ಒಎಸ್ ಜೊತೆ ಆಂಟಿವೈರಸ್ ತಂತ್ರಾಂಶ ಸಂಯೋಜನೆ: ಮೈಕ್ರೋಸಾಫ್ಟ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸಿಸಿಐ

ವಿಂಡೋಸ್ 10 ಬಿಡುಗಡೆಯಾದಾಗಿನಿಂದ ಎಲ್ಲಾ ವಿಂಡೋಸ್ ಸಾಧನಗಳಲ್ಲಿ ಮೈಕ್ರೋಸಾಫ್ಟ್ ಡಿಫೆಂಡರ್ ಅನ್ನು ಮೊದಲೇ ಅನುಸ್ಥಾಪಿಸುವುದಕ್ಕೆ ಅರ್ಜಿ ಆಕ್ಷೇಪಿಸಿತ್ತು.
CCI and Microsoft
CCI and Microsoft
Published on

ಮೈಕ್ರೋಸಾಫ್ಟ್ ಕಾರ್ಪೊರೇಷನ್ ತನ್ನ ಆಂಟಿ ವೈರಸ್ ತಂತ್ರಾಂಶವಾದ ಮೈಕ್ರೋಸಾಫ್ಟ್ ಡಿಫೆಂಡರ್ ಅನ್ನು ಅದರ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ (ಒಎಸ್‌) ಜೊತೆಗೆ ಸಂಯೋಜಿಸುವ ಮೂಲಕ ತನ್ನ ಪ್ರಬಲ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದ್ದ ಅರ್ಜಿಯನ್ನು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಸೋಮವಾರ ವಜಾಗೊಳಿಸಿದೆ.

ಹೆಸರು ಹೇಳಲಿಚ್ಛಿಸದ ಮಾಹಿತಿದಾರರೊಬ್ಬರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ ಭಾರತದ ಆಂಟಿವೈರಸ್ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ಸ್ಪರ್ಧೆಯಲ್ಲಿ ಹಸ್ತಕ್ಷೇಪ ಮಾಡುವ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಆರೋಪಿಸಲಾಗಿತ್ತು.

Also Read
ಮೆಟಾದೊಂದಿಗೆ ದತ್ತಾಂಶ ಹಂಚಿಕೊಳ್ಳದಂತೆ ವಾಟ್ಸಾಪ್‌ಗೆ ನಿರ್ಬಂಧಿಸಿದ್ದ ಸಿಸಿಐ ಆದೇಶಕ್ಕೆ ಎನ್‌ಸಿಎಲ್‌ಎಟಿ ತಡೆ

2015 ರಲ್ಲಿ ವಿಂಡೋಸ್ 10 ಬಿಡುಗಡೆಯಾದಾಗಿನಿಂದ ಎಲ್ಲಾ ವಿಂಡೋಸ್ ಓಎಸ್ ಸಾಧನಗಳಲ್ಲಿ ಮೈಕ್ರೋಸಾಫ್ಟ್ ಡಿಫೆಂಡರ್ ಅನ್ನು ಮೊದಲೇ ಅನುಸ್ಥಾಪಿಸುವ ಮತ್ತು ಮೊದಲೇ ಸಕ್ರಿಯಗೊಳಿಸುವ ಮೈಕ್ರೋಸಾಫ್ಟ್  ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಇದರಿಂದಾಗಿ ಉಳಿದ ಆಂಟಿ ವೈರಸ್ ತಂತ್ರಾಂಶ ಅಭಿವೃದ್ಧಿಪಡಿಸುವವರಿಗೆ ಗಮನಾರ್ಹ ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದು ವಾದಿಸಲಾಗಿತ್ತು.

ಆದರೆ ಡಿಫೆಂಡರ್‌ ತಂತ್ರಾಂಶ ಪ್ರತ್ಯೇಕ ಉತ್ಪನ್ನವಾಗಿರದೆ ವಿಂಡೋಸ್‌ ಒಎಸ್‌ನ ಅವಿಭಾಜ್ಯ ಅಂಗ ಎಂದು ಮೈಕ್ರೋಸಾಫ್ಟ್‌ ವಾದಿಸಿತು. ಬಳಕೆದಾರರಿಗೆ ಹೆಚ್ಚುವರಿಯಾಗಿ ಯಾವುದೇ ಹಣ ಪಡೆಯದೆ ಉತ್ಪನ್ನವನ್ನು ಒದಗಿಸಲಾಗಿದೆ ಎಂದು ವಿಂಡೋಸ್‌ ಸಮರ್ಥಿಸಿಕೊಂಡಿತ್ತು.

ಅಲ್ಲದೆ ಬಳಕೆದಾರರು ಬೇರೆ ಆಂಟಿ ವೈರಸ್‌ ತಂತ್ರಾಂಶ ಅನುಸ್ಥಾಪನೆ ಮಾಡಿಕೊಳ್ಳಲು ಸ್ವತಂತ್ರರು. ಬೇರೆ ತಂತ್ರಾಂಶವನ್ನು ಅವರು ಅಳವಡಿಸಿಕೊಂಡಾಗ ಡಿಫೆಂಡರ್‌ ತನ್ನಿಂತಾನೇ ನಿಷ್ಕ್ರಿಯವಾಗುತ್ತದೆ ಎಂದು ಕೂಡ ಅದು ತಿಳಿಸಿತು.

ವಾದ ಆಲಿಸಿದ ನ್ಯಾಯಾಲಯ ಡಿಫೆಂಡರ್‌ ತಂತ್ರಾಂಶ ಬಳಸಲು ಬಳಕೆದಾರರ ಮೇಲೆ ಒತ್ತಡ ಹೇರಲಾಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಏಕೆಂದರೆ ಬೇರೆ ಆಂಟಿವೈರಸ್‌ ತಂತ್ರಾಂಶವನ್ನು ಅವರು ಮುಕ್ತವಾಗಿ ಬಳಸಬಹುದಾಗಿದೆ ಎಂದು ತಿಳಿಸಿತು.

ಆಂಟಿವೈರಸ್ ಮಾರುಕಟ್ಟೆಯಲ್ಲಿ ನಿರಂತರ ನಾವೀನ್ಯತೆಯಿಂದ ತಾಂತ್ರಿಕ ಅಭಿವೃದ್ಧಿಯಲ್ಲಿ ಅಡಚಣೆಯಾಗಿದೆ ಎಂಬ ಆರೋಪಗಳನ್ನು ಬದಿಗೆ ಸರಿಸಿದ ಅದು ಮೈಕ್ರೋಸಾಫ್ಟ್ ವಿರುದ್ಧದ ಆರೋಪಗಳು ಹೆಚ್ಚಾಗಿ ಊಹಾತ್ಮಕವಾಗಿವೆ ಮತ್ತು ಹಾನಿಯಾಗಿರುವುದಕ್ಕೆ ಪುರಾವೆಗಳಿಲ್ಲ ಎಂದಿತು.

Also Read
ಸಿಸಿಐ ಮನವಿ ಹಿನ್ನೆಲೆ: ಅಮೆಜಾನ್, ಫ್ಲಿಪ್‌ಕಾರ್ಟ್‌ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿದ ಸುಪ್ರೀಂ

ಒಎಸ್‌ ಮಾರುಕಟ್ಟೆಯಲ್ಲಿ ಮೈಕ್ರೊಸಾಫ್ಟ್‌ನ ಪ್ರಾಬಲ್ಯವನ್ನು ಅದು ಒಪ್ಪಿತಾದರೂ ಮೈಕ್ರೋಸಾಫ್ಟ್‌ ಕ್ರಮದಿಂದ ಉಳಿದ ಸಾಫ್ಟ್‌ವೇರ್‌ ತಯಾರಕರು ಮಾರುಕಟ್ಟೆಯಿಂದ ದೂರ ಉಳಿದಿಲ್ಲ ಅಥವಾ ಗಮನಾರ್ಹ ಹಿನ್ನೆಡೆ ಅವರಿಗೆ ಉಂಟಾಗಿಲ್ಲ ಎಂದಿತು.

ಇದಲ್ಲದೆ, ಮೈಕ್ರೋಸಾಫ್ಟ್ ತನ್ನ ಆಂಟಿವೈರಸ್ ಮಾರುಕಟ್ಟೆ ಪಾಲನ್ನು ರಕ್ಷಿಸಲು ತನ್ನ ಒಎಸ್‌ ಪ್ರಾಬಲ್ಯ ಬಳಸಿಕೊಳ್ಳುತ್ತಿದೆ ಎಂಬ ಹೇಳಿಕೆಗಳಿಗೆ ಆಧಾರವಿಲ್ಲ ಎಂದ ನ್ಯಾಯಾಲಯ ದೂರನ್ನು ವಜಾಗೊಳಿಸಿತು.

Kannada Bar & Bench
kannada.barandbench.com