ರಸ್ತೆ ಗುಂಡಿಗಳಿಂದಾಗಿ ಸಾವನ್ನಪ್ಪಿದರೆ ಅಧಿಕಾರಿಗಳು, ಗುತ್ತಿಗೆದಾರರೇ ಹೊಣೆ, ₹6 ಲಕ್ಷ ಪರಿಹಾರ: ಬಾಂಬೆ ಹೈಕೋರ್ಟ್

ರಸ್ತೆ ಗುಂಡಿ ಅಪಘಾತಕ್ಕೆ ಕಾರಣರಾದವರನ್ನು ಹಣಕಾಸಿನ ನೆಲೆಗಟ್ಟಿನ ಮೂಲಕ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡದಿದ್ದರೆ ಅವರಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗುವುದಿಲ್ಲ ಎಂದು ಪೀಠ ನುಡಿಯಿತು.
Road with potholes
Road with potholes
Published on

ಮುಂಬೈನಂತಹ ನಗರದಲ್ಲಿ ಕೆಟ್ಟ ರಸ್ತೆಗಳಿವೆ ಎಂದರೆ ಅದು ಅಕ್ಷಮ್ಯ ಎಂದು ಸೋಮವಾರ ಹೇಳಿರುವ ಬಾಂಬೆ ಹೈಕೋರ್ಟ್, ಮಹಾರಾಷ್ಟ್ರದಲ್ಲಿ ರಸ್ತೆ ಗುಂಡಿ ಇಲ್ಲವೇ ತೆರೆದ ಮ್ಯಾನ್‌ಹೋಲ್‌ಗಳಿಂದ ಸಂಭವಿಸುವ ಅಪಘಾತಗಳಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ₹6 ಲಕ್ಷ ಪರಿಹಾರ ನೀಡುವಂತೆ ಪುರಸಭೆ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಇಂತಹ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ಪರಿಸ್ಥಿತಿಯ ಗಂಭೀರತೆ ಗಮನಿಸಿ  ₹50,000ದಿಂದ ₹2.5 ಲಕ್ಷದವರೆಗೆ ಪರಿಹಾರ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಸಂದೇಶ್ ಡಿ ಪಾಟೀಲ್ ಅವರಿದ್ದ ಪೀಠ ತಿಳಿಸಿದೆ.

Also Read
ಬೆಂಗಳೂರು ರಸ್ತೆ ಗುಂಡಿ: ಅನುಪಾಲನಾ ಅಫಿಡವಿಟ್‌ ಸಲ್ಲಿಸಲು ಬಿಬಿಎಂಪಿಗೆ ಒಂದು ತಿಂಗಳ ಗಡುವು ನೀಡಿದ ಹೈಕೋರ್ಟ್‌

ನಿವೃತ್ತ ನ್ಯಾಯಮೂರ್ತಿ ಜಿ ಎಸ್ ಪಟೇಲ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದ ಆಧಾರದ ಮೇಲೆ 2013ರಲ್ಲಿ ದಾಖಲಾಗಿದ್ದ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

"ಕೆಟ್ಟ ಮತ್ತು ಅಸುರಕ್ಷಿತ ರಸ್ತೆಗಳಿಗೆ ಯಾವುದೇ ಸಮರ್ಥನೆ ಇಲ್ಲ. ದೇಶದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ, ಕೇಂದ್ರ, ರಾಜ್ಯ ಮತ್ತು ನಾಗರಿಕ ಸಂಸ್ಥೆಯ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ. ವಾಸ್ತವವಾಗಿ, ಬೃಹನ್ಮುಂಬೈ ಮಹಾನಗರ ಪಾಲಿಕೆ ಏಷ್ಯಾದ ಅತ್ಯಂತ ಶ್ರೀಮಂತ ನಿಗಮಗಳಲ್ಲಿ ಒಂದಾಗಿದೆ. ಕೆಟ್ಟ ರಸ್ತೆಗಳು ಮನುಷ್ಯರ ಜೀವಕ್ಕೆ ಅಪಾಯ ಉಂಟುಮಾಡುವುದಲ್ಲದೆ, ಕಂಪನಿಗಳ ಹಣಕಾಸು ಸ್ಥಿತಿಗತಿ ಸೇರಿದಂತೆ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ" ಎಂದು ನ್ಯಾಯಾಲಯ ವಿಷಾದ ವ್ಯಕ್ತಪಡಿಸಿತು.

ಸಂವಿಧಾನದ 21 ನೇವಿಧಿಯಡಿ ಉತ್ತಮ ಮತ್ತು ಸುರಕ್ಷಿತ ರಸ್ತೆಗಳು ಜನರ ಜೀವಿಸುವ ಹಕ್ಕಿನ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿತು.

ಅಂತೆಯೇ ರಸ್ತೆ ಗುಂಡಿ ಅಪಘಾತಕ್ಕೆ ಕಾರಣರಾದವರನ್ನು ಹಣಕಾಸಿನ ನೆಲೆಯಿಂದ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡದಿದ್ದರೆ ಅವರಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗುವುದಿಲ್ಲ ಎಂದು ಪೀಠ ನುಡಿಯಿತು. 

ಆದ್ದರಿಂದ ಗುಂಡಿ ಅಥವಾ ಮ್ಯಾನ್‌ಹೋಲ್‌ ಕಾರಣಕ್ಕೆ ಅಪಘಾತಕ್ಕೀಡಾದ ಸಂತ್ರಸ್ತರಿಗೆ ಪರಿಹಾರ ವಿತರಣೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅದು ಹಾಗೆ ಮಾಡಿದರೆ ಮಾತ್ರ ಸಂಬಂಧಪಟ್ಟ ಸಂಸ್ಥೆಗಳಿಗೆ ಎಚ್ಚರಿಕೆ ಗಂಟೆಯಾಗುತ್ತದೆ ಎಂದಿತು.

Also Read
ರಸ್ತೆ ಗುಂಡಿ ಸಮಸ್ಯೆ: ಪರಿಹಾರ ಕಾರ್ಯವಿಧಾನದ ಮಾಹಿತಿ ತಿಳಿಸಲು ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

ಸಂತ್ರಸ್ತರು ದಾವೆ ಸಲ್ಲಿಸಿದ ನಂತರ 6 ರಿಂದ 8 ವಾರಗಳೊಳಗೆ ಪರಿಹಾರ ಮೊತ್ತ ಪಾವತಿಸಬೇಕು. ವಿಳಂಬವಾದರೆ ಬಡ್ಡಿ ವಿಧಿಸಲಾಗುವುದು. ಸಂಸ್ಥೆ ಒಮ್ಮೆ ಪರಿಹಾರ ನೀಡಿದ ನಂತರ, ಆ ಮೊತ್ತವನ್ನು ತಪ್ಪಿತಸ್ಥ ಅಥವಾ ಗುತ್ತಿಗೆದಾರರಿಂದ ವಸೂಲಿ ಮಾಡಬಹುದು.

ಪ್ರತಿಯೊಂದು ನಗರ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಬೇಕು. ಆ ಸಮಿತಿಗಳು ಗುಂಡಿ ಅಥವಾ ಮ್ಯಾನ್‌ಹೋಲ್ ಅಪಘಾತಗಳ ತನಿಖೆ ನಡೆಸಿ ಪರಿಹಾರ ನಿಗದಿಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಸಾವು ಅಥವಾ ಅಪಘಾತಕ್ಕೆ ಸಂಬಂಧಿಸಿದ ಮಾಹಿತಿ ಸ್ವೀಕರಿಸಿದ ಏಳು ದಿನಗಳ ಒಳಗೆ ಈ ಸಮಿತಿಗಳು ಸಭೆ ಸೇರಬೇಕು. ಸಂಬಂಧಪಟ್ಟವರು 48 ಗಂಟೆಗಳೊಳಗೆ ಗುಂಡಿ ಸರಿಪಡಿಸದಿದ್ದರೆ ಅದನ್ನು ಗಂಭೀರ ನಿರ್ಲಕ್ಷ್ಯ ಎಂದು ಪರಿಗಣಿಸಲಾಗುವುದು. ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಅಥವಾ ಕ್ರಿಮಿನಲ್ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ವಿವರಿಸಿದೆ.

Kannada Bar & Bench
kannada.barandbench.com