ಅರವಿಂದ್ ಕೇಜ್ರಿವಾಲ್‌ಗೆ 10 ದಿನಗಳಲ್ಲಿ ಸೂಕ್ತ ವಸತಿ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಭರವಸೆ

ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂದು ಬೆಳಿಗ್ಗೆ ನ್ಯಾಯಮೂರ್ತಿ ಸಚಿನ್ ದತ್ತ ಅವರಿದ್ದ ಪೀಠದೆದುರು ಈ ವಿಚಾರ ತಿಳಿಸಿದರು.
Arvind Kejriwal and Delhi High Court
Arvind Kejriwal and Delhi High Court
Published on

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಹತ್ತು ದಿನಗಳಲ್ಲಿ ಸೂಕ್ತ ವಸತಿ ಸೌಕರ್ಯ ಒದಗಿಸುವುದಾಗಿ ಕೇಂದ್ರ ಸರ್ಕಾರ ಗುರುವಾರ ದೆಹಲಿ ಹೈಕೋರ್ಟ್‌ಗೆ ಭರವಸೆ ನೀಡಿದೆ [ ಆಮ್ ಆದ್ಮಿ ಪಕ್ಷ  ಮತ್ತು ವಸತಿ  ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮೂಲಕ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂದು ಬೆಳಿಗ್ಗೆ ನ್ಯಾಯಮೂರ್ತಿ ಸಚಿನ್ ದತ್ತ ಅವರಿದ್ದ ಪೀಠದೆದುರು ಈ ವಿಚಾರ ತಿಳಿಸಿದರು. "ಇಂದಿನಿಂದ 10 ದಿನಗಳಲ್ಲಿ ಅವರಿಗೆ ಸೂಕ್ತ ವಸತಿ ಸೌಕರ್ಯ ನೀಡಲಾಗುವುದು. ನೀವು ನನ್ನ ಹೇಳಿಕೆ ದಾಖಲಿಸಿಕೊಳ್ಳಬಹುದು" ಎಂದು ಎಸ್ ಜಿ ಮೆಹ್ತಾ ಹೇಳಿದರು. ಅಂತೆಯೇ ತಾನು ನೀಡಲಿರುವ ಆದೇಶದಲ್ಲಿ ಈ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿತು.

Also Read
ಎಎಪಿ ಸರ್ಕಾರದ ಮಹತ್ವಾಕಾಂಕ್ಷೆಯ ಭೂ ಸಂಚಯನ ನೀತಿಗೆ ಪಂಜಾಬ್ ಹೈಕೋರ್ಟ್ ತಡೆ ನೀಡಿದ್ದೇಕೆ?

ನವದೆಹಲಿಯ ಕೇಂದ್ರೀಯ ಪ್ರದೇಶದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಸತಿ ಸೌಕರ್ಯ ಮಂಜೂರು ಮಾಡುವಂತೆ ಕೋರಿ ಎಎಪಿ ಅರ್ಜಿ ಸಲ್ಲಿಸಿತ್ತು.

ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಬೇರೆ ಯಾವುದೇ ವಸತಿ ಹಂಚಿಕೆ ಆಗಿರದೆ ಇದ್ದರೆ ಒಂದು ವಸತಿ ನಿಲಯವನ್ನು ಹಂಚಿಕೆ ಮಾಡಬಹುದು ಎಂದು ಜುಲೈ 31, 2014ರಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಕಚೇರಿ ಜ್ಞಾಪನಾ ಪತ್ರ ಹೇಳಿತ್ತು.  ಕೇಜ್ರಿವಾಲ್ ಅಂತಹ ವಸತಿ ಸೌಕರ್ಯವನ್ನು ಪಡೆಯಲು ಅರ್ಹರು ಮತ್ತು ಈ ನಿಟ್ಟಿನಲ್ಲಿ ಎಎಪಿ ಈಗಾಗಲೇ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಪಕ್ಷ ವಾದಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕೇಂದ್ರದ ಪ್ರತಿಕ್ರಿಯೆ ಕೇಳಿತ್ತು.

ದೆಹಲಿಯ ಲೆಫ್ಟಿನೆಂಟ್ ಜನರಲ್ ಇತ್ತೀಚೆಗೆ ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿರುವುದನ್ನು ಇಂದಿನ ವಿಚಾರಣೆ ವೇಳೆ ನ್ಯಾಯಾಲಯ ಪ್ರಸ್ತಾಪಿಸಿತು, ಇದಕ್ಕೆ ಉತ್ತರಿಸಿದ ಎಸ್‌ಜಿ ಮೆಹ್ತಾ, ಹತ್ತು ದಿನಗಳಲ್ಲಿ ಕೇಜ್ರಿವಾಲ್‌ಗೆ ಸೂಕ್ತ ವಸತಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕೇಜ್ರಿವಾಲ್‌ ಅವರಿಗೆ ಈ ಹಿಂದೆ ನೀಡಿದ್ದ ವಸತಿ ಸೌಕರ್ಯಕ್ಕಿಂತಲೂ ಕೆಳಮಟ್ಟದ (ಉದಾ: ವರ್ಗ-7 ಅಥವಾ ವರ್ಗ-8ರ ನಿವಾಸಗಳಿಗಿಂತ ಕಡಿಮೆಯಾದ ವರ್ಗ-5) ಮನೆ ನೀಡಬಾರದು ಎಂದು ಎಎಪಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಹುಲ್ ಮೆಹ್ರಾ ವಾದಿಸಿದರು. ಇದಕ್ಕೆ ಆಕ್ಷೇಪಿಸಿದ ತುಷಾರ್‌ ಮೆಹ್ತಾ ʼಆಮ್‌ ಆದ್ಮಿʼ ಎಂದಿಗೂ ವರ್ಗ-8ಕ್ಕೆ ಬೇಡಿಕೆ ಇಡುವುದಿಲ್ಲ ಎಂದು ತಿವಿದರು. ಈ ಘೋಷಣೆಗಳೆಲ್ಲಾ ಚುನಾವಣೆಗೆ ಸೂಕ್ತ ಇದು ನ್ಯಾಯಾಲಯ ಎಂದು ರಾಹುಲ್‌ ಮೆಹ್ರಾ ಪ್ರತ್ಯುತ್ತರ ನೀಡಿದರು.

Also Read
ಉ. ಪ್ರದೇಶ ಸರ್ಕಾರದಿಂದ 105 ಶಾಲೆಗಳ ಮುಚ್ಚಲು ನಿರ್ಧಾರ: ಸುಪ್ರೀಂನಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಆಕ್ಷೇಪ

ಆಗ " ಸೂಕ್ತ ವಸತಿಯನ್ನು 10 ದಿನಗಳೊಳಗೆ ನೀಡಲಾಗುವುದು. ನಿಮ್ಮ ಹೇಳಿಕೆಯನ್ನು ದಾಖಲಿಸಿ ಆದೇಶ ಜಾರಿ ಮಾಡುತ್ತೇವೆ" ಎಂದು ನ್ಯಾಯಮೂರ್ತಿ ದತ್ತ ಅಂತಿಮವಾಗಿ ಹೇಳಿದರು. ರಾಜಕಾರಣಿಗಳಿಗೆ ಮಾತ್ರವಲ್ಲ, ನಾಗರಿಕರಿಗೆ ಕೂಡ ಅನ್ವಯಿಸುವುದರಿಂದ ಅಂತಹ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಹಂಚಿಕೆಯಾಗಲಿರುವ ವಸತಿ ಸೌಕರ್ಯದ ಬಗ್ಗೆ ಎಎಪಿ ಇಲ್ಲವೇ ಕೇಜ್ರಿವಾಲ್ ಅವರಿಗೆ ತೃಪ್ತಿಯಾಗದಿದ್ದರೆ ಸರ್ಕಾರವನ್ನು ಸಂಪರ್ಕಿಸಲು ಸ್ವತಂತ್ರರು ಎಂದು ನ್ಯಾಯಾಲಯ ತಿಳಿಸಿದೆ. ವಿವರವಾದ ಆದೇಶವನ್ನು ನಂತರ ಹೊರಡಿಸಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.

Kannada Bar & Bench
kannada.barandbench.com