

ಚೀನಾ ವೀಸಾ ಹಗರಣದಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ವಿರುದ್ಧ ದೆಹಲಿ ನ್ಯಾಯಾಲಯ ಮಂಗಳವಾರ ಆರೋಪ ನಿಗದಿಪಡಿಸಿದೆ.
ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದಿಗ್ ವಿನಯ್ ಸಿಂಗ್ ಅವರು ಚಿದಂಬರಂ ಮತ್ತಿತರ ಆರು ಜನರ ವಿರುದ್ಧ ಆರೋಪ ನಿಗದಿಪಡಿಸಿದರು.
ಚೇತನ್ ಶ್ರೀವಾಸ್ತವ ಎಂಬುವವರನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿತು.
ಐವತ್ತು ಚೀನಾ ನಾಗರಿಕರ ವೀಸಾ ಅರ್ಜಿಗಳ ಸುಗಮ ವಿಲೇವಾರಿಗಾಗಿ ₹50 ಲಕ್ಷ ಹಣ ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ತಲ್ವಾಂಡಿ ಸಾಬೊ ಪವರ್ ಲಿಮಿಟೆಡ್ (ಟಿಎಸ್‌ಪಿಎಲ್) ಬೆಲ್ ಟೂಲ್ಸ್ ಲಿಮಿಟೆಡ್‌ಗೆ (ಬಿಟಿಎಲ್) ₹50 ಲಕ್ಷ ಮೊತ್ತ ಪಾವತಿಸಿದ್ದು ಅದನ್ನು ಕಾರ್ತಿ ಅವರ ಸಹಾಯಕ ಎಸ್ ಭಾಸ್ಕರರಾಮನ್ ಅವರಿಗೆ ಚೀನೀ ವೀಸಾಗಳನ್ನು ಪಡೆದಿದಕ್ಕಾಗಿ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು.
ಇತ್ತ ಕಾರ್ತಿ ಅವರು ತಮ್ಮ ವಿರುದ್ಧದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ. ಕಾರ್ತಿ ಅವರ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತವರ ಕಾನೂನು ತಂಡ ವಾದ ಮಂಡಿಸಿತು.