ಅನಿಲ್ ಅಂಬಾನಿ ವಿರುದ್ಧ ಬ್ಯಾಂಕ್‌ಗಳ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತಡೆ

ಬಿಡಿಒ ಕಂಪೆನಿಯ ವರದಿ ಆಧರಿಸಿ ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಹಾಗೂ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌ಗಳು ಶೋಕಾಸ್ ನೋಟಿಸ್‌ಗಳ ಆಧಾರದಲ್ಲಿ ಕ್ರಮಕ್ಕೆ ಮುಂದಾಗದಂತೆ ನ್ಯಾಯಾಲಯ ನಿ ರ್ಬಂಧಿಸಿತು.
Anil Ambani and Bombay High Court
Anil Ambani and Bombay High Court Twitter
Published on

ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಸಮೂಹ ಸಂಸ್ಥೆಗಳ ಕುರಿತು ಅಕ್ಟೋಬರ್ 2020ರಲ್ಲಿ ನಡೆದ ಲೆಕ್ಕ ಪರಿಶೋಧನಾ ತಪಾಸಣೆ ವರದಿ ಆಧರಿಸಿ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಹಾಗೂ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್ ಕೈಗೊಂಡಿದ್ದ ಎಲ್ಲ ಬಲವಂತದ ಕ್ರಮಗಳಿಗೆ ಬಾಂಬೆ ಹೈಕೋರ್ಟ್ ಬುಧವಾರ ತಡೆ ನೀಡಿದೆ [ಅನಿಲ್ ಅಂಬಾನಿ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಇನ್ನಿತರರ ನಡುವಣ ಪ್ರಕರಣ].

ವಂಚನೆ ಕುರಿತು 2016ರಲ್ಲಿದ್ದ ವ್ಯವಸ್ಥೆಯ ಬದಲಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2024ರಲ್ಲಿ ನೀಡಿದ್ದ ಮಹಾ ನಿರ್ದೇಶನಗಳಡಿ ಅಗತ್ಯವಿರುವಂತೆ ಆ ವರದಿಗೆ ಅರ್ಹ ಚಾರ್ಟರ್ಡ್ ಅಕೌಂಟೆಂಟ್ ಅವರ ಸಹಿ ಇರಲಿಲ್ಲವಾದ್ದರಿಂದ ಬಿಡಿಒ ಸಂಸ್ಥೆ ನೀಡಿದ ಲೆಕ್ಕಪರಿಶೋಧನಾ ವರದಿ ನಂಬಲರ್ಹವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ನ್ಯಾ. ಮಿಲಿಂದ್ ಜಾಧವ್ ಅವರಿದ್ದ ಪೀಠ ತಿಳಿಸಿತು.

Also Read
ಅನಿಲ್ ಅಂಬಾನಿ ಪುತ್ರನ ಖಾತೆ ವಂಚನೆ ವರ್ಗಕ್ಕೆ: ಬ್ಯಾಂಕ್ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಆರ್‌ಬಿಐ 2024ರಲ್ಲಿ ನೀಡಿದ್ದ ಮಹಾ ನಿರ್ದೇಶನಗಳಲ್ಲಿ, ಬಾಹ್ಯ ಲೆಕ್ಕಪರಿಶೋಧಕರು ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಡ್ಡಾಯ ಅರ್ಹತೆ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದ ಬಳಿಕ, ಚಾರ್ಟರ್ಡ್ ಅಕೌಂಟೆಂಟ್ ಅಲ್ಲದ ವ್ಯಕ್ತಿಯ ಸಹಿಯಿರುವ ವಿಶೇಷ ಲೆಕ್ಕಪರಿಶೋಧನಾ ವರದಿಯನ್ನು ಅರ್ಹ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇಂತಹ ವರದಿಯನ್ನು ಬ್ಯಾಂಕ್‌ಗಳು ದಂಡಾತ್ಮಕ ಕ್ರಮಗಳಿಗೆ ಬಳಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಬ್ಯಾಂಕ್‌ಗಳು ತಾವೇ ಆರ್‌ಬಿಐ ನಿರ್ದೇಶನಗಳಲ್ಲಿ ತಿಳಿಸಿರುವ ಕಾನೂನಾತ್ಮಕ ನಡಾವಳಿಯನ್ನು ಮತ್ತು ಕಾಲಮಿತಿಗಳನ್ನು ಪರಿಪಾಲಿಸದೆ ಇದ್ದರೆ ಮತ್ತು ಕ್ರಮ ಕೈಗೊಳ್ಳದೆ ಹೋದರೆ ಅದು ದೇಶದ ವಿಶಾಲ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

ದೀರ್ಘಕಾಲದ ನಿದ್ರೆಯಿಂದ ಎಚ್ಚೆತ್ತ ಬ್ಯಾಂಕ್‌ಗಳು 2013ರಿಂದ 2017ರ ನಡುವಿನ ಲೆಕ್ಕಪರಿಶೋಧನಾ ಅವಧಿಗೆ ಸಂಬಂಧಿಸಿದಂತೆ 2019ರಲ್ಲಿ ಲೆಕ್ಕಪರಿಶೋಧನಾ ತಪಾಸಣೆ ನಡೆಸಿವೆ. ಆದರೆ, 2016ರ ಆರ್‌ಬಿಐ ಮಹಾ ನಿರ್ದೇಶನಗಳಲ್ಲಿ ಉಲ್ಲೇಖಿಸಿದ್ದ ಕಾಲಮಿತಿಗಳನ್ನು ಪಾಲಿಸಿಲ್ಲ ಎಂದು ಪೀಠ ಕಿಡಿ ಕಾರಿತು.

Also Read
'ವಂಚನೆ ವರ್ಗಕ್ಕೆ ಬ್ಯಾಂಕ್ ಖಾತೆ ಸೇರಿಸುವ ಮುನ್ನ ಅನಿಲ್ ಅಂಬಾನಿ ಪುತ್ರನ ವಾದ ಆಲಿಸಲಾಗಿತ್ತೆ?ʼ ದೆಹಲಿ ಹೈಕೋರ್ಟ್

ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳು ಶೋ–ಕಾಸ್ ನೋಟಿಸ್‌ಗಳು ಮತ್ತು ವಂಚನೆ ವರ್ಗೀಕರಣ ಸಂಬಂಧಿತ ಕ್ರಮಗಳನ್ನು ಮುಂದುವರೆಸದಂತೆ ನ್ಯಾ. ಜಾಧವ್‌ ತಡೆಯಾಜ್ಞೆ ನೀಡಿದರು.

ಅಲ್ಲದೆ ಈ ಆದೇಶದ ಜಾರಿಗೆ ತಡೆ ನೀಡುವಂತೆ ಬ್ಯಾಂಕ್‌ಗಳು ಮತ್ತು ಬಿಡಿಒ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. “ಆರ್‌ಬಿಐಯ ಮಹಾ ನಿರ್ದೇಶನಗಳು ಕೇವಲ ಕಾಗದದ ಮೇಲಿರುವಂತಹವಲ್ಲ. ಬ್ಯಾಂಕ್‌ಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲು ದೀರ್ಘ ನಿದ್ರೆಯಿಂದ ಎಚ್ಚರಗೊಳ್ಳಲು ಅವು ಸಾಧನವೂ ಅದಲ್ಲ,” ಎಂದು ನ್ಯಾಯಮೂರ್ತಿಗಳು ಹೇಳಿದರು.

Kannada Bar & Bench
kannada.barandbench.com