
ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ₹229 ಕೋಟಿ ವೆಚ್ಚದ ಪ್ರಯಾಣಿಕರ ಜೆಟ್ಟಿ ನಿರ್ಮಾಣ ಯೋಜನೆಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ್ದು ಆ ಸ್ಥಳ ಹಾಗೂ ಅದರ ಸುತ್ತಮುತ್ತ ಎಂತಹ ಸೌಲಭ್ಯ ಒದಗಿಸಬೇಕು ಎಂಬ ಬಗ್ಗೆ ಷರತ್ತುಗಳನ್ನು ವಿಧಿಸಿದೆ [ ಕ್ಲೀನ್ ಅಂಡ್ ಹೆರಿಟೇಜ್ ಕೊಲಾಬಾ ರೆಸಿಡೆಂಟ್ಸ್ ಅಸೋಸಿಯೇಷನ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪ್ರಸ್ತಾವಿತ ಜೆಟ್ಟಿ ಟರ್ಮಿನಲ್ ಪ್ರಶ್ನಿಸಿ ಸಲ್ಲಿಸಲಾದ ಎರಡು ಅರ್ಜಿಗಳನ್ನು ವಿಲೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಸ್ಥಳದ ಆಂಫಿಥಿಯೆಟರನ್ನು ಕೂರುವ ಸ್ಥಳಾವಕಾಶವಾಗಿ ಮಾತ್ರ ಬಳಸಬೇಕೆ ವಿನಾ ಮನರಂಜನಾ ಉದ್ದೇಶಕ್ಕಲ್ಲ; ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಕೆಫೆಯಲ್ಲಿ ನೀರು ಮತ್ತು ಪೊಟ್ಟಣ ಕಟ್ಟಿದ ಆಹಾರವನ್ನು ಮಾತ್ರ ಪೂರೂಸಬೇಕೆ ವಿನಾ ಅಲ್ಲಿ ಊಟ ಬಡಿಸುವಂತಿಲ್ಲ; ಹಾಲಿ ಇರುವ ಜೆಟ್ಟಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಬೇಕು ಎಂಬಂತಹ ಷರತ್ತುಗಳನ್ನು ಅದು ವಿಧಿಸಿದೆ.
ಅಲ್ಲದೆ ಪ್ರಸ್ತಾವಿತ ಯೋಜನೆಯಲ್ಲಿ ಒಳಚರಂಡಿ ಸಂಸ್ಕರಣಾ ಸೌಲಭ್ಯ ಇಲ್ಲದಿರುವುದನ್ನು ಅದು ಪ್ರಸ್ತಾಪಿಸಿತು. ಆದರೆ ಯೋಜನೆ ಸ್ಥಗಿತಕ್ಕೆ ನಿರಾಕರಿಸಿದ ಅದು ಯೋಜನೆ ಜಾರಿಯಲ್ಲಿ ಸಮತೋಲಿತ ಮತ್ತು ಸುಸ್ಥಿರ ವಿಧಾನ ಅನುಸರಿಸಬೇಕು ಎಂದಿತು. ಪ್ರಸ್ತಾವಿತ ಜೆಟ್ಟಿಯ ಪ್ರಮುಖ ಉದ್ದೇಶ ಪ್ರಯಾಣಿಕರ ಸಂಚಾರಕ್ಕೆ ಮಾತ್ರವೇ ಇರಬೇಕೆ ವಿನಾ ಬೇರೆ ಉದ್ದೇಶಗಳಿಗೆ ಅಲ್ಲ ಎಂದು ಅದು ಹೇಳಿತು.
ಗೇಟ್‌ವೇ ಆಫ್ ಇಂಡಿಯಾದ ಪಾರಂಪರಿಕ ಪ್ರದೇಶದ ಬಳಿಯ ಪ್ರಯಾಣಿಕರ ಜೆಟ್ಟಿ ಯೋಜನೆಯನ್ನು ವಿರೋಧಿಸಿ ಕ್ಲೀನ್ ಮತ್ತು ಹೆರಿಟೇಜ್ ಕೊಲಾಬಾ ನಿವಾಸಿಗಳ ಸಂಘ ಹಾಗೂ ವೈಯಕ್ತಿಕ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಯೋಜನೆಯನ್ನು ಮನಬಂದಂತೆ ರೂಪಿಸಲಾಗಿದ್ದು ಸಾರ್ವಜನಿಕರೊಂದಿಗೆ ಸಮಾಲೋಚಿಸಿ ಕೈಗೆತ್ತಿಕೊಂಡಿಲ್ಲ. ಐತಿಹಾಸಿಕ ಮಹತ್ವ ಇರುವ ಸಮುದ್ರ ತೀರದ ಸ್ವರೂಪವನ್ನು ಯೋಜನೆ ಗಂಭೀರವಾಗಿ ಹಾನಿಗೊಳಪಡಿಸುತ್ತದೆ. ವಿಐಪಿ ಲಾಂಜ್‌ಗಳು,150 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೆಲೆಬ್ರಿಟಿ ವಿಹಾರ ನೌಕೆ ಮತ್ತು ಖಾಸಗಿ ದೋಣಿಗಳಿಗೆ ಜೆಟ್ಟಿ ಸೇವೆ ಒದಗಿಸುತ್ತದೆ. ಔತಣಕೂಟಗಳಲ್ಲಿ ಭಾಗಿಯಾಗುವ ಜನರಿಗೆ ಅನುಕೂಲ ಮಾಡಿಕೊಡುತ್ತದೆ. ಇದು ಸಮಾಜದ ಒಂದು ವರ್ಗಕ್ಕೆ ಮಾತ್ರವೇ ಪ್ರಯೋಜನ ನೀಡುತ್ತದೆ ಎಂಬುದು ಅರ್ಜಿದಾರರ ವಾದಗಳ ಪ್ರಮುಖ ಅಂಶವಾಗಿತ್ತು.