

ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜಯ್ ಅನ್ಮೋಲ್ ಅಂಬಾನಿ ಅವರ ಮಾಲೀಕತ್ವದ ಕಂಪನಿಯ ಖಾತೆಯನ್ನು ವಂಚನೆಯ ಖಾತೆ ಎಂದು ವರ್ಗೀಕರಿಸಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಜಯ್ ಅಂಬಾನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ. ಬ್ಯಾಂಕ್ ಶೋಕಾಸ್ ನೋಟಿಸ್ ನೀಡದೆ ಅಥವಾ ತನ್ನ ವಾದ ಆಲಿಸದೆಯೇ, ಸ್ವಾಭಾವಿಕ ನ್ಯಾಯ ತತ್ವ ಉಲ್ಲಂಘಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು ಜಯ್ ಅನ್ಮೋಲ್ ವಾದಿಸಿದ್ದರು.
ಬ್ಯಾಂಕ್ ಹೀಗೆ ಮಾಡಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಾಜೇಶ್ ಅಗರ್‌ವಾಲ್ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿದೆ. ಖಾತೆಯನ್ನು ವಂಚನೆ ಎಂದು ಘೋಷಿಸುವ ಮೊದಲು ಸಾಲಗಾರರಿಗೆ ನೋಟಿಸ್ ನೀಡಿ ಅವರು ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿದೆ ಎಂದು ವಾದಿಸಲಾಗಿತ್ತು.
ಸುಪ್ರೀಂ ಕೋರ್ಟ್ ನೀಡಿರುವ ತೀರ್ರಪಿನ ಪ್ರಕಾರ ಈ ರೀತಿ ವರ್ಗೀಕರಿಸುವ ಮುನ್ನ ಸಾಲಗಾರರಿಗೆ ಮೊದಲೇ ನೋಟಿಸ್ ನೀಡಿ ಅವರು ಪ್ರತಿಕ್ರಿಯಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ತಿಳಿಸಿತು.
ಇದೇ ವೇಳೆ, ನ್ಯಾಯಾಲಯದ ಆದೇಶದಿಂದ ಬ್ಯಾಂಕ್‌ನ ಆದೇಶ ರದ್ದಾದರೂ ಹೊಸದಾಗಿ ಶೋಕಾಸ್ ನೋಟಿಸ್ ನೀಡಡಿ ಅಗತ್ಯ ದಾಖಲೆಗಳನ್ನು ಪೂರೈಸಿ ಮತ್ತೆ ಕ್ರಮ ಕೈಗೊಳ್ಳಲು ಯೂನಿಯನ್ ಬ್ಯಾಂಕ್‌ಗೆ ಅವಕಾಶ ಇದೆ. ಜಯ್ ಅನ್ಮೋಲ್ ಅವರು ಪ್ರತಿಕ್ರಿಯೆ ನೀಡಿದ ಬಳಿಕ ಬ್ಯಾಂಕ್ ಹೊಸ ಆದೇಶ ಹೊರಡಿಸಬಹುದಾಗಿದೆ ಎಂದು ಪೀಠ ಸ್ಪಷ್ಟಪಡಿಸಿತು. ಜಯ್ ಅನ್ಮೋಲ್ ಅವರ ಪರವಾಗಿ ಹಿರಿಯ ನ್ಯಾಯವಾದಿ ರಾಜೀವ್ ನಾಯರ್ ವಾದ ಮಂಡಿಸಿದರು.
ಹಿನ್ನೆಲೆ
ಸುಮಾರು ₹14,853 ಕೋಟಿ ಮೊತ್ತದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಸಮೂಹ ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇದೇ ವೇಳೆ ಜಯ್ ಅನ್ಮೋಲ್ ಅವರು ಸಾರ್ವಜನಿಕ ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚನೆ ಎಸಗಿ ₹228 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಬಿಐ ದೂರಿತ್ತು.
ವರದಿಗಳ ಪ್ರಕಾರ, ಜಯ್ ಅನ್ಮೋಲ್ ಅಂಬಾನಿ ನಿರ್ದೇಶಕರಾಗಿದ್ದ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್) ಭಾರಿ ಮೊತ್ತದ ಸಾಲ ಪಡೆದಿದ್ದರೂ ಅದನ್ನು ಮರುಪಾವತಿಸಿರಲಿಲ್ಲ. ವಿಶೇಷ ಲೆಕ್ಕ ಪರಿಶೋಧನೆ ವೇಳೆ ಹಣ ದುರುಪಯೋಗವಾಗಿರುವುದು ಕಂಡುಬಂದಿತ್ತು. ಪರಿಣಾಮ ಅವರ ಖಾತೆ ಅನುತ್ಪಾದಕ ಆಸ್ತಿ ಎಂದು ಘೋಷಿತವಾಯಿತು ಎಂದು ಸಿಬಿಐ ವಿವರಿಸಿತ್ತು.
ತನಗೆ ₹228 ಕೋಟಿ ರೂಪಾಯಿ ಎಂದು ಆರೋಪಿಸಿದ್ದ ಯೂನಿಯನ್ ಬ್ಯಾಂಕ್ ಅನಿಲ್ ಅವರ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಿತ್ತು. ನಂತರ, ಸಿಬಿಐ ಅನ್ಮೋಲ್ ಅಂಬಾನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು.