'ಸತ್ತವರನ್ನೂ ನೀವು ಬಿಡಲಿಲ್ಲ, ಇದು ತನಿಖಾ ಪತ್ರಿಕೋದ್ಯಮವೇ?' ಸುದ್ದಿ ವಾಹಿನಿಗಳಿಗೆ ಬಾಂಬೆ ಹೈಕೋರ್ಟ್‌ ತಪರಾಕಿ

ಮಾಧ್ಯಮ ವಿಚಾರಣೆಗೆ ಸಂಬಂಧಿಸಿದ ಪಿಐಎಲ್‌ಗಳ ಸುದೀರ್ಘ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್, ʼತನಿಖೆಯ ಮೇಲ್ವಿಚಾರಣೆ ಮಾಡುವುದು ನಿಮ್ಮ ಕೆಲಸವೇ?ʼ ಎಂದು ಸುದ್ದಿವಾಹಿನಿಗಳನ್ನು ಪ್ರಶ್ನಿಸಿದೆ.
Media trial
Media trial
Published on

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸುದ್ದಿವಾಹಿನಿಗಳ ವರದಿಗಾರಿಕೆಯನ್ನು ಬಾಂಬೆ ಹೈಕೋರ್ಟ್‌ ತೀವ್ರವಾಗಿ ಖಂಡಿಸಿದೆ. ಪತ್ರಿಕೋದ್ಯಮದ ಮೂಲ ನಿಯಮ ಮತ್ತು ಶಿಷ್ಟಾಚಾರವನ್ನು ಕಡೆಗಣಿಸಲಾಗಿದೆ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ನ್ಯಾಯಪೀಠ ಮಾಧ್ಯಮ ವಿಚಾರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್)‌ ವಿಚಾರಣೆಯನ್ನು ಬುಧವಾರ ನಡೆಸಿತು. ಈ ವೇಳೆ ಸುದ್ದಿ ವಾಹಿನಿಗಳು ನಡೆಸುತ್ತಿರುವ ‘ತನಿಖಾ ಪತ್ರಿಕೋದ್ಯಮʼ ಕುರಿತು ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿತು.

“ವಾಹಿನಿಗಳಲ್ಲಿ ಮೊದಲು ಸಂದೇಶ ಹಾಕುವುದು, ಅದಾದ ಬಳಿಕ ಸಾಕ್ಷ್ಯಗಳ ಚರ್ಚೆ ನಡೆಸುವುದು, ಇದು ತನಿಖಾ ಪತ್ರಿಕೋದ್ಯಮವೇ?

ಬಾಂಬೆ ಹೈಕೋರ್ಟ್

ಭಾವೋದ್ರೇಕದ ಮುಖ್ಯಾಂಶಗಳು ಮತ್ತು ಸಂದರ್ಶನಗಳನ್ನು ಹೊತ್ತ ಸುದ್ದಿ ವಾಹಿನಿಗಳು ಸೂಕ್ಷ್ಮ ವಿಷಯಗಳನ್ನು ವರದಿ ಮಾಡುವಾಗ ಹೇಗೆ ಪತ್ರಿಕೋದ್ಯಮದ ಎಲ್ಲಾ ಮೂಲ ನಿಯಮ ಮತ್ತು ಶಿಷ್ಟಾಚಾರಗಳನ್ನು ಮರೆಯುತ್ತವೆ ಎನ್ನುವ ಬಗ್ಗೆ ಪೀಠ ಒತ್ತಿ ಹೇಳಿತು.

"ಸಾಕ್ಷಿಗಳು ಹೋಗಲಿ, ನೀವು ಸತ್ತವರನ್ನು ಕೂಡ ಬಿಡಲಿಲ್ಲ!” ಎಂದು ನ್ಯಾಯಾಲಯ ಒಂದು ಹಂತದಲ್ಲಿ ಅಸಮಾಧಾನ ವ್ಯಕ್ತಪಡಿಸಿತು.
Also Read
ಮಾಧ್ಯಮ ಸ್ವನಿಯಂತ್ರಣದಲ್ಲಿ ವಿಫಲವಾದಾಗ ಮಾತ್ರ ಮಾರ್ಗಸೂಚಿ ಜಾರಿಗೊಳಿಸಲು ನ್ಯಾಯಾಲಯ ಮುಂದಾಗಬೇಕು: ಎನ್‌ಬಿಎ

ಮುಂದುವರೆದು, ʼಮಾಧ್ಯಮಗಳಿಗೆ ಸಾರ್ವಜನಿಕ ಆಸ್ತಿಯಾಗಿರುವ ವಾಯುತರಂಗಗಳನ್ನು ದುರ್ಬಳಕೆ ಮಾಡಿಕೊಡಲು ಬಿಟ್ಟುಕೊಟ್ಟಿರುವ ಸರ್ಕಾರ ಅವುಗಳನ್ನು ಯಾಕಾದರೂ ನಿಯಂತ್ರಿಸುತ್ತಿಲ್ಲ?ʼ ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರನ್ನು ಪ್ರಶ್ನಿಸಿತು.

ಆಗ ಸಿಂಗ್‌ ಅವರು, ʼಸರ್ಕಾರಕ್ಕೆ ವಾಯುತರಂಗಗಳ ಒಡೆತನವಿದ್ದರೂ ಅವುಗಳ ಮೂಲಕ ಪ್ರಸಾರ ಮಾಡುವ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Also Read
ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ವಿರುದ್ಧ ಬಾಲಿವುಡ್ ನಿರ್ಮಾಪಕರು ದಾಖಲಿಸಿರುವ 1,069 ಪುಟದ ದೂರಿನಲ್ಲಿ ಏನೇನಿದೆ?

ಸರ್ಕಾರದ ಮೇಲ್ವಿಚಾರಣೆಯಿಂದ ನ್ಯಾಯಯುತ ವರದಿಗಾರಿಕೆಗೆ ಅಡ್ಡಿ: ಎನ್‌ಬಿಎಫ್‌

ಮಾಧ್ಯಮಗಳ ಮೇಲೆ ಸರ್ಕಾರದ ನಿಗಾ ಇರಬಾರದು ಎಂಬ ವಾದ ನಡೆಯುತ್ತಿದ್ದಾಗ ಸುದ್ದಿ ಪ್ರಸಾರಕರ ಒಕ್ಕೂಟ (ಎನ್‌ಬಿಎಫ್) ಪರವಾಗಿ ಅಹವಾಲು ಸಲ್ಲಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಭಟ್ನಾಗರ್, ಮಾಧ್ಯಮಗಳ ನಿಯಂತ್ರಣಕ್ಕೆ ಸ್ವ-ನಿಯಂತ್ರಣ ವ್ಯವಸ್ಥೆ ಸಾಕು ಎಂದು ಪ್ರತಿಪಾದಿಸಿದರು. ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಅಸೋಸಿಯೇಷನ್ ​​(ಎನ್‌ಬಿಎ) ಮತ್ತು ಎನ್‌ಬಿಎಫ್‌ ರೀತಿಯ ಸ್ವಯಂ ನಿಯಂತ್ರಣ ಪ್ರಾಧಿಕಾರಗಳು ಮಾಧ್ಯಮ ವಾಹಿನಿಗಳ ವಿಷಯವನ್ನು ಸೆನ್ಸಾರ್ ಮಾಡಿವೆ ಎಂದು ಅವರು ಗಮನಸೆಳೆದರು."ಪ್ತತಿಷ್ಠಿತ ವ್ಯಕ್ತಿಗಳ ಸಮಿತಿಯಿಂದ ಸೆನ್ಸಾರ್‌ ಮಾಡುವುದು ವಾಹಿನಿಗಳ ಖ್ಯಾತಿಗೆ ಧಕ್ಕೆ ತರುತ್ತದೆ" ಎಂದು ಅವರು ಹೇಳಿದರು. ಮಾಧ್ಯಮಗಳು ಬಹುತೇಕ ಸರ್ಕಾರದ ವಿರುದ್ಧ ವರದಿ ಮಾಡುವುದರಿಂದ, ಸರ್ಕಾರವೇ ಆಸಕ್ತ ಪಕ್ಷಕಾರನಾಗಿದ್ದರೆ ನ್ಯಾಯಯುತ ವರದಿ ಮಾಡುವುದು ಕಷ್ಟವಾಗುತ್ತದೆ ಎಂದು ಗಮನಸೆಳೆದರು.

“ಪರಿಪೂರ್ಣತೆ ಎನ್ನುವುದು ಒಳಿತಿನ ಶತ್ರುವಾಗಬಾರದು. ಸರ್ಕಾರ ಹೆಚ್ಚಿನ ನಿಯಂತ್ರಣ ಹೊಂದಿದರೆ ಹೆಚ್ಚು ಸೆನ್ಸಾರ್‌ಷಿಪ್ ಇರುತ್ತದೆ ಮತ್ತು ಆಗ ಮಾಧ್ಯಮ ಸ್ವಾತಂತ್ರ್ಯ‌ ಇರುವುದಿಲ್ಲ. "

ಹಿರಿಯ ವಕೀಲ ಸಿದ್ಧಾರ್ಥ್ ಭಟ್ನಾಗರ್ (ಎನ್‌ಬಿಎಫ್‌ ಪರವಾಗಿ)

Also Read
ಯುಪಿಎಸ್‌ಸಿ ಜಿಹಾದ್ ವಿವಾದ: ಕೇಂದ್ರದಿಂದ ಸುದರ್ಶನ್ ಟಿವಿಗೆ ಷೋಕಾಷ್ ನೋಟಿಸ್ ಜಾರಿ; ಪ್ರತಿಕ್ರಿಯೆಗೆ ಸೆ.28ರ ಗಡುವು

ಯಾವ ಸುದ್ದಿ ಪ್ರಸಾರವಾಗಬೇಕು ಯಾವುದಲ್ಲ ಎಂಬುದನ್ನು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ: ರಿಪಬ್ಲಿಕ್‌ ಟಿವಿ

ರಿಪಬ್ಲಿಕ್ ಟಿವಿ ಪರವಾಗಿ ಹಾಜರಾದ ವಕೀಲೆ ಮಾಳವಿಕಾ ತ್ರಿವೇದಿ, ‘ಮಾಧ್ಯಮ ವಿಚಾರಣೆ' ಎಂಬ ಪದವನ್ನು ಸಮಾಜದ ಒಂದು ನಿರ್ದಿಷ್ಟ ವರ್ಗ ಒತ್ತಿಹೇಳುತ್ತಿದೆಯೇ ವಿನಾ ಎಲ್ಲಾ ನಾಗರಿಕರಲ್ಲ ಎಂದು ಹೇಳಿದರು. ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಅವರು ನ್ಯಾಯಾಲಯದ ಗಮನ ಸೆಳೆದರು.

· ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಬೇಕಿದ್ದ ನಿಜವಾಗಿ ಅನ್ಯಾಯಕೊಳಗಾದ ವ್ಯಕ್ತಿಗಳು ಪೀಠದ ಮುಂದೆ ಬಂದಿಲ್ಲ.

· ಅರ್ಜಿದಾರರ ಅಹವಾಲು- ಅದು ಮಾಧ್ಯಮಗಳ ವಿರುದ್ಧವೇ ಅಥವಾ ಪ್ರಸ್ತುತ ನಿಯಮಗಳಲ್ಲಿನ ಕೊರತೆಯ ವಿರುದ್ಧವೇ?

ಸುಶಾಂತ್‌ ಸಿಂಗ್ ಪ್ರಕರಣ ಮಾತ್ರವಲ್ಲದೆ ಹಲವಾರು ಸಂದರ್ಭಗಳಲ್ಲಿ ಸರ್ಕಾರಿ ವ್ಯವಸ್ಥೆಯ ದೋಷಗಳನ್ನು ಎತ್ತಿ ತೋರಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ ಎಂದು ತ್ರಿವೇದಿ ಹೇಳಿದರು.

ಆಗ ನ್ಯಾಯಾಲಯ ಹೀಗೆ ಪ್ರಶ್ನಿಸಿತು:

“ತನಿಖೆಯಲ್ಲಿ ದೋಷಗಳಿವೆ. ದೋಷಗಳನ್ನು ಯಾರು ನೋಡುತ್ತಾರೆ? ಪ್ರತಿಯೊಂದು ತನಿಖೆಯನ್ನೂ ಮೇಲ್ವಿಚಾರಣೆ ಮಾಡಬಹುದೇ? ಅದು ನಿಮ್ಮ ಕೆಲಸವೇ? ”

ಬಾಂಬೆ ಹೈಕೋರ್ಟ್‌

ತನಿಖಾ ಸಂಸ್ಥೆಗಳು ಹೊರಹಾಕುತ್ತಿರುವ ಸಂಗತಿಗಳಲ್ಲಿ ವ್ಯತ್ಯಾಸಗಳಿದ್ದರೆ, ಸುದ್ದಿ ಚಾನೆಲ್ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ತ್ರಿವೇದಿ ಗಮನಸೆಳೆದರು.

“ಯಾವ ಸುದ್ದಿ ಹೋಗಬೇಕು ಯಾವುದು ಅಲ್ಲ ಎಂಬುದನ್ನು ಸರ್ಕಾರ ನಿರ್ಧರಿಸಲು ಸಾಧ್ಯ ಇಲ್ಲ. ಸುದ್ದಿಯನ್ನು ಪ್ರಸಾರ ಮಾಡುವ ಮುನ್ನ ನಾವು (ವಾಹಿನಿ) ವ್ಯಾಪಕ ಸಂಶೋಧನೆ ನಡೆಸಿರುತ್ತೇವೆ ಮತ್ತು ಕೆಲ ನಿಗೂಢ ಸಂಗತಿಗಳನ್ನು ಬಯಲಿಗೆಳೆದಿರುತ್ತೇವೆ”

ಮಾಳವಿಕಾ ತ್ರಿವೇದಿ (ರಿಪಬ್ಲಿಕ್‌ ಟಿವಿ ಪರವಾಗಿ)

ಟೈಮ್ಸ್‌ ನೌ ವಾಹಿನಿಯ ಪರವಾಗಿ ವಾದ ಮಂಡಿಸಿದ ವಕೀಲ ಕುನಾಲ್‌ ಟಂಡನ್‌ ಅವರು ʼಸುದ್ದಿಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದರ ಒಂದು ತುಣುಕನ್ನು ಮಾತ್ರ ಗ್ರಹಿಸದೇ ಇಡೀ ಸುದ್ದಿಯನ್ನು ಓದಬೇಕುʼ ಎಂದು ಪ್ರತಿಪಾದಿಸಿದರು. ಸುದ್ದಿ ವಾಹಿನಿ ನಿರ್ವಹಿಸಬೇಕಾದ ಲಕ್ಷ್ಮಣ ರೇಖೆ ಜನಪ್ರಿಯ ಮತ್ತು ಜನಪ್ರಿಯವಲ್ಲದ ನಿಲುವುಗಳನ್ನು ಆಧರಿಸಿರುತ್ತದೆ ಎಂದು ಕೂಡ ಅವರು ವಾದಿಸಿದರು.

Also Read
ಟಿಆರ್‌ಪಿ ಹಗರಣ: ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮಾಲೀಕರ ಬಂಧನ; ರಿಪಬ್ಲಿಕ್ ಟಿವಿ ವಿಚಾರಣೆ ಮಾಡಲಿರುವ ಮುಂಬೈ ಪೊಲೀಸ್

ಆಗ ʼಸುದ್ದಿ ವಾಹಿನಿಗಳು ಸುದ್ದಿ ವರದಿ ಮಾಡಲು ಎಷ್ಟರಮಟ್ಟಿಗೆ ಸಿದ್ಧವಾಗಿವೆ?ʼ ಎಂದು ಆಕ್ಷೇಪಿಸಿದ ನ್ಯಾಯಾಲಯ ʼನೀವು ಸತ್ಯದ ಬಗ್ಗೆ ಹೆಚ್ಚು ಕಾಳಜಿ ಉಳ್ಳವರಾಗಿದ್ದರೆ ಸುದ್ದಿ ಪ್ರಸಾರ ಮಾಡುವ ಮೊದಲು ಅಪರಾಧ ಪ್ರಕ್ರಿಯಾ ಸಂಹಿತೆಯ ನಿಬಂಧನೆಗಳನ್ನು ಏಕೆ ಓದುವುದಿಲ್ಲ?” ಎಂದು ಪ್ರಶ್ನಿಸಿತು.

ಎಬಿಪಿ ಸುದ್ದಿ ವಾಹಿನಿ ಪರವಾಗಿ ಹಾಜರಾದ ವಕೀಲೆ ಹೆತಲ್‌ ಜೋಬನ್‌ಪುತ್ರ ಅವರು ʼಎನ್‌ಎಸ್‌ಬಿಎಯನ್ನು ಶಾಸನಬದ್ಧ ಸಂಸ್ಥೆಯಾಗಿ ರೂಪಿಸಿ ಹೆಚ್ಚಿನ ಅಧಿಕಾರ ನೀಡಬೇಕಿದೆ. ಈಗಾಗಲೇ ಲಕ್ಷ್ಮಣರೇಖೆ ಇದ್ದು ಎಲ್ಲಾ ವಾಹಿನಿಗಳನ್ನು ಅದರಡಿ ತರಬೇಕುʼ ಎಂದರು.

ಆಜ್‌ ತಕ್‌ ಮತ್ತು ಇಂಡಿಯಾ ಟುಡೇ ಸುದ್ದಿವಾಹಿನಿಗಳನ್ನು ಪ್ರತಿನಿಧಿಸಿದ ರಾಜೀವ್‌ ಪಾಂಡೆ ಅವರು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಎನ್‌ಬಿಎ ಜಾರಿಗೊಳಿಸಿದ ಆದೇಶಗಳನ್ನು ಪಾಲಿಸುವಲ್ಲಿ ವಾಹಿನಿಗಳು ಶ್ರಮಿಸುತ್ತಿವೆ ಎಂದು ತಿಳಿಸಿದರು. “ನಾವು ಸ್ವನಿಯಂತ್ರಣಕ್ಕೆ ಬದ್ಧರಾಗಿದ್ದೇವೆ. ಎನ್‌ಬಿಎ ಆದೇಶಗಳನ್ನು ನಾವು ಸದಾ ಪಾಲಿಸುತ್ತೇವೆ” ಎಂದು ಅವರು ಹೇಳಿದರು.

ಝೀ ನ್ಯೂಸ್‌ ಪರ ವಾದ ಮಂಡಿಸಿದ ಅಂಕಿತ್‌ ಲೋಹಿಯಾ ಅವರು ʼಲಕ್ಷ್ಮಣರೇಖೆಯನ್ನು ಮಾಧ್ಯಮಗಳು ಪಾಲಿಸುತ್ತಿವೆ… ಅಗತ್ಯಬಿದ್ದಾಗ ನ್ಯಾಯಾಂಗ ವ್ಯವಸ್ಥೆ ಮಾಧ್ಯಮಗಳ ಮೇಲೆ ನಿಗಾ ಇಡಬಹುದು ಎಂದರು. ಆಗ ನ್ಯಾಯಾಲಯವು ''ಸರಿಪಡಿಸಲಾಗದ ಹಾನಿ ಸಂಭವಿಸಿದ ಮೇಲೆ, ನ್ಯಾಯಾಲಯದ ನಿರ್ದೇಶನ ಬರುತ್ತದೆ," ಎನ್ನುವುದನ್ನು ನೆನಪಿಸುತ್ತಾ, ಹಾಗಾಗಿ, "ʼಉಲ್ಲಂಘನೆಯಾದಾಗ ಮಧ್ಯಪ್ರವೇಶಿಸಿ ಎಂದು ಹೇಳುವುದು ಸುಲಭʼ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಅಕ್ಟೋಬರ್‌ 23ರ ಶುಕ್ರವಾರ ವಿಚಾರಣೆ ಮುಂದುವರೆಯಲಿದೆ.

Kannada Bar & Bench
kannada.barandbench.com