ಅಕ್ರಮ ಸಂಬಂಧದ ಆರೋಪ ಹೊರಿಸಿದ ಪತ್ನಿಯ ಇರಿದಿದ್ದ 91 ವರ್ಷದ ವೃದ್ಧನಿಗೆ ಕೇರಳ ಹೈಕೋರ್ಟ್ ಜಾಮೀನು
ಬೇರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದ 88 ವರ್ಷದ ಪತ್ನಿಯನ್ನು ಇರಿದ ಆರೋಪ ಹೊತ್ತಿದ್ದ 91 ವರ್ಷದ ವ್ಯಕ್ತಿಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ [ತೇವನ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆರೋಪಿ ತೇವನ್‌ಗೆ ಜಾಮೀನು ನೀಡಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು ವಿವಾಹ ಯಶಸ್ವಿಯಾಗಲು ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು ಮಹತ್ವದ ಸಂಗತಿ ಎಂದು ದಂಪತಿಗೆ ತಿಳಿಹೇಳಿದರು.
“ಅರ್ಜಿದಾರ ತೇವನ್ ಅವರು ತನ್ನ ವೃದ್ಧಾಪ್ಯದಲ್ಲಿ ತನ್ನ ಏಕೈಕ ಶಕ್ತಿ ತನ್ನ 88 ವರ್ಷದ ಪತ್ನಿ ಕುಂಜಲಿ ಎಂದು ಅರಿಯಬೇಕು. ಅಂತೆಯೇ ಕುಂಜಲಿ ಕೂಡ ತನ್ನ ಏಕೈಕ ಶಕ್ತಿ ತೇವನ್ ಎಂದು ಭಾವಿಸಬೇಕು. ಪರಿಪೂರ್ಣ ದಂಪತಿ ಒಟ್ಟಿಗೆ ಬದುಕಿದಾಗ ಅದು ಉತ್ತಮ ವಿವಾಹ ಎನಿಸಿಕೊಳ್ಳುವುದಿಲ್ಲ. ಬದಲಿಗೆ ಅಪರಿಪೂರ್ಣ ದಂಪತಿ ತಮ್ಮ ಭಿನ್ನಾಭಿಪ್ರಾಯಗಳನ್ನು ಆನಂದಿಸಲು ಕಲಿಯುವುದು ಉತ್ತಮ ವಿವಾಹ ಎನಿಸಿಕೊಳ್ಳುತ್ತದೆ. ವಯಸ್ಸು ಪ್ರೀತಿಯ ಬೆಳಕನ್ನು ಮಂಕಾಗಿಸದು ಬದಲಿಗೆ ಇನ್ನಷ್ಟು ಮಿನುಗಿಸುತ್ತದೆ ಎಂದು ತೇವನ್ ಮತ್ತು ಕುಂಜಲಿ ತಿಳಿದಿರಬೇಕು” ಎಂದು ನ್ಯಾಯಾಲಯ ವಿವರಿಸಿತು.
ವೃದ್ಧಾಪ್ಯದಲ್ಲಿ ಜನರು ತಮ್ಮ ಸಂಗಾತಿಗಳ ಮೇಲೆ ಅವಲಂಬಿತರಾಗುತ್ತಾರೆ. ಬದುಕಿನ ಇಂತಹ ಮಾಗಿದ ಹೊತ್ತಿನಲ್ಲಿ ಒಡನಾಟ ಮತ್ತು ಪರಸ್ಪರ ಆರೈಕೆ ಮಹತ್ವದ್ದಾಗಿರುತ್ತದೆ.
"ತೇವನ್ ತನ್ನ ವೃದ್ಧಾಪ್ಯದಲ್ಲಿ ತನ್ನ ಹೆಂಡತಿ ಮಾತ್ರ ಸಂಗಾತಿಯಾಗಿ ಇರುತ್ತಾಳೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ತೇವನ್ ಮತ್ತು ಕುಂಜಲಿ ತಮ್ಮ ಜೀವನದ ಇನ್ನಿಂಗ್ಸ್ ಅನ್ನು ಸಂತೋಷದಿಂದ ಪೂರ್ಣಗೊಳಿಸಲಿ. ಅವರ ಸಂತೋಷದ ಜೀವನಕ್ಕಾಗಿ, ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ತೇವನ್ ಕುಂಜಲಿ ಅವರನ್ನು ನೋಡಿಕೊಳ್ಳಬೇಕು ಮತ್ತು ಕುಂಜಲಿ ತೇವನ್ ಅವರನ್ನು ನೋಡಿಕೊಳ್ಳಬೇಕು ಎಂದು ಈ ನ್ಯಾಯಾಲಯವು ಆಶಿಸುತ್ತದೆ" ಎಂಬುದಾಗಿ ಪೀಠ ನುಡಿಯಿತು.
ಈ ಸಂದರ್ಭದಲ್ಲಿ ಕವಿ ಎನ್ ಎನ್ ಕಕ್ಕಡ್ ಅವರ ʼಸಫಲಮೀ ಯಾತ್ರೆʼ ಕೃತಿಯ ಹೃದಯಸ್ಪರ್ಶಿ ಸಾಲುಗಳನ್ನು ಉದ್ದರಿಸಿದ ನ್ಯಾಯಾಲಯವು 'ನಾವು ಮಾಗಿದಂತೆಲ್ಲಾ ನಮ್ಮ ನಡುವಿನ ಒಲುಮೆಯು ಮತ್ತಷ್ಟು ಗಾಢವಾಗುತ್ತದೆʼ ಎಂಬ ಸಾಲುಗಳನ್ನು ಉಲ್ಲೇಖಿಸಿತು.
" 91 ವರ್ಷ ವಯಸ್ಸಿನ ತೇವನ್, 88 ವರ್ಷ ವಯಸ್ಸಿನ ಪತ್ನಿ ಕುಂಜಲಿ ಅವರೊಂದಿಗೆ ವೃದ್ಧಾಪ್ಯದಲ್ಲಿ ಸಂತೋಷದಿಂದ ಬದುಕಲಿ. ಅವರ ಜೀವನ ಸಂತೋಷದಾಯಕವಾಗಿರಲಿ " ಎಂದು ತೇವನ್‌ಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯ ನುಡಿಯಿತು.
ತೇವನ್ ಅವರು ಇಬ್ಬರ ಭದ್ರತೆಯೊಂದಿಗೆ ₹50,000 ಬಾಂಡ್ ಒದಗಿಸಬೇಕು. ಅಗತ್ಯವಿದ್ದಾಗ ತನಿಖೆಗೆ ಸಹಕರಿಸಬೇಕು ಎಂದು ನಿರ್ದೇಶಿಸಿತು
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]