ದೆಹಲಿಯಲ್ಲಿ ಹೆಚ್ಚುತ್ತಿರುವ ಮಕ್ಕಳ ಕಳ್ಳಸಾಗಣೆ: ಕೇಂದ್ರದಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್

ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಿದ ಅಂತರರಾಜ್ಯ ಮಕ್ಕಳ ಕಳ್ಳಸಾಗಣೆ ಜಾಲದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Supreme Court
Supreme Court
Published on

ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಮಕ್ಕಳ ಕಳ್ಳಸಾಗಣೆ ತಡೆಯಲು ಕೈಗೊಂಡ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಪಿಂಕಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಗಂಡು ಮಕ್ಕಳನ್ನು ಬಯಸುವ ದಂಪತಿಗೆ ಮಕ್ಕಳನ್ನು ಅಪಹರಿಸಿ ರಾಜಸ್ಥಾನ, ಬಿಹಾರ ಮತ್ತು ಜಾರ್ಖಂಡ್ ಮತ್ತಿತರ ರಾಜ್ಯಗಳಲ್ಲಿ ಮಾರಾಟ ಮಾಡಿದ ಅಂತರರಾಜ್ಯ ಮಕ್ಕಳ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠದೆದುರು ನಡೆಯಿತು.

Also Read
ಮಕ್ಕಳ ಕಳ್ಳಸಾಗಣೆ ಆರೋಪಿಗಳಿಗೆ ಜಾಮೀನು: ಉ.ಪ್ರದೇಶ ಸರ್ಕಾರ, ಅಲಾಹಾಬಾದ್ ಹೈಕೋರ್ಟ್ ಕಿವಿ ಹಿಂಡಿದ ಸುಪ್ರೀಂ

"ದೆಹಲಿಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಪರಾಧವನ್ನು ತಡೆಯಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದಿಂದ ತಿಳಿದುಕೊಳ್ಳಲು ಬಯಸುತ್ತೇವೆ. ವರದಿಯನ್ನು ಆದಷ್ಟು ಬೇಗ ಸಲ್ಲಿಸಬೇಕು. ಒಂದು ಪ್ರತಿಯನ್ನು ಪ್ರಕರಣದ ಅಮಿಕಸ್ ಕ್ಯೂರಿ ಅಪರ್ಣಾ ಭಟ್ ಅವರಿಗೆ ಒದಗಿಸಬೇಕು" ಎಂದು ನ್ಯಾಯಾಲಯ ಆದೇಶಿಸಿತು.

ಕಳ್ಳಸಾಗಣೆಗೆ ಒಳಗಾದ ಮಕ್ಕಳ ಕುಟುಂಬ ಸದಸ್ಯರು ಕಳ್ಳಸಾಗಣೆದಾರರಿಗೆ ಜಾಮೀನು ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳು ಇವಾಗಿವೆ.  ಏಪ್ರಿಲ್ 2025ರಲ್ಲಿ, ಮೇಲ್ಮನವಿ ಪುರಸ್ಕರಿಸಿದ್ದ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿದ ಆದೇಶ ರದ್ದುಗೊಳಿಸಿತ್ತು.

ಗಮನಾರ್ಹವಾಗಿ, ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಮತ್ತು ಮಕ್ಕಳ ಕಳ್ಳಸಾಗಣೆ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ರಾಜ್ಯ ಸರ್ಕಾರಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಅದು ನಿಗದಿಪಡಿಸಿತ್ತು.

ಇಂದು ನ್ಯಾಯಾಲಯಕ್ಕೆ ಹಾಜರಾದ ಅಪರ್ಣಾ ಭಟ್, "ದೆಹಲಿಯಲ್ಲಿ ನಡೆಯುತ್ತಿರುವ ಗಂಭೀರ ಮಕ್ಕಳ ಕಳ್ಳಸಾಗಣೆ ಪ್ರಕರಣವನ್ನು ನ್ಯಾಯಾಲಯ ಗಮನಿಸಿದ್ದು ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ ಎಂದು ವಿವರಿಸಿದರು.

ವಿವಿಧ ರಾಜ್ಯಗಳಲ್ಲಿ ಕಳ್ಳಸಾಗಣೆಗೆ ತುತ್ತಾದ ಮಕ್ಕಳ ಕುಟುಂಬಗಳು ಈ ಹಿಂದೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಜಾಮೀನು ನೀಡುವುದನ್ನು ಅವರು ಪ್ರಶ್ನಿಸಿದ್ದರು. ಏಪ್ರಿಲ್ 2025 ರಲ್ಲಿ, ನ್ಯಾಯಾಲಯ ಮೇಲ್ಮನವಿಗಳನ್ನು ಪುರಸ್ಕರಿಸಿ ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು.

Also Read
ನಿರ್ಗತಿಕ ಮಹಿಳೆಯರಿಗೆ ಸೇರಿದ ಮಕ್ಕಳ ಕಳ್ಳಸಾಗಣೆ ತಡೆಯಲು ಸಮಾಜದ ಎಲ್ಲರ ಬೆಂಬಲ ಅಗತ್ಯ: ನ್ಯಾ. ಯು ಯು ಲಲಿತ್

ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಮತ್ತೆ ಮತ್ತೆ ಜಾಮೀನು ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆ ಜಾಮೀನು ಆದೇಶಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದು ಅಗತ್ಯ ಎನಿಸಿದರೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲಾಗುವುದು ಎಂದಿತು. ಆಗಸ್ಟ್ 18, 2025 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ವಿಚಾರಣೆ ವೇಳೆ ನ್ಯಾಯಾಲಯ ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು. ಹೈಕೋರ್ಟ್‌ಗಳು ಬಾಕಿ ಇರುವ ಪ್ರಕರಣಗಳನ್ನು ನಿಗಾ ವಹಿಸಿ ಅಗತ್ಯ ನಿರ್ದೇಶನಗಳನ್ನು ನೀಡಬೇಕು.ಆಸ್ಪತ್ರೆಯಿಂದ ನವಜಾತ ಶಿಶು ಕಳುವಾದರೆ, ಆ ಆಸ್ಪತ್ರೆಯ ಲೈಸೆನ್ಸ್ ರದ್ದುಪಡಿಸಬೇಕು ಎಂಬಂತಹ ಮಾರ್ಗಸೂಚಿಗಳನ್ನು ನೀಡಿತ್ತು.

Kannada Bar & Bench
kannada.barandbench.com