ನಟ ಧ್ರುವ ಸರ್ಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸದಂತೆ ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್ ತಡೆ

₹3 ಕೋಟಿ ಪಾವತಿಸಿದರೂ ಚಿತ್ರ ಪೂರ್ಣಗೊಳಿಸಲು ನಟ ಧ್ರುವ ವಿಫಲರಾಗಿದ್ದಾರೆ ಎಂದು ನಿರ್ಮಾಪಕರೊಬ್ಬರು ಆರೋಪಿಸಿದ್ದರು.
Dhruva Sarja
Dhruva Sarja
Published on

ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕನ್ನಡ ನಟ ಧ್ರುವ ಸರ್ಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸದಂತೆ ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪಪಟ್ಟಿ ಸಲ್ಲಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಎ ಅಂಖದ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Also Read
ಪ್ರೇಮ್‌ಜಿ ಇನ್‌ವೆಸ್ಟ್‌ ಹೆಸರಿನಲ್ಲಿ ವಂಚನೆ: ಆ್ಯಪ್, ಜಾಲತಾಣಗಳ ನಿರ್ಬಂಧಕ್ಕೆ ದೆಹಲಿ ಹೈಕೋರ್ಟ್ ಆದೇಶ

ಧ್ರುವ ಅವರ ಅರ್ಜಿ ಪರಿಗಣಿಸುವ ಮೊದಲು ಅವರ ಪ್ರಾಮಾಣಿಕತೆ ಸಾಬೀತಿಗಾಗಿ  ₹3.10 ಕೋಟಿಯನ್ನು ನ್ಯಾಯಾಲಯಕ್ಕೆ ಠೇವಣಿ ಇಡುವಂತೆ ಕಳೆದ ತಿಂಗಳು, ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ರಾಜೇಶ್ ಎಸ್. ಪಾಟೀಲ್ ಅವರಿದ್ದ ಪೀಠ ನಿರ್ದೇಶಿಸಿತ್ತು.

ಮುಂಬೈ ಮೂಲದ ನಿರ್ಮಾಪಕ-ನಿರ್ದೇಶಕ ರಾಘವೇಂದ್ರ ಹೆಗ್ಡೆ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ನಗರದ ಪೊಲೀಸರು ಕಳೆದ ತಿಂಗಳು ಎಫ್‌ಐಆರ್‌ ದಾಖಲಿಸಿದ್ದರು.

ಧ್ರುವ ಸರ್ಜಾ (ಧ್ರುವ ಕುಮಾರ್ ಎಂದೂ ಕರೆಯುತ್ತಾರೆ) ಅವರ ವಿರುದ್ಧ ಹೆಗ್ಡೆ ಅವರು ವಂಚನೆ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹದ ಆರೋಪ ಹೊರಿಸಿದ್ದರು. 2016 ಮತ್ತು 2018ರ ನಡುವೆ 'ದಿ ಸೋಲ್ಜರ್' ಎಂಬ ಚಲನಚಿತ್ರದಲ್ಲಿ ನಟಿಸಲು ಧ್ರುವ ಅವರಿಗೆ ₹3 ಕೋಟಿ ಮುಂಗಡವಾಗಿ ನೀಡಲಾಗಿತ್ತು. ಆದರೂ ಚಿತ್ರ ಸೆಟ್ಟೇರಲಿಲ್ಲ ಮತ್ತು ಧ್ರುವ ಅವರು ಚಿತ್ರ ಪೂರ್ಣಗೊಳಿಸಲು ಅಥವಾ ಹಣ ಮರಳಿಸಲು ಮುಂದಾಗಲಿಲ್ಲ ಎಂದು ಅವರು ಆರೋಪಿಸಿದ್ದರು.  

Also Read
ಶಾದಿ ಡಾಟ್ ಕಾಮ್ ಸಂಸ್ಥಾಪಕನ ವಿರುದ್ಧದ ವಂಚನೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ

2018ರಿಂದ ವಾರ್ಷಿಕ 18% ಬಡ್ಡಿಯೊಂದಿಗೆ, ಒಟ್ಟು ನಷ್ಟ ₹ 9 ಕೋಟಿಗೂ ಹೆಚ್ಚಾಗಿದೆ ಎಂದು ಹೆಗ್ಡೆ ಹೇಳಿದ್ದರು.

ಸರ್ಜಾ ಅವರು ₹3 ಕೋಟಿ ಹಣ ಪಡೆದಿರುವುದಾಗಿ ಅವರ ಕಾನೂನು ತಂಡ ತಿಳಿಸಿದೆಯಾದರೂ ಡಿಸೆಂಬರ್ 2023ರವರೆಗೆ ಯಾವುದೇ ಕಾರ್ಯಸಾಧ್ಯವಾದ ಚಿತ್ರಕತೆಯನ್ನು ತಲುಪಿಸಿಲ್ಲ.‌ ಜೊತೆಗೆ ನಟ ಮುಂದುವರೆಯಲು ಇಷ್ಟ ಇಲ್ಲ ಎಂಬ ಕಾರಣಕ್ಕೆ ವಿಳಂಬ ಉಂಟಾಗಿಲ್ಲ ಎಂದು ವಾದಿಸಿತು.

Kannada Bar & Bench
kannada.barandbench.com