ವಾಂಗ್‌ಚುಕ್ ಆರೋಗ್ಯ ಸ್ಥಿತಿ ಬಗ್ಗೆ ಸುಪ್ರೀಂ ಕಳವಳ, ಬಂಧನ ನಿರ್ಧಾರ ಮರುಪರಿಶೀಲಿಸಲು ಕೇಂದ್ರಕ್ಕೆ ಸೂಚನೆ

ಕಳೆದ ವರ್ಷ ಲೇಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ವಾಂಗ್‌ಚುಕ್ ಕಾರಣ ಎಂದು ಕೇಂದ್ರ ಸರ್ಕಾರ ಈ ಹಿಂದೆ ಆರೋಪಿಸಿತ್ತು.
Sonam Wangchuk
Sonam Wangchuk
Published on

ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಲು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಚಿಂತಕ, ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್‌ ಅವರನ್ನು ಬಂಧನದಲ್ಲಿರಿಸಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸುವ ಸಾಧ್ಯತೆಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಮುಂಜಾಗ್ರತಾ ಕ್ರಮವಾಗಿ ವಾಂಗ್‌ಚುಕ್‌ ಅವರನ್ನು ಬಂಧನದಲ್ಲಿರಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಳೆ ಅವರನ್ನೊಳಗೊಂಡ ಪೀಠ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರಿಗೆ ನಿರ್ಧಾರವನ್ನು ಮರುಪರಿಶೀಲಿಸಲು ಪರಿಗಣಿಸುವಂತೆ ಸೂಚಿಸಿತು.

Also Read
ಸೋನಮ್‌ ವಾಂಗ್‌ಚುಕ್‌ ಬಂಧನ ಕ್ರಮಬದ್ಧ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಸಮರ್ಥನೆ

“ವಾದ–ಪ್ರತಿವಾದಗಳು ಹಾಗೂ ಕಾನೂನು ಅಂಶಗಳ ಹೊರತಾಗಿ, ನ್ಯಾಯಾಲಯದ ಅಧಿಕಾರಿಯಾಗಿ ಈ ವಿಷಯದ ಬಗ್ಗೆ ಸ್ವಲ್ಪ ಆಲೋಚಿಸಿ ನೋಡಿ. ಬಂಧನ ಆದೇಶವನ್ನು 26.09.2025ರಂದು ಜಾರಿಗೊಳಿಸಲಾಗಿದೆ, ಈಗಾಗಲೇ ಸುಮಾರು ಐದು ತಿಂಗಳು ಕಳೆದಿವೆ. ಬಂಧಿತರ ಆರೋಗ್ಯ ಸ್ಥಿತಿಯನ್ನು ಗಮನಿಸಿದರೆ ಇದು ಖಂಡಿತ ಒಳ್ಳೆಯದಲ್ಲ. ನಾವು ಮೊದಲು ನೋಡಿದ ವರದಿಯೂ ಅವರ ಆರೋಗ್ಯ ಸರಿಯಿಲ್ಲವೆಂದು ತೋರಿಸುತ್ತದೆ. ಕೆಲವು ವಯಸ್ಸು ಸಂಬಂಧಿತ ಸಮಸ್ಯೆಗಳಿರಬಹುದು, ಬೇರೆ ಕಾರಣಗಳೂ ಇರಬಹುದು. ಪ್ರಕರಣವನ್ನು ಸರ್ಕಾರ ಮತ್ತೊಮ್ಮೆ ಮರುಪರಿಶೀಲಿಸುವ ಸಾಧ್ಯತೆ ಇದೆಯೇ?” ಎಂದು ನ್ಯಾಯಾಲಯ ಕೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ನಟರಾಜ್, ನ್ಯಾಯಾಲಯದ ಈ ಸಲಹೆಯನ್ನು ತಾವು ಸಂಬಂಧಿಸಿದ ಅಧಿಕಾರಿಗಳ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದರು.

ವಿಚಾರಣೆ ವೇಳೆ ನಟರಾಜ್‌ ಅವರು ಕಳೆದ ವರ್ಷ ಲೇಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ವಾಂಗ್‌ಚುಕ್ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ವಾದಿಸಿದರು. ಆ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 161 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಹಿಂಸಾಚಾರದಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಜನರ ಗುಂಪನ್ನು ಪ್ರಭಾವಿತಗೊಳಿಸುವ ಸಾಮರ್ಥ್ಯ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಬಹುದು ಎಂದರು.

ಪ್ರಸ್ತುತ ಪ್ರಕರಣದಲ್ಲಿ ಕೇವಲ ಬಂಧನ ಆದೇಶವನ್ನೇ ಪ್ರಶ್ನಿಸಲಾಗಿದ್ದು, ರಾಜ್ಯ ಸರ್ಕಾರ ನೀಡಿರುವ ಅನುಮೋದನಾ ಹಾಗೂ ದೃಢೀಕರಣ ಆದೇಶಗಳನ್ನು ಪ್ರಶ್ನಿಸಲಾಗಿಲ್ಲ ಎಂದು ಹೇಳಿದರು. ಜೊತೆಗೆ, ಸಲಹಾ ಮಂಡಳಿ ವಾಂಗ್‌ಚುಕ್ ಅವರ ಬಂಧನವನ್ನು ಪರಿಶೀಲಿಸಿ ವರದಿ ಸಲ್ಲಿಸಿದ್ದು, ಅವರಿಗೆ ಎಲ್ಲಾ ಅವಕಾಶಗಳನ್ನು ನೀಡಲಾಗಿದೆ ಎಂದೂ ಅವರು ತಿಳಿಸಿದರು.

Also Read
ಪ್ರತ್ಯೇಕತೆಯ ಮಾತನ್ನಾಡಿ ಜೆನ್‌ ಜೀಗಳನ್ನು ಎತ್ತಿಕಟ್ಟಿದ್ದಾರೆ ವಾಂಗ್‌ಚುಕ್‌: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಆರೋಪ

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ದೃಢೀಕರಣ ಆದೇಶ ಅಥವಾ ಸಲಹಾ ಮಂಡಳಿ ವರದಿಯನ್ನು ಪ್ರಶ್ನಿಸದಿದ್ದರೂ, ಬಂಧನ ಆದೇಶವೇ ಕಾನೂನು ದೋಷಗಳಿಂದ ಬಳಲುತ್ತಿದ್ದರೆ ಅದನ್ನು ರದ್ದುಪಡಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿತು. ಅರ್ಜಿದಾರರ ವಾದಗಳು ಬಂಧನ ಆದೇಶದ ಮೂಲ ಅಡಿಪಾಯವನ್ನೇ ಪ್ರಶ್ನಿಸುತ್ತವೆ ಎಂದು ಪೀಠ ಹೇಳಿತು.

ಮುಂಜಾಗ್ರತಾ ಕ್ರಮವಾಗಿ ಬಂಧಿಸುವುದು ಶಿಕ್ಷೆ ವಿಧಿಸುವ ಬಂಧನವಲ್ಲ. ಸಾರ್ವಜನಿಕ ಶಾಂತಿ ಮತ್ತು ರಾಜ್ಯ ಭದ್ರತೆಯನ್ನು ಕಾಪಾಡುವುದೇ ಇದರ ಉದ್ದೇಶ ಎಂದು ಕೇಂದ್ರ ಸರ್ಕಾರ ವಾದ ಮುಂದುವರೆಸಿತು. ಆದರೆ ನ್ಯಾಯಾಲಯ, ಬಂಧನಾಧಿಕಾರಿಯ ವಿವೇಚನೆ ಕಾನೂನಿನ ಮಿತಿಗಳೊಳಗೇ ಇರಬೇಕು; ಕೇವಲ “ಸಂಭಾವ್ಯ ಅಪಾಯ” ಎಂಬ ಆಧಾರದ ಮೇಲೆ ಬಂಧನ ಮಾಡುವುದು ಸಾಲದು ಎಂದು ಸ್ಪಷ್ಟಪಡಿಸಿತು.

Kannada Bar & Bench
kannada.barandbench.com