂದನೆಗೆ ಭಾಜನವಾಗುತ್ತವೆ ಎಂದು ಪ್ರಸ್ತಾಪಿಸಿ ನ್ಯಾಯಾಂಗ ನಿಂದನೆ ಕಾಯಿದೆಯನ್ನು ಮರು ವ್ಯಾಖ್ಯಾನಿಸಬೇಕು.

  • ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸದೆ ಮುದ್ರಣ ಅಥವಾ ಪ್ರಸಾರ ಮಾಧ್ಯಮ ನಿಯಂತ್ರಿಸಲು ಮಾರ್ಗಸೂಚಿ ರೂಪಿಸಬೇಕು.

ಒಂದು ಮನವಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡುವಾಗ ನ್ಯಾಯಾಲಯ ʼತನಿಖೆಗೆ ಅಡ್ಡಿಯಾಗದಂತೆ ಸಂಯಮದಿಂದ ವರದಿ ಮಾಡಬೇಕು ಎಂದು ಸೂಚಿಸಿತ್ತು.

ಸುಮಾರು ಒಂದು ತಿಂಗಳ ಕಾಲ ನಡೆದ ವಾದದ ವೇಳೆ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಆಸ್ಪಿ ಚಿನೋಯ್‌, ದೇವದತ್‌ ಕಾಮತ್‌ ವಾದ ಮಂಡಿಸಿದ್ದರು. ಕ್ರಿಮಿನಲ್‌ ವಿಚಾರಣೆಯೊಂದನ್ನು ವರದಿ ಮಾಡುವಾಗ ಸುದ್ದಿ ವಾಹಿನಿಗಳು ಭಾರಿ ಎಚ್ಚರಿಕೆ ವಹಿಸಬೇಕು. ಯಾರನ್ನು ಬಂಧಿಸಬೇಕು ಅಥವಾ ಯಾರು ತಪ್ಪಿತಸ್ಥರು ಎಂದೆಲ್ಲಾ ವರದಿಗಳಲ್ಲಿ ತೀರ್ಪು ನೀಡಲು ಹೋಗಬಾರದು ಎಂದು ಆಸ್ಪಿ ಹೇಳಿದ್ದರು. ಎನ್‌ಬಿಎ ರೀತಿಯ ಮಾಧ್ಯಮ ನಿಯಂತ್ರಣ ಸಂಸ್ಥೆಗಳು ಸೂಕ್ತ ನಿಯಂತ್ರಣ ಕಾರ್ಯದಲ್ಲಿ ತೊಡಗಿಲ್ಲ ಎಂದಿದ್ದ ಅವರು ವರದಿ ಮಾಡುವಾಗ ನ್ಯಾಯಾಂಗ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮಾಧ್ಯಮಗಳು ಮೂಗು ತೂರಿಸಬಾರದು ಎಂದಿದ್ದರು.

Also Read
ಮಾಧ್ಯಮ ಸ್ವನಿಯಂತ್ರಣದಲ್ಲಿ ವಿಫಲವಾದಾಗ ಮಾತ್ರ ಮಾರ್ಗಸೂಚಿ ಜಾರಿಗೊಳಿಸಲು ನ್ಯಾಯಾಲಯ ಮುಂದಾಗಬೇಕು: ಎನ್‌ಬಿಎ
Also Read
'ಸತ್ತವರನ್ನೂ ನೀವು ಬಿಡಲಿಲ್ಲ, ಇದು ತನಿಖಾ ಪತ್ರಿಕೋದ್ಯಮವೇ?' ಸುದ್ದಿ ವಾಹಿನಿಗಳಿಗೆ ಬಾಂಬೆ ಹೈಕೋರ್ಟ್‌ ತಪರಾಕಿ

ಮತ್ತೊಂದೆಡೆ ಮಾಧ್ಯಮ ವಿಚಾರಣೆಯ ಸಂದರ್ಭದಲ್ಲಿ ಹೊರಹೊಮ್ಮುವ ದೂರುಗಳನ್ನು ಖಾಸಗಿಯೂ, ಸ್ವಯಂ ನೇಮಿತವೂ ಆದ ಸುದ್ದಿ ಪ್ರಸಾರ ಸಂಸ್ಥೆ (ಎನ್‌ಬಿಎ) ತರಹದ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಕೇಂದ್ರ ಸರ್ಕಾರವು ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಹಿರಿಯ ನ್ಯಾಯವಾದಿ ದೇವದತ್ತ ಕಾಮತ್ ಪ್ರತಿಪಾದಿಸಿದ್ದರು. ಅಲ್ಲದೆ ವಾಯು ತರಂಗಗಳು ಸಾರ್ವಜನಿಕ ಸ್ವತ್ತಾಗಿದ್ದು ಅವುಗಳ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲು ಖಾಸಗಿ ಪ್ರಸಾರಕರಿಗೆ ಪರವಾನಗಿ ನೀಡಲಾಗಿದೆ. ಹೀಗಾಗಿ ಪ್ರಸಾರ ಸಂಹಿತೆಯನ್ನು ಪ್ರಸಾರಕರು ಉಲ್ಲಂಘಿಸುವಂತಿಲ್ಲ ಎಂದಿದ್ದರು. ಶಾಸನಬದ್ಧ ನಿಯಂತ್ರಣಕ್ಕೆ ಪರಿಹಾರವಾಗಿ ಮಾಧ್ಯಮಗಳ ಸ್ವ-ನಿಯಂತ್ರಣವನ್ನು ಪರಿಗಣಿಸುವಂತಿಲ್ಲ ಎಂದು ವಾದಿಸಿದ್ದರು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌, ಎನ್‌ಬಿಎ ಪರವಾಗಿ ಹಿರಿಯ ನ್ಯಾಯವಾದಿ ಅರವಿಂದ್‌ ದಾತಾರ್‌, ಸುದ್ದಿ ಪ್ರಸಾರಕರ ಒಕ್ಕೂಟ ಎನ್‌ಬಿಎಫ್‌ ಪರವಾಗಿ ಸಿದ್ಧಾರ್ಥ್‌ ಭಟ್ನಾಗರ್‌, ರಿಪಬ್ಲಿಕ್‌ ಟಿವಿ ಪರವಾಗಿ ಮಾಳವಿಕಾ ತ್ರಿವೇದಿ, ಟೈಮ್ಸ್‌ ನೌ ವಾಹಿನಿ ಪರವಾಗಿ ಕುನಾಲ್‌ ಟಂಡನ್‌, ಝೀ ವಾಹಿನಿ ಪರವಾಗಿ ಅಂಕಿತ್‌ ಲೋಹಿಯಾ, ಎಬಿಪಿ ನ್ಯೂಸ್‌, ಆಜ್‌ ತಕ್‌ ವಾಹಿನಿ, ಇಂಡಿಯಾ ಟುಡೆ, ನ್ಯೂಸ್‌ ನೇಷನ್‌ ವಾಹಿನಿಗಳ ಪರವಾಗಿ ಹೆತಲ್‌ ಜೋಬನ್‌ಪುತ್ರ, ರಾಜೀವ್‌ ಪಾಂಡೆ, ಅಲಂಕಾರ್‌ ಕಿರ್ಪೇಕರ್‌, ಝೀಶನ್‌ ಹಶ್ಮಿ ವಾದ ಮಂಡಿಸಿದ್ದರು.

ಕೆಲ ಪ್ರಮುಖ ವಾದಗಳ ವಿವರ ಇಲ್ಲಿದೆ:

“ಸ್ವನಿಂಯತ್ರಣ ವ್ಯವಸ್ಥೆ ವಿಫಲವಾದಾಗ ಸಮಸ್ಯೆ ಬಗೆಹರಿಸಲು ನ್ಯಾಯಾಲಯ ಮಧ್ಯಪ್ರವೇಶಿಸಬಹುದು. ಬಹುಹಿಂದೆಯೇ ಸುಪ್ರೀಂ ಕೋರ್ಟ್‌ ಅನುಮೋದಿಸಿರುವ ಸ್ವನಿಯಂತ್ರಣ ವ್ಯವಸ್ಥೆ ಅಸ್ತಿತ್ವದಲ್ಲಿರುವಾಗ ಟಿವಿ ಚಾನೆಲ್‌ಗಳ ನಿಯಂತ್ರಣಕ್ಕೆ ನ್ಯಾಯಾಂಗದ ಮಧ್ಯಪ್ರವೇಶದ ಅವಶ್ಯಕತೆ ಇಲ್ಲ” ಎಂದು ದಾತಾರ್‌ ವಾದಿಸಿದ್ದರು.

ಮಾಳವಿಕಾ ತ್ರಿವೇದಿ ಅವರು “ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಬೇಕಿದ್ದ ನಿಜವಾಗಿ ಅನ್ಯಾಯಕೊಳಗಾದ ವ್ಯಕ್ತಿಗಳು ಪೀಠದ ಮುಂದೆ ಬಂದಿಲ್ಲ” ಎಂದು ವಾದ ಮಂಡಿಸಿದ್ದರು.

ಎಲ್ಲಾ ವಾದಗಳನ್ನು ಕೂಲಂಕಷವಾಗಿ ಆಲಿಸಿದ ನ್ಯಾಯಾಲಯ “ಅನೇಕರು ಮಾಧ್ಯಮ ವಿಚಾರಣೆ ನಿಯಂತ್ರಿಸುವ ಸಲುವಾಗಿ ಮಾರ್ಗಸೂಚಿ ರೂಪಿಸುವ ಪರವಾಗಿ ಇದ್ದಾರೆ” ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ತೀರ್ಪು ಕಾಯ್ದಿರಿಸುವ ಮುನ್ನ ಎಲ್ಲಾ ಕಕ್ಷೀದಾರರು ತಾವು ಮಾರ್ಗಸೂಚಿ ನೀಡಬಹುದಾದ ವ್ಯಾಪ್ತಿಯ ಕುರಿತು ಲಿಖಿತ ಉತ್ತರ ನೀಡಬೇಕು ಎಂದು ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com