ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿದ್ದ ಬುಲ್ಲಿ ಬಾಯ್ ಪ್ರಕರಣದ ಆರೋಪಿಗಳಾದ ವಿಶಾಲ್ ಝಾ, ಮಯಾಂಕ್ ರಾವತ್ ಮತ್ತು ಶ್ವೇತಾ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಜನವರಿ 18, 2022 ರಂದು ತೀರ್ಪನ್ನು ಕಾಯ್ದಿರಿಸಿದ ನಂತರ ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ ಸಿಂಗ್ ರಜಪೂತ್ ಇಂದು ತೀರ್ಪು ಪ್ರಕಟಿಸಿದರು.
ತಾವು ಯಾವುದೇ ಅಪರಾಧ ಮಾಡಿಲ್ಲ ಮತ್ತು ಕ್ರಿಮಿನಲ್ ಹಿನ್ನೆಲೆಯೇ ಇಲ್ಲದ ನಮ್ಮನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ ತಾವು ಯಾವುದೇ ಮೊಬೈಲ್ ಅಪ್ಲಿಕೇಶನ್‌ಗಳನ್ನು ರೂಪಿಸಿಲ್ಲ ಅಥವಾ ಪ್ರಕರಣದ ಇತರ ಆರೋಪಿಗಳೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಆರೋಪಿಗಳಾದ ಬೆಂಗಳೂರು ಮೂಲದ ವಿದ್ಯಾರ್ಥಿ ವಿಶಾಲ್ ಝಾ, ಉತ್ತರಾಖಂಡ ನಿವಾಸಿಗಳಾದ ಶ್ವೇತಾ ಸಿಂಗ್ ಹಾಗೂ ಮಯಾಂಕ್ ರಾವತ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ತನಿಖಾಧಿಕಾರಿಗಳಿಗೆ ತಮ್ಮ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಒಪ್ಪಿಸಲಾಗಿದೆ. ತನಿಖೆಗೆ ಸಹಕರಿಸುತ್ತಿದ್ದು ಸಾಕ್ಷ್ಯ ಹಾಳು ಮಾಡಿಲ್ಲ ಎಂದು ಆರೋಪಿಗಳು ಹೇಳಿದ್ದರು. ಮಾತ್ರವಲ್ಲದೆ, ತಮಗೆ ಕೋವಿಡ್ ಸೋಂಕು ತಗುಲಿದ್ದು ಕ್ವಾರಂಟೈನ್‌ನಲ್ಲಿರುವುದಾಗಿ ಆರೋಪಿಗಳಾದ ವಿಶಾಲ್ ಮತ್ತು ಮಯಾಂಕ್ ಅವರು ವಿವರಿಸಿದ್ದರು.