

ಮಾನ್ಯತೆ ಇಲ್ಲದ ಮದರಸಾ ಮುಚ್ಚಲು ನಿರ್ದಿಷ್ಟ ಕಾನೂನಾತ್ಮಕ ನಿಬಂಧನೆ ಇರುವುದನ್ನು ತೋರಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಮದರಸಾವೊಂದಕ್ಕೆ ಹಾಕಿದ ಬೀಗಮುದ್ರೆ ತೆರವುಗೊಳಿಸುವಂತೆ ಅಲಾಹಾಬಾದ್ ಹೈಕೋರ್ಟ್ ಈಚೆಗೆ ಆದೇಶಿಸಿದೆ [ಮದರಸಾ ಅಹ್ಲೆ ಸುನ್ನತ್ ಇಮಾಮ್ ಅಹ್ಮದ್ ರಜಾ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆದರೆ ಆ ಮದರಸಾ ಮಾನ್ಯತೆ ಪಡೆಯುವವರೆಗೆ ಸರ್ಕಾರಿ ಅನುದಾನ ಪಡೆಯಲು ಅರ್ಹವಲ್ಲ. ಮದರಸಾ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಆ ಮದರಸಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ ಎಂದು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಸ್ಪಷ್ಟಪಡಿಸಿದರು.
ಅಲ್ಲದೆ ಮದರಸಾ ನೀಡಿದ ಅರ್ಹತೆಯನ್ನು ಸರ್ಕಾರಕ್ಕೆ ಸಂಬಂಧಿಸಿದ ಉದ್ದೇಶಗಳಿಗೆ ಬಳಸಿಕೊಳ್ಳುವ ಹಕ್ಕು ವಿದ್ಯಾರ್ಥಿಗಳಿಗೆ ಇರುವುದಿಲ್ಲ ಎಂದಿರುವ ನ್ಯಾಯಾಲಯ ಆದೇಶದ ಪ್ರತಿ ದೊರೆತ 24 ಗಂಟೆಗಳ ಒಳಗೆ ಅರ್ಜಿದಾರರ ಮದರಸಾಕ್ಕೆ ಹಾಕಲಾಗಿರುವ ಮುದ್ರೆಯನ್ನು ತೆಗೆಯಬೇಕು ಎಂಬುದಾಗಿ ತಿಳಿಸಿತು.
ಮಾನ್ಯತೆ ಇಲ್ಲದ ಮದರಸಾವೊಂದನ್ನು ಮುಚ್ಚುವಂತೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ನೀಡಿದ್ದ ಆದೇಶ ಪ್ರಶ್ನಿಸಿ ಅಹ್ಲೆ ಸುನ್ನತ್ ಇಮಾಮ್ ಅಹ್ಮದ್ ರಜಾ ಮದರಸಾವು ಅರ್ಜಿ ಸಲ್ಲಿಸಿತ್ತು.
ಆಕ್ಷೇಪಿತ ಮದರಾಸವು ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬೇಡಿಲ್ಲ. ಆದರೂ ಮಾನ್ಯತೆ ಇಲ್ಲ ಎಂಬ ಕಾರಣಕ್ಕೆ ಅದನ್ನು ಮುಚ್ಚುವಂತಿಲ್ಲ. ಸುಪ್ರೀಂ ಕೋರ್ಟ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ. ಸರ್ಕಾರದಿಂದ ಅನುದಾನ, ಮಾನ್ಯತೆ ಬಯಸದ ಸಂಸ್ಥೆಗಳು, ಅನುದಾನ ಬಯಸುವ ಸಂಸ್ಥೆಗಳು ಹಾಗೂ ಅನುದಾನರಹಿತವಾಗಿ ಕೇವಲ ಮಾನ್ಯತೆ ಬಯಸುವ ಸಂಸ್ಥೆಗಳೆಂದು ಅದು ವರ್ಗೀಕರಿಸಿದೆ. ಸಂವಿಧಾನದ ಕಲಂ 30(1) ಅಡಿಯಲ್ಲಿ ಮೊದಲ ವರ್ಗದ ಸಂಸ್ಥೆಗಳಿಗೆ ರಕ್ಷಣೆ ಇದೆ ಎಂದು ಅರ್ಜಿದಾರರು ವಾದಿಸಿದರು.
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಮಾನ್ಯತೆ ಇಲ್ಲದೆ ಮದರಸಾ ನಡೆಸಿದರೆ ಅದ ಅನಗತ್ಯ ಗೊಂದಲಗಳಿಗೆ ಕಾರಣವಾಗಬಹುದು. ಏಕೆಂದರೆ ಅಂತಹ ಮದರಸಾದಿಂದ ಪಡೆದ ಅರ್ಹತೆ ಆಧರಿಸಿ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಕೇಳಲಾಗದು ಎಂದರು.
ಆದರೆ ಕೇವಲ ಮಾನ್ಯತೆ ಇಲ್ಲ ಎಂಬ ಕಾರಣಕ್ಕೆ ಮದರಸದಾ ಕಾರ್ಯ ನಿರ್ವಹಣೆ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಅವಕಾಶ ನೀಡುವ ಯಾವುದೇ ಕಾನೂನು ಇಲ್ಲ ಎಂಬ ವಿಚಾರವನ್ನು ರಾಜ್ಯ ಸರ್ಕಾರಕ್ಕೆ ತಿರಸ್ಕರಿಸಲು ಸಾಧ್ಯವಾಗಿಲ್ಲ ಎಂದು ಪೀಠದ ಆದೇಶ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಹೊರಡಿಸಿದ್ದ ಆದೇಶವನ್ನು ಅದು ರದ್ದುಗೊಳಿಸಿತು.
[ಆದೇಶದ ಪ್ರತಿ]