ಪೋಕ್ಸೊ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ: ಸೆಷನ್ಸ್ ನ್ಯಾಯಾಲಯದ ವರದಿ ಕೇಳಿದ ಬಾಂಬೆ ಹೈಕೋರ್ಟ್

ಪ್ರಕರಣಗಳ ಬಾಕಿ ಉಳಿಯುವಿಕೆ ಆತಂಕಾರಿಯಾಗಿರುವುದರಿಂದ ಪೋಕ್ಸೊ ಕಾಯಿದೆಯಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಗಳು ಈಗಾಗಲೇ ಒತ್ತಡದಲ್ಲಿವೆ ಎಂದು ಪೀಠದ ಆದೇಶ ತಿಳಿಸಿದೆ.
ಪೋಕ್ಸೊ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ: ಸೆಷನ್ಸ್ ನ್ಯಾಯಾಲಯದ ವರದಿ ಕೇಳಿದ ಬಾಂಬೆ ಹೈಕೋರ್ಟ್
Published on

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ಏಕೆ ಉಂಟಾಗುತ್ತಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ಮುಂಬೈ ಸೆಷನ್ಸ್‌ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ.

ಪೊಕ್ಸೊ ನ್ಯಾಯಾಲಯಗಳು ಕಾಯಿದೆಯ ನಿಯಮಾವಳಿಗಳಿಗೆ ಬದ್ಧವಾಗಿರಲು ಏಕೆ ವಿಫಲವಾಗಿವೆ ಎಂಬ ಕುರಿತಂತೆಯೂ ವಿವರ ನೀಡುವಂತೆ ನ್ಯಾ. ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠ ಸೂಚಿಸಿತು.

Also Read
[ಪೋಕ್ಸೊ] ಬಾಲಕರನ್ನು ಅಪರಾಧಿಗಳಂತೆ ಕಾಣುವುದು ಕಾಯಿದೆ ಉದ್ದೇಶವಲ್ಲ ಎಂದು ವಾದ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಪ್ರಕರಣಗಳ ಬಾಕಿ ಉಳಿಯುವಿಕೆ ಆತಂಕಾರಿಯಾಗಿರುವುದರಿಂದ ಪೋಕ್ಸೊ ಕಾಯಿದೆಯಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಗಳು ಈಗಾಗಲೇ ಒತ್ತಡದಲ್ಲಿವೆ ಎಂದು ಪೀಠದ ಆದೇಶ ತಿಳಿಸಿದೆ. ನಗರದ ವಿಶೇಷ ನ್ಯಾಯಾಲಯಗಳಲ್ಲಿ ಬಾಕಿ ಇರುವ ನೂರಾರು ಪೋಕ್ಸೊ ಪ್ರಕರಣಗಳ ವರದಿಯನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.

2016ರಲ್ಲಿಆರೋಪಿಯನ್ನು ಬಂಧಿಸಲಾಗಿದ್ದರೂ ವಿಚಾರಣೆ ವಿಳಂಬವಾಗುತ್ತಿರುವುದರಿಂದ ಜಾಮೀನು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಈವರೆಗೆ, ಪೋಕ್ಸೊ ಪ್ರಕರಣಗಳನ್ನು ವಿಚಾರಣೆ ಮಾಡಲು ಗೊತ್ತುಪಡಿಸಿದ ವಿಚಾರಣಾ ನ್ಯಾಯಾಲಯಗಳಲ್ಲಿ ಮಾತ್ರ ನ್ಯಾಯಾಧೀಶರ ಹುದ್ದೆ ಖಾಲಿಯಾಗಿವೆ ಎಂದು ಪೀಠ ಹೇಳಿತು. ಪ್ರಸ್ತುತ ಪ್ರಕರಣವನ್ನು ಆರು ತಿಂಗಳು ಮೀರದಂತೆ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಡಿಂಡೋಶಿಯ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತು. ಮನವಿಯ ಮುಂದಿನ ವಿಚಾರಣೆ ಆಗಸ್ಟ್‌ 29ಕ್ಕೆ ನಿಗದಿಯಾಗಿದೆ.

Kannada Bar & Bench
kannada.barandbench.com