ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರ್ ಅವರಿಂದ ಸ್ಥಾಪಿತವಾದ ವಿಶ್ವ ಭಾರತಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ (ವಿಸಿ) ಬಿದ್ಯುತ್ ಚಕ್ರಬರ್ತಿ ಅವರ ವಿರುದ್ಧ ದ್ವೇಷದ ಹಿನ್ನೆಲೆಯಲ್ಲಿ ಪ. ಬಂಗಾಳ ಸರ್ಕಾರ ದಾಖಲಿಸಿದ್ದ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ವಿಸಿಯವರಿಗೆ ಪರಿಹಾರ ನೀಡಿದೆ. [ಬಿದ್ಯುತ್ ಚಕ್ರಬರ್ತಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].
ನಿವೃತ್ತರಾದ ಕೇವಲ ಒಂದು ದಿನದಲ್ಲೇ ಅವರ ವಿರುದ್ಧ ಏಳು ಬೇರೆ ಬೇರೆ ಕ್ರಿಮಿನಲ್ ದೂರುಗಳನ್ನು ದಾಖಲಿಸಿ ಪೊಲೀಸರು ನೀಡಿದ್ದ ನೋಟಿಸ್‌ಗಳಿಗೆ ನ್ಯಾಯಮೂರ್ತಿ ಜೇ ಸೇನ್‌ಗುಪ್ತಾ ಅವರಿದ್ದ ರಜಾಕಾಲೀನ ಪೀಠ ತಡೆ ನೀಡಿದೆ.
“ಒಂದೇ ಪೊಲೀಸ್ ಠಾಣೆಗೆ ಸೇರಿದ ವಿವಿಧ ಪೊಲೀಸ್ ಅಧಿಕಾರಿಗಳು ಅರ್ಜಿದಾರರಿಗೆ ನೋಟಿಸ್ ನೀಡಿದ ಮರುದಿನವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದು ವಿಲಕ್ಷಣಕಾರಿಯಾಗಿದೆ. ಪ್ರಾಸಂಗಿಕವಾಗಿ ಅರ್ಜಿದಾರರು ಕುಲಪತಿ ಹುದ್ದೆ ತ್ಯಜಿಸುತ್ತಿದ್ದಂತೆಯೇ ಈ ನೋಟಿಸ್ ನೀಡಲಾಗಿದೆ” ಎಂದ ಪೀಠ ಇದು ಸಂಘಟಿತ ಯತ್ನವೇ ಎಂಬುದಾಗಿ ಪ್ರಶ್ನಿಸಿತು.
“ಈ ಸಂಗತಿಗಳು ನ್ಯಾಯಾಲಯ ಮಧ್ಯಂತರವಾಗಿ ಹಸ್ತಕ್ಷೇಪ ಮಾಡುವುದನ್ನು ಸಮರ್ಥಿಸುತ್ತವೆ. ಆದರೂ ನೋಟಿಸ್ ಅನುಸಾರ ನಡೆದುಕೊಂಡರೆ ಮತ್ತು ನ್ಯಾಯಾಲಯ ಸಮಸ್ಯೆ ಬಗೆಹರಿಸಿದರೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರ ತೆಗೆದುಕೊಂಡಿರುವ ನ್ಯಾಯಯುತ ನಿಲುವನ್ನು ಕೂಡ ಗಮನಿಸುವುದು ಉತ್ತೇಜನಕಾರಿಯಾಗಿದೆ” ಎಂದು ಪೀಠ ನುಡಿದಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯ ತನಕ ಚಕ್ರವರ್ತಿ ಅವರನ್ನು ಬಂಧಿಸದಂತೆ ಪೊಲೀಸರಿಗೆ ಆದೇಶಿಸಿರುವ ಪೀಠ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್ ಪ್ರತಿಗಳನ್ನು ನೀಡುವಂತೆ ಶಾಂತಿನಿಕೇತನ ಪೊಲೀಸ್ ಠಾಣೆಗೆ ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಲಾಗಿದೆ.
ವಿಶ್ವವಿದ್ಯಾನಿಲಯವನ್ನು ʼಸರಿಪಡಿಸಲುʼ ಯತ್ನಿಸಿದ ಬಳಿಕ ಸರ್ಕಾರ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಚಕ್ರವರ್ತಿ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]