
ಆಶ್ರಯ ಗೃಹದಲ್ಲಿದ್ದ ಮಾನಸಿಕ ಅಸ್ವಸ್ಥ ಹುಡುಗಿಯರನ್ನು ಅಧಿಕೃತ ಅನುಮತಿ ಇಲ್ಲದೆ ಬಾರ್ ನರ್ತಕಿಯರ ನೃತ್ಯ ಪ್ರದರ್ಶನ ಹಾಗೂ ಮದ್ಯ ವ್ಯವಸ್ಥೆ ಏರ್ಪಡಿಸಲಾಗಿದ್ದ ಮೋಜಿನ ಕೂಟಕ್ಕೆ ಕರೆದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಹನ್ನೆರಡು ವರ್ಷಗಳ ಬಳಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ [ ಸಂಗೀತ ಸಂದೀಪ್ ಪುಣೇಕರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ]. 2012ರಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಧಿಕೃತ ಅನುಮತಿ ಇಲ್ಲದೆ 26 ಮಾನಸಿಕ ಅಸ್ವಸ್ಥೆಯರನ್ನು ಮೋಜಿನ ಕೂಟವೊಂದಕ್ಕೆ ಕರೆದೊಯ್ಯಲಾಗಿತ್ತು.
ಪ್ರಕರಣದ ತನಿಖೆ ನಡೆಸಿ ಆರು ವಾರಗಳಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಂಗವಿಕಲರ ಆಯುಕ್ತರಿಗೆ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರಿದ್ದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಅಂತೆಯೇ ತನಿಖಾ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಂಡು ಮೂರು ತಿಂಗಳೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಅದು ಆದೇಶಿಸಿದೆ.
ಸಮಾಜ ಸೇವಕಿ ಸಂಗೀತಾ ಸಂದೀಪ್ ಪುಣೇಕರ್ ಅವರು 2014ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.
ಡಿಸೆಂಬರ್ 31, 2012ರಂದು ಮಂಖುರ್ಡ್‌ನಲ್ಲಿರುವ ಚಿಲ್ಡ್ರನ್ ಏಡ್ ಸೊಸೈಟಿ ಆಶ್ರಯ ಗೃಹದ ಬಾಲಕರ ವಿಭಾಗದೊಳಗಿನ ಅಗರವಾಲ್ ಸಭಾಂಗಣದಲ್ಲಿ ಅನಧಿಕೃತವಾಗಿ ಹೊಸ ವರ್ಷದ ಮನರಂಜನಾ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಬಾರ್ ನರ್ತಕಿಯರು ಪ್ರದರ್ಶನ ನೀಡಿದ ಕಾರ್ಯಕ್ರಮದಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು. 26 ಮಾನಸಿಕ ಅಸ್ವಸ್ಥ ಹುಡುಗಿಯರನ್ನು ಪಾರ್ಟಿಗೆ ಕರೆತರಲಾಗಿತ್ತು. ಅವರೆಲ್ಲಾ ಬೆಳಗಿನ ಜಾವ 3:15 ರವರೆಗೆ ಅಲ್ಲಿಯೇ ಇದ್ದರು ಎಂದು ತಿಳಿದುಬಂದಿತ್ತು ಎಂಬುದಾಗಿ ಅರ್ಜಿ ವಿವರಿಸಿದೆ.
ಕಾರ್ಯಕ್ರಮಕ್ಕೆ ಅನುಮತಿ ಕೋರಿರಲಿಲ್ಲ. ಪ್ರಕರಣವನ್ನು ಅಧಿಕಾರಿಗಳು ಹತ್ತಿಕ್ಕಿದ್ದಾರೆ. ಆಗ ಟ್ರಾಂಬೆ ಪೊಲೀಸರು ಆಯೋಜಕರಿಗೆ ಕ್ಲೀನ್ ಚಿಟ್ ನೀಡಿದ್ದು ಘಟನೆ ಕುರಿತು ಈವರೆಗೆ ಸೂಕ್ತ ತನಿಖೆ ನಡೆದಿಲ್ಲ ಎಂದು ಅರ್ಜಿದಾರೆ ದೂರಿದ್ದರು.
ಆಗಸ್ಟ್ 6, 2014ರಂದು ಹೊರಡಿಸಲಾದ ತನ್ನ ಮೊದಲ ಆದೇಶದಲ್ಲಿ, ಘಟನೆ ಆಘಾತಕಾರಿ ಎಂದು ಹೈಕೋರ್ಟ್ ಹೇಳಿತ್ತು. ತನಿಖೆ ನಡೆಸುವಂತೆ ಅಪರಾಧ ವಿಭಾಗಕ್ಕೆ ಸೂಚಿಸಿದ್ದ ಅದು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರನ್ನು ಒಳಗೊಂಡ ಸಮಿತಿ ರಚನೆಗೆ ಸೂಚಿಸಿತ್ತು. ಅಲ್ಲದೆ ಘಟನೆಯನ್ನು ಬೆಳಕಿಗೆ ತಂದವರು ಅಧಿಕಾರಿಗಳಿಂದ ಬೆದರಿಕೆ ಎದುರಿಸುತ್ತಿದ್ದು ಅವರಿಗೆ ರಕ್ಷಣೆ ನೀಡುವಂತೆ ಹೇಳಿತ್ತು.
ಇಷ್ಟಾದರೂ ಪ್ರಕರಣ ಒಂದು ದಶಕಕ್ಕೂ ಹೆಚ್ಚು ಕಾಲ ಇತ್ಯರ್ಥವಾಗದೆ ಉಳಿದಿತ್ತು. ಕ್ರಮ ಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಇಂದು (ಜೂನ್ 16, 2025) ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿಯೊಂದನ್ನು 11 ವರ್ಷಗಳ ಕಾಲ ಹೀಗೆ ಬಾಕಿ ಇಡುವಂತಿಲ್ಲ. ಸರ್ಕಾರಿ ಅಧಿಕಾರಿಗಳು ತಪ್ಪು ಮಾಡಿದವರನ್ನು ರಕ್ಷಿಸಲು ಸಾಧ್ಯವಿಲ್ಲ. ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ತನಿಖೆ ನಡೆಸಿದ್ದಾರೆಯೇ? ಯಾವ ಕ್ರಮ ಕೈಗೊಳ್ಳಲಾಗಿದೆ? ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದೇವೆ. ಇಲ್ಲದೆ ಹೋದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬೇಕಾದೀತು ಎಂದು ಅದು ಎಚ್ಚರಿಕೆ ನೀಡಿತು.
ಸರ್ಕಾರಿ ಅಧಿಕಾರಿಗಳನ್ನು ಇನ್ನಷ್ಟು ಟೀಕಿಸಿದ ಅದು ನಿಮ್ಮ ಅಧಿಕಾರಿಗಳ ಬಗ್ಗೆ ನಿಮಗೆ ನಾಚಿಕೆಯಾಗಬೇಕು. ತನಿಖೆ ನಡೆಸುತ್ತೇವೆ ಎಂದು ಹೇಳುವ ಧೈರ್ಯ ನಿಮಗೆ ಇದೆಯೇ?” ಎಂದು ಕಿಡಿಕಾರಿತು.