ಲಂಚ ಪ್ರಕರಣ: ಎಫ್‌ಐಆರ್‌ ರದ್ದತಿ ಕೋರಿ ಮಂಜುನಾಥ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಲಂಚ ಪ್ರಕರಣದಲ್ಲಿ ಮಂಜುನಾಥ್‌ ವಿರುದ್ಧ ಸಾಕಷ್ಟು ದಾಖಲೆ ಇದ್ದರೂ ಆರೋಪಿಯನ್ನಾಗಿಸಲಾಗಿಲ್ಲ ಎಂದು ನ್ಯಾ. ಸಂದೇಶ್‌ ಅವರ ನೇತೃತ್ವದ ಪೀಠವು ಎಸಿಬಿಯನ್ನು ತೀವ್ರ ತರಾಟೆಗೆ ಒಳಪಡಿಸಿತ್ತು. ಬಳಿಕ ಮಂಜುನಾಥ್‌ರನ್ನು ಜು.4ರಂದು ಬಂಧಿಸಲಾಗಿತ್ತು.
Karnataka HC , J Manjunath and ACB
Karnataka HC , J Manjunath and ACB

ಲಂಚ ಪ್ರಕರಣದಲ್ಲಿ ತಮ್ಮ ವಿರುದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಸಲ್ಲಿಸಿರುವ ಪ್ರಕರಣದ ವಿಚಾರಣೆಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ಮುಂದೂಡಿದೆ.

ಮಂಜುನಾಥ್‌ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ನಡೆಸಿದ್ದು, ಅರ್ಜಿದಾರರ ಕೋರಿಕೆಯ ಹಿನ್ನೆಲೆಯಲ್ಲಿ ಮನವಿ ಮುಂದೂಡಲಾಗಿದೆ.

ಅರ್ಜಿದಾರ ಮಂಜುನಾಥ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪ್ರಕರಣದಲ್ಲಿ ಮಂಜುನಾಥ್‌ ಅವರನ್ನು ಆರೋಪಿಯನ್ನಾಗಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ದಾಖಲಾಗಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 7(ಎ) ಅನ್ವಯಿಸಬೇಕಾದರೆ ಅರ್ಜಿದಾರರು ಹಣ ಸ್ವೀಕರಿಸಿರಬೇಕು ಅಥವಾ ಇನ್ನೊಬ್ಬರು ಅವರ ಪರವಾಗಿ ಹಣ ಸ್ವೀಕರಿಸಿರಬೇಕು. ಇಂಥ ಪರಿಸ್ಥಿತಿ ಇಲ್ಲದಿರುವಾಗ, ಪ್ರಕ್ರಿಯೆ ಆರಂಭಿಸುವುದು ಕಾನೂನಿಗೆ ವಿರುದ್ಧವಾದ ಕ್ರಮ” ಎಂದು ವಾದಿಸಿರುವುದನ್ನು ಆದೇಶದಲ್ಲಿ ದಾಖಲಿಸಲಾಗಿದೆ.

ಎಸಿಬಿ ಪ್ರತಿನಿಧಿಸಿದ್ದ ವಕೀಲ ಪಿ ಎನ್‌ ಮನಮೋಹನ್‌ ಅವರು “ಜಿಲ್ಲಾಧಿಕಾರಿ ಸಿಬ್ಬಂದಿ ಮತ್ತು ಜಿಲ್ಲಾಧಿಕಾರಿ ಅವರು ಸಂಭಾಷಣೆ ನಡೆಸಿರುವ ಆಡಿಯೊವನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಪ್ರಕರಣದಲ್ಲಿ ಆರೋಪಿ ಮಾಡಲು ಮೇಲ್ನೋಟಕ್ಕೆ ಜಿಲ್ಲಾಧಿಕಾರಿ ವಿರುದ್ಧ ದಾಖಲೆ ಇದೆ ಎಂಬುದನ್ನು ತೋರಿಸಲಾಗುವುದು. ಈ ಮೂಲಕ ಎಸಿಬಿ ಕೈಗೊಂಡಿರುವ ಕ್ರಮಕ್ಕೆ ಸಮರ್ಥನೆ ಒದಗಿಸಲಾಗುವುದು” ಎಂದು ಹೇಳಿರುವುದನ್ನು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಆಜಂ ಪಾಷಾ ಎಂಬುವರಿಂದ ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು.

Also Read
ಹೈಕೋರ್ಟ್‌ ಆದೇಶದ ಯಾವ ಅಂಶಗಳನ್ನು ತೆಗೆದು ಹಾಕಲು ಬಂಧಿತ ಐಎಎಸ್‌ ಅಧಿಕಾರಿ ಮಂಜುನಾಥ್‌ ಸುಪ್ರೀಂ ಮುಂದೆ ಕೋರಿದ್ದಾರೆ?

ಸದರಿ ಪ್ರಕರಣದಲ್ಲಿ ಅಂದಿನ ಜಿಲ್ಲಾಧಿಕಾರಿ ಮಂಜುನಾಥ್‌ ಅವರನ್ನು ಸಾಕಷ್ಟು ದಾಖಲೆ ಇದ್ದರೂ ಆರೋಪಿಯನ್ನಾಗಿಸಲಾಗಿಲ್ಲ ಎಂದು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಎಸಿಬಿಯನ್ನು ತೀವ್ರ ತರಾಟೆಗೆ ಒಳಪಡಿಸಿತ್ತು. ಬಳಿಕ ಮಂಜುನಾಥ್‌ ಅವರನ್ನು ಮೂರನೇ ಆರೋಪಿಯನ್ನಾಗಿಸಿ, ಜುಲೈ 4ರಂದು ಬಂಧಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಮಂಜುನಾಥ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆಷನ್ಸ್‌ ನ್ಯಾಯಾಲಯವು ಮಂಜುನಾಥ್‌ ಅವರ ಜಾಮೀನು ಮನವಿ ವಜಾ ಮಾಡಿದ್ದು, ಈಗ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಮಧ್ಯೆ, ನ್ಯಾಯಮೂರ್ತಿ ಸಂದೇಶ್‌ ಅವರು ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ತಮ್ಮ ವಿರುದ್ಧ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಕೈಬಿಡುವಂತೆ ಕೋರಿ ಮಂಜುನಾಥ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಮನವಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

Related Stories

No stories found.
Kannada Bar & Bench
kannada.barandbench.com