
ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ₹229 ಕೋಟಿ ವೆಚ್ಚದ ಪ್ರಯಾಣಿಕರ ಜೆಟ್ಟಿ ನಿರ್ಮಾಣ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಬಾಂಬೆ ಹೈಕೋರ್ಟ್ ಈಗಾಗಲೇ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ ಎಂದ ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸೀಹ್ ಅವರಿದ್ದ ಪೀಠ ಅದರಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಆದರೆ ಮಳೆಗಾಲ ಮುಗಿಯುವ ಮುನ್ನ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಅದು ಹೈಕೋರ್ಟ್‌ಗೆ ಸೂಚಿಸಿತು.
'ನಮ್ಮ ಹಿತ್ತಲಲ್ಲಿ ಬೇಡʼ (ಬೇರೆಡೆ ಯೋಜನೆ ಮಾಡುವುದಕ್ಕೆ ಚಕಾರ ಎತ್ತದಿದ್ದರೂ ತಮ್ಮ ಕುತ್ತಿಗೆಗೆ ಬಂದಾಗ ಅದನ್ನು ವಿರೋಧಿಸುವ ಮನೋಭಾವ) ಎಂಬ ಸಿಂಡ್ರೋಮ್‌ನಿಂದ ಇಂತಹ ಯೋಜನೆಗಳಿಗೆ ಆಕ್ಷೇಪ ಕೇಳಿ ಬರುತ್ತದೆ ಎಂದು ನ್ಯಾಯಾಲಯ ಹೇಳಿತು.
ಗೇಟ್‌ವೇ ಆಫ್ ಇಂಡಿಯಾದ ಪಾರಂಪರಿಕ ಪ್ರದೇಶದ ಬಳಿಯ ಪ್ರಯಾಣಿಕರ ಜೆಟ್ಟಿ ಯೋಜನೆಯನ್ನು ವಿರೋಧಿಸಿ ಕ್ಲೀನ್ ಮತ್ತು ಹೆರಿಟೇಜ್ ಕೊಲಾಬಾ ನಿವಾಸಿಗಳ ಸಂಘವು ಇತರ ವೈಯಕ್ತಿಕ ಅರ್ಜಿದಾರರೊಂದಿಗೆ ಸೇರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಯೋಜನೆಯನ್ನು ಮನಬಂದಂತೆ ರೂಪಿಸಲಾಗಿದ್ದು ಸಾರ್ವಜನಿಕರೊಂದಿಗೆ ಸಮಾಲೋಚಿಸಿ ಕೈಗೆತ್ತಿಕೊಂಡಿಲ್ಲ. ಐತಿಹಾಸಿಕ ಮಹತ್ವ ಇರುವ ಸಮುದ್ರ ತೀರದ ಸ್ವರೂಪವನ್ನು ಯೋಜನೆ ಸರಿಪಡಿಸಲಾಗದಷ್ಟು ಮುಕ್ಕಾಗಿಸುತ್ತದೆ. ವಿಐಪಿ ಲಾಂಜ್‌ಗಳು,150 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೆಲೆಬ್ರಿಟಿ ವಿಹಾರ ನೌಕೆ ಮತ್ತು ಖಾಸಗಿ ದೋಣಿಗಳಿಗೆ ಜೆಟ್ಟಿ ಸೇವೆ ಒದಗಿಸುತ್ತದೆ. ಔತಣಕೂಟಗಳಲ್ಲಿ ಭಾಗಿಯಾಗುವ ಜನರಿಗೆ ಅನುಕೂಲ ಮಾಡಿಕೊಡುತ್ತದೆ. ಇದು ಸಮಾಜದ ಒಂದು ವರ್ಗಕ್ಕೆ ಮಾತ್ರವೇ ಪ್ರಯೋಜನ ನೀಡುತ್ತದೆ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ವಾದಿಸಿದ್ದರು.
ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಅರ್ಜಿದಾರರ ವಾದವನ್ನು ಬಲವಾಗಿ ವಿರೋಧಿಸಿದರು. ಯೋಜನೆಯು ಕಾನೂನುಬದ್ಧವಾಗಿ ಸಾರ್ವಜನಿಕ ಉದ್ದೇಶವನ್ನು ಸಾಕಾರಗೊಳಿಸುತ್ತದೆ ಎಂದರು.
ನಗರ ಕೇಂದ್ರಗಳಲ್ಲಿ ನಾಗರಿಕ ಮೂಲಸೌಕರ್ಯ ಯೋಜನೆಗಳಿಗೆ ಸ್ಥಳೀಯ ಪ್ರತಿರೋಧ ಎದುರಾಗುವ ಮಾದರಿ ಎಲ್ಲೆಡೆ ಕಂಡುಬರುತ್ತದೆ ಎಂದು ಹೇಳಿದ ಸಿಜೆಐ ಗವಾಯಿ ಅವರು ಇಂತಹ ಯೋಜನೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದರೂ ತಮ್ಮ ಪ್ರದೇಶದಲ್ಲಿಯೇ ಯೋಜನೆ ಆರಂಭಗೊಳ್ಳುತ್ತಿದೆ ಎಂಬ ಕಾರಣಕ್ಕೆ ಸ್ಥಳೀಯರ ವಿರೋಧಕ್ಕೆ ಅವು ತುತ್ತಾಗುತ್ತವೆ ಎಂದು ತಿಳಿಸಿದರು.
ಬಾಂಬೆ ಹೈಕೋರ್ಟ್ ಈಗಾಗಲೇ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ಜೂನ್ 16ರಂದು ಮುಂದಿನ ವಿಚಾರಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ವಾದಗಳ ಅರ್ಹತೆ ಆಧಾರದಲ್ಲಿ ನಿರ್ದೇಶನ ನೀಡದೆ ಸುಪ್ರೀಂ ಕೋರ್ಟ್ ಅರ್ಜಿ ವಿಲೇವಾರಿ ಮಾಡಿತು.