ಮಕ್ಕಳನ್ನು ಬಾವಿಗೆ ಎಸೆದು ಕೊಂದ ವ್ಯಕ್ತಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಮಕ್ಕಳ ಇರುವಿಕೆಯ ಬಗ್ಗೆ ತಂದೆ ಯಾವುದೇ ವಿವರಣೆ ನೀಡಲಿಲ್ಲ. ಇದರಿಂದಾಗಿ ಅವರನ್ನು ಕೊಲ್ಲುವ ಉದ್ದೇಶದಿಂದಲೇ  ತಂದೆ ಬಾವಿಗೆ ಎಸೆದಿದ್ದಾನೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.
Aurangabad Bench, Bombay High Court
Aurangabad Bench, Bombay High Court
Published on

ಹೆಂಡತಿಯೊಂದಿಗೆ ಜಗಳವಾಡಿ ತನ್ನ ಇಬ್ಬರು ಅಪ್ರಾಪ್ತ ಪುತ್ರರನ್ನು ಬಾವಿಗೆಸೆದು ಕೊಲೆಗೈದ ಆರೋಪಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ ಔರಂಗಾಬಾದ್‌ ಪೀಠ ಈಚೆಗೆ ಎತ್ತಿ ಹಿಡಿದಿದೆ [ ಸಂತೋಷ್ ಕಚಾರು ವಾಳುಂಜೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ವಿಚಾರಣಾ ನ್ಯಾಯಾಲಯವು ನೀಡಿದ್ದ  ಶಿಕ್ಷೆ ಪ್ರಶ್ನಿಸಿ ಆರೋಪಿ ಸಂತೋಷ್ ವಾಳುಂಜೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಆರ್.ಜಿ. ಅವಚತ್ ಮತ್ತು ನೀರಜ್ ಧೋಟೆ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತು.

Also Read
ಅಕ್ರಮ ಸಂಬಂಧದ ಆರೋಪ ಹೊರಿಸಿದ ಪತ್ನಿಯ ಇರಿದಿದ್ದ 91 ವರ್ಷದ ವೃದ್ಧನಿಗೆ ಕೇರಳ ಹೈಕೋರ್ಟ್ ಜಾಮೀನು

"ಮಕ್ಕಳು ತುಂಬಾ ಚಿಕ್ಕವರಾಗಿದ್ದರಿಂದ, ಅವರಿಗೆ ಏನು ಮಾಡಿದ ಅಥವಾ ಅವರು ಅವನಿಂದ ಹೇಗೆ ಬೇರ್ಪಟ್ಟರು ಎಂಬುದನ್ನು ವಿವರಿಸುವುದು ತಂದೆಯ ಜವಾಬ್ದಾರಿ. ಆದರೆ ಮೇಲ್ಮನವಿ ಸಲ್ಲಿಸಿರುವ ತಂದೆ ಈ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಹೀಗಾಗಿ ತೆಗೆದುಕೊಳ್ಳಬಹುದಾದ ಏಕೈಕ ತೀರ್ಮಾನ ಎಂದರೆ ಆತ ತಮ್ಮ ಮಕ್ಕಳನ್ನು ಕೊಲ್ಲುವ ಉದ್ದೇಶದಿಂದ ಅಥವಾ ಮಕ್ಕಳನ್ನು ಬಾವಿಗೆ ತಳ್ಳಿದರೆ ಅವರು ಸಾವಿಗೀಡಾಗುತ್ತಾರೆ ಎಂದು ಅರಿತೂ ಬಾವಿಗೆ ತಳ್ಳಿದ್ದಾನೆ ಎಂಬುದಾಗುತ್ತದೆ. ಆದ್ದರಿಂದ ಮೇಲ್ಮನವಿ ಸಲ್ಲಿಸಿದಾತನನ್ನು ವಿಚಾರಣಾ ನ್ಯಾಯಾಲಯ ಶಿಕ್ಷಿಸಿರುವುದು ಸೂಕ್ತವಾಗಿಯೇ ಇದೆ ಎಂದು ಅನ್ನಿಸಿದೆ” ಎಂಬುದಾಗಿ ಹೈಕೋರ್ಟ್‌ ವಿವರಿಸಿದೆ.

ಡಿಸೆಂಬರ್ 28, 2018ರಂದು ಹೆಂಡತಿಯೊಂದಿಗೆ ಜಗಳವಾಡಿದ ಬಳಿಕ ವಾಳುಂಜೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆ ತೊರೆದಿದ್ದ. ಮರುದಿನ ಆತನ ಮಕ್ಕಳ ಶವಗಳು ನಾಂದೇಡ್‌ನ ಸಾವರ್‌ಖೇಡ್‌ ಗ್ರಾಮದ ರೈತನೊಬ್ಬನ ಬಾವಿಯಲ್ಲಿ ತೇಲುತ್ತಿದ್ದುದು ಕಂಡುಬಂದಿತ್ತು. ರೈತ ದಾಖಲಿಸಿದ್ದ ದೂರಿನನ್ವಯ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದರು. ತನಿಖೆಯಲ್ಲಿ ವಾಳುಂಜೆ ತನ್ನ ಮಕ್ಕಳೊಂದಿಗೆ ಸುತ್ತಾಡಿದ್ದ; ಸಂಬಂಧಿಕರನ್ನು ಭೇಟಿ ಮಾಡಿದ್ದ; ಒಬ್ಬ ಸಂಬಂಧಿಕರ ಮನೆಯಲ್ಲಿ ರಾತ್ರಿ ತಂಗಿದ್ದ ವಿಚಾರ ತಿಳಿದುಬಂದಿತ್ತು. ಅಲ್ಲದೆ ಮಕ್ಕಳೊಂದಿಗೆ ಆತ ಇದ್ದುದನ್ನು ಹಲವು ಸಾಕ್ಷಿಗಳು ನೋಡಿದ್ದು ಕಂಡುಬಂದಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿತ್ತು.

ವಿಚಾರಣಾ ನ್ಯಾಯಾಲಯ ತಂದೆಯೇ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಪ್ರಕರಣ ಕೇವಲ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿದ್ದು, ಬಾವಿಗೆ ತಡೆಗೋಡೆ ಇರಲಿಲ್ಲ. ಮಕ್ಕಳು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು. ಅಲ್ಲದೆ ವೈವಾಹಿಕ ಕಲಹದಿಂದಾಗಿ ಪತ್ನಿ ಆತನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರಬಹುದು ಎಂದು ವಾಳುಂಜೆ ಪರ ವಕೀಲರು ವಾದಿಸಿದರು. 

Also Read
ಪೋಕ್ಸೊ ಪ್ರಕರಣ: ಅಲಾಹಾಬಾದ್ ಹೈಕೋರ್ಟ್ ವಿವಾದಾತ್ಮಕ ಆದೇಶಕ್ಕೆ ಸುಪ್ರೀಂ ತಡೆ

ಈ ವಾದ ತಿರಸ್ಕರಿಸಿದ ಹೈಕೋರ್ಟ್‌, ಪ್ರಾಸಿಕ್ಯೂಷನ್ ವಾದ ವಿಶ್ವಾಸಾರ್ಹವಾಗಿದ್ದು ಸನ್ನಿವೇಶಗಳ ಸರಣಿ ಒಂದಕ್ಕೊಂದು ತಾಳೆಯಾಗುತ್ತದೆ ಎಂದಿತು.

ಅಂತೆಯೇ ವೈವಾಹಿಕ ಭವಿಷ್ಯವನ್ನು ಬಲಿಗೊಟ್ಟು ಗಂಡನವಿರುದ್ಧ ಹೆಂಡತಿ ಸಾಕ್ಷ್ಯ ನುಡಿಯಲು ಯಾವುದೇ ಕಾರಣ ಇರುವುದಿಲ್ಲ. ಹೀಗಾಗಿ ಮೇಲ್ಮನವಿದಾರ ತನ್ನ ಹೆಂಡತಿಯೊಂದಿಗೆ ಜಗಳವಾಡಿ ಇಬ್ಬರು ಮಕ್ಕಳನ್ನು ಕರೆದೊಯ್ದ ಅಂಶ ಸಾಬೀತಾಗುತ್ತದೆ ಎಂದು ವಿಚಾರಣಾ ನ್ಯಾಯಾಲಯ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ತೀರ್ಪು ನೀಡಿರುವುದನ್ನು ಪರಿಗಣಿಸಿದ ಹೈಕೋರ್ಟ್‌ ಮೇಲ್ಮನವಿ ವಜಾಗೊಳಿಸಿತು.  

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Santosh_Kacharu_Walunje_v_State_of_Maharashtra_1
Preview
Kannada Bar & Bench
kannada.barandbench.com