ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಆರೋಪ: ಇಟಲಿ ಮೂಲದ ಪ್ರಾಡಾ ವಿರುದ್ಧದ ಪಿಐಎಲ್ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ಇಟಲಿಯ ಮಿಲಾನ್‌ನಲ್ಲಿ ನಡೆದ ಪ್ರಾಡಾದ ಫ್ಯಾಷನ್ ಶೋ ವಿವಾದದ ಮೂಲವಾಗಿತ್ತು. ಇಲ್ಲಿ ಪ್ರದರ್ಶಿತವಾದ ಉಂಗುಷ್ಠದ ಚಪ್ಪಲಿಗಳಿಗೂ ಕೊಲ್ಹಾಪುರಿ ಚಪ್ಪಲಿಗಳಿಗೂ ಗಮನಾರ್ಹ ಹೋಲಿಕೆ ಇದೆ ಎಂದು ಐವರು ವಕೀಲರು ಪಿಐಎಲ್‌ ಸಲ್ಲಿಸಿದ್ದರು.
ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಆರೋಪ: ಇಟಲಿ ಮೂಲದ ಪ್ರಾಡಾ ವಿರುದ್ಧದ ಪಿಐಎಲ್ ತಿರಸ್ಕರಿಸಿದ ಬಾಂಬೆ ಹೈಕೋರ್ಟ್
Published on

ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು ಅನಧಿಕೃತವಾಗಿ ಬಳಸಿದ್ದಕ್ಕಾಗಿ ಜಾಗತಿಕ ಫ್ಯಾಷನ್‌ ಸಂಸ್ಥೆ ಇಟಲಿ ಮೂಲದ ಪ್ರಾಡಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಬಾಂಬೆ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಅರ್ಜಿದಾರರು ಮತ್ತು ಪ್ರಾಡಾ ಪರ ವಕೀಲರ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರಿದ್ದ ಪೀಠ ಪಿಐಎಲ್‌ ವಜಾಗೊಳಿಸಿತು. “ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದಕ್ಕೆ ಕಾರಣಗಳಿವೆ” ಎಂದು ನ್ಯಾಯಾಲಯ ಹೇಳಿತು.

Also Read
ಬಾಟಾ, ಲಿಬರ್ಟಿ, ರಿಲ್ಯಾಕ್ಸೊ ವಿರುದ್ಧ ಕ್ರಾಕ್ಸ್ ಹೂಡಿದ್ದ ಮೊಕದ್ದಮೆಗೆ ದೆಹಲಿ ಹೈಕೋರ್ಟ್ ಮರುಜೀವ

ಪ್ರಾಡಾ, ಜೂನ್ 22 ರಂದು ಇಟಲಿಯ ಮಿಲಾನ್‌ನಲ್ಲಿ ನಡೆದ ತನ್ನ ಫ್ಯಾಷನ್ ಶೋನಲ್ಲಿ ಪ್ರದರ್ಶಿಸಿದ ಉಂಗುಷ್ಠದುಂಗುರದ ಪಾದರಕ್ಷೆಗಳ ಬೆಲೆ ಒಂದು ಜೋಡಿಗೆ ₹1 ಲಕ್ಷಕ್ಕೂ ಹೆಚ್ಚು. ಈ ಚಪ್ಪಲಿಗಳಿಗೂ ಕೊಲ್ಹಾಪುರಿ ಚಪ್ಪಲಿಗಳಿಗೂ ಭೌತಿಕವಾಗಿ ಗಮನಾರ್ಹ ಹೋಲಿಕೆ ಇದೆ ಎಂದು ಐವರು ವಕೀಲರು ಸಲ್ಲಿಸಿದ್ದ ಪಿಐಎಲ್‌ ಆತಂಕ ವ್ಯಕ್ತಪಡಿಸಿತ್ತು.

ಪ್ರಾಡಾದ ನಡೆ ಸಾಂಸ್ಕೃತಿಕ ದುರುಪಯೋಗವಾಗಿದ್ದು ಕೊಲ್ಹಾಪುರಿ ಚಪ್ಪಲಿಯೊಂದಿಗೆ ಚಾರಿತ್ರಿಕ ಸಂಬಂಧ ಹೊಂದಿರುವ ಕುಶಲಕರ್ಮಿಗಳ ಹಕ್ಕುಗಳ ಉಲ್ಲಂಘನೆ. ಸಂವಿಧಾನದ  21ನೇ ಅಡಿ ಒದಗಿಸಲಾದ ಜೀವಿಸುವ ಹಕ್ಕಿಗೆ ಧಕ್ಕೆಯಾಗಿದೆ. ಭೌಗೋಳಿಕ ಮಾನ್ಯತೆ (ಜಿಐ) ಪಡೆದ ಚಪ್ಪಲಿಯನ್ನು ವಾಣಿಜ್ಯೀಕರಣಗೊಳಿಸದಂತೆ ಪ್ರಾಡಾಗೆ ತಡೆ ನೀಡಬೇಕು. ಪ್ರಾಡಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಅರ್ಜಿ ಕೋರಿತ್ತು.

Also Read
ಐಕಿಯ ವಾಣಿಜ್ಯ ಚಿಹ್ನೆ ಪ್ರಕರಣ: ಐಕೀಗೆ ಮಧ್ಯಂತರ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್

ಪ್ರಾಡಾದ ವಿನ್ಯಾಸಕರು ಪಾದರಕ್ಷಗಳ ವಿನ್ಯಾಸ ಭಾರತದ ಮೂಲದ್ದೆಂದು ಎಲ್ಲಿಯೂ ಉಲ್ಲೇಖಿಸಿಲ್ಲ.‌ ಅವುಗಳನ್ನು ತಯಾರಿಸುವ ಭಾರತೀಯ ಕುಶಲಕರ್ಮಿಗಳನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದಾರೆ. ಪಾದರಕ್ಷೆಗಳ ಮೇಲೆ ಬ್ರಾಂಡ್‌ ಮುದ್ರೆ ಬಿದ್ದರೆ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಭೌಗೋಳಿಕ ಮಾನ್ಯತೆ ಪಡೆದಿರುವ ಚಪ್ಪಲಿಯ ಅಧಿಕೃತ ತಯಾರಕರ ಜೀವನೋಪಾಯ ಮತ್ತು ಘನತೆಯಿಂದ ಬದುಕುವ ಹಕ್ಕು ನೇರವಾಗಿ ಹಾಳಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

25ನೇ ವರ್ಗ (ಪಾದರಕ್ಷೆ)ಯಲ್ಲಿ ಅರ್ಜಿ ಸಂಖ್ಯೆ 169ರ ಅಡಿಯಲ್ಲಿ ನೋಂದಾಯಿಸಲಾದ ಕೊಲ್ಹಾಪುರಿ ಚಪ್ಪಲಿಗೆ ಮೇ 4, 2009ರಂದು ಅಧಿಕೃತವಾಗಿ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್‌) ನೀಡಲಾಗಿತ್ತು. ಇದನ್ನು 2019ರಲ್ಲಿ ನವೀಕರಿಸಲಾಗಿದ್ದು 2029ರವರೆಗೆ ಮಾನ್ಯವಾಗಿರಲಿದೆ.

ಕೊಲ್ಹಾಪುರಿಗೆ ಕರ್ನಾಟಕದ ನಂಟು: ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸತಾರಾ, ಸೊಲ್ಲಾಪುರ ಮಾತ್ರವಲ್ಲದೆ ಕರ್ನಾಟಕದ ಬೆಳಗಾವಿ ಧಾರವಾಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲೂ ಕೊಲ್ಹಾಪುರಿ ಚಪ್ಪಲಿ ತಯಾರಾಗುತ್ತವೆ. ಅದರಲ್ಲಿಯೂ ಅಥಣಿ ನಗರವು ಕೊಲ್ಹಾಪುರಿ ಚಪ್ಪಲಿಗಳಿಗೆ ಪ್ರಸಿದ್ಧ.

Kannada Bar & Bench
kannada.barandbench.com