ಮುರುಘಾ ಮಠದ ಉಸ್ತುವಾರಿ ಕುರಿತ ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್‌

"ಸಮುದಾಯದ ಪ್ರಮುಖರನ್ನು ಮಠದ ಚಟುವಟಿಕೆ ನಡೆಸಲು ಬಿಟ್ಟರೆ ಚಿತ್ರದುರ್ಗದಲ್ಲಿ ಪ್ರತಿಯೊಬ್ಬರು ತಾವು ಪ್ರಮುಖರು ಎಂದು ಹೇಳಿಕೊಳ್ಳಬಹುದು. ಯಾರು ಮುಖ್ಯರು, ಯಾರು ಮುಖ್ಯರಲ್ಲ ಎಂಬುದನ್ನು ಯಾರು ನಿರ್ಧರಿಸುತ್ತಾರೆ?" ಎಂದ ಹಿರಿಯ ವಕೀಲ ಪಾಟೀಲ್.‌
Murugha Mutt
Murugha Mutt
Published on

ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಮೇಲ್ವಿಚಾರಣೆಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಇರುವ ಪರ ಮತ್ತು ವಿರೋಧದ ಕುರಿತು ವಿಸ್ತೃತ ವಿಚಾರಣೆಯ ಅಗತ್ಯವಿದೆ. ಹೀಗಾಗಿ, ಸದ್ಯಕ್ಕೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ಮಠದ ಉಸ್ತುವಾರಿಗೆ ನೇಮಕ ಮಾಡಿರುವ ಮಧ್ಯಂತರ ವ್ಯವಸ್ಥೆ ಮುಂದುವರಿಯಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಚಿತ್ರದುರ್ಗದ ಮುರುಘಾ ಮಠ ಮತ್ತು ವಿದ್ಯಾಪೀಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದ ರಾಜ್ಯ ಸರ್ಕಾರದ ಆದೇಶ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಕೆ ಎಸ್‌ ನವೀನ್‌, ಎಚ್‌ ಏಕನಾಥಯ್ಯ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರತಿವಾದಿಗಳಾದ ಮಠ ಮತ್ತು ವಿದ್ಯಾಪೀಠವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಎಸ್‌. ಪಾಟೀಲ್‌ ಅವರು “ಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ್ದನ್ನು 2023ರ ಮೇ 22ರಂದು ಏಕಸದಸ್ಯ ಪೀಠವು ವಜಾ ಮಾಡಿದೆ. ಇದರ ಜೊತೆಗೆ ಆದೇಶದಲ್ಲಿ ಆಕ್ಷೇಪಾರ್ಹವಾದ ಮೂರು ನಿರ್ದೇಶನಗಳನ್ನು ನೀಡಿದೆ. ಅವುಗಳನ್ನು ಮಾಡಬಾರದಿತ್ತು. ಮಠದ ಚಟುವಟಿಕೆಯಲ್ಲಿ ಒಂದು ಕಡೆ ರಾಜ್ಯ ಸರ್ಕಾರದ ಪ್ರವೇಶಿಕೆಯನ್ನು ಒಪ್ಪಿರುವ ನ್ಯಾಯಾಲಯವು ಮತ್ತೊಂದು ಕಡೆ ನ್ಯಾಯಾಲಯದ ಪ್ರವೇಶದ ವ್ಯಾಪ್ತಿಯನ್ನು ವಿಸ್ತರಿಸಿದೆ. ನ್ಯಾಯಾಲಯದ ಪ್ರವೇಶಾತಿಗೆ ಅನುಮತಿ ಇಲ್ಲ” ಎಂದು ವಾದಿಸಿದರು.

ಅರ್ಜಿದಾರರ ಪರ ವಕೀಲರು “ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರವಾದ ಮೂರನೇ ವ್ಯಕ್ತಿಯು ಮಠದ ಆಡಳಿತವನ್ನು ನೋಡಿಕೊಳ್ಳಬೇಕು” ಎಂದು ವಾದಿಸಿದರು.

ಅರ್ಜಿದಾರರು ಮತ್ತು ಪ್ರತಿವಾದಿಗಳ ಎಲ್ಲಾ ವಾದಗಳನ್ನು ವಿಸ್ತೃತವಾಗಿ ಆಲಿಸಬೇಕಿದೆ. ಹೀಗಾಗಿ, ಮುಂದಿನ ವಿಚಾರಣೆವರೆಗೆ ಮಧ್ಯಂತರ ವ್ಯವಸ್ಥೆ ಮುಂದುವರಿಯಲಿದೆ ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ಮುಂದೂಡಿದೆ.

Also Read
ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದ ಹೈಕೋರ್ಟ್‌

ಇದಕ್ಕೂ ಮುನ್ನ, ಪಾಟೀಲ್‌ ಅವರು “ಉಸ್ತುವಾರಿ ಸ್ವಾಮೀಜಿಯು ಮಠದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮಠದಲ್ಲಿ 20 ಸದಸ್ಯರ ಸಮಿತಿಯು ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಪೀಠಾಧಿಪತಿಯಾಗಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರು ಜನರಲ್‌ ಪವರ್‌ ಆಫ್‌ ಅಟಾರ್ನಿಯನ್ನು ನೀಡಿದ್ದಾರೆ. ಹೀಗಾಗಿ, ಈಗ ಮಾಡಿರುವ ವ್ಯವಸ್ಥೆಯನ್ನು ತೆಗೆಯಬೇಕು ಮತ್ತು ಮಧ್ಯಂತರ ಆದೇಶ ಮಾಡಬಾರದು” ಎಂದು ಕೋರಿದರು.

ಅಲ್ಲದೇ, “ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ರಿಟ್‌ ವ್ಯಾಪ್ತಿ ಮೀರಿದ್ದಾರೆ ಎಂದೂ ನಾವು ಮೇಲ್ಮನವಿ ಸಲ್ಲಿಸಿದ್ದೇವೆ. ಸಮುದಾಯದ ಪ್ರಮುಖರನ್ನು ಮಠದ ಚಟುವಟಿಕೆ ನಡೆಸಲು ಬಿಟ್ಟರೆ ಚಿತ್ರದುರ್ಗದಲ್ಲಿ ಪ್ರತಿಯೊಬ್ಬರು ತಾವು ಪ್ರಮುಖರು ಎಂದು ಹೇಳಿಕೊಳ್ಳಬಹುದು. ಯಾರು ಮುಖ್ಯರು ಮತ್ತು ಯಾರು ಮುಖ್ಯರಲ್ಲ ಎಂಬುದನ್ನು ಯಾರು ನಿರ್ಧರಿಸುತ್ತಾರೆ. ಪ್ರಮುಖರು ಎನಿಸಿಕೊಳ್ಳುವವರು ಹಿಂದಿನ ಬಾಗಿಲಿನಿಂದ ಪ್ರವೇಶಿಸಬಹುದು” ಎಂದು ಆಕ್ಷೇಪಿಸಿದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು "ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಆದೇಶವನ್ನು ಹಿಂಪಡೆಯಲಾಗಿದೆ" ಎಂದು ಪೀಠಕ್ಕೆ ವಿವರಿಸಿದರು. ಈ ವಿಚಾರವನ್ನು ಪ್ರಸ್ತಾಪಿಸಿದ ಹಿರಿಯ ವಕೀಲರಾದ ಜಯಕುಮಾರ್‌ ಪಾಟೀಲ್‌ ಮತ್ತು ಉದಯ್‌ ಹೊಳ್ಳ ಅವರು "ರಾಜ್ಯ ಸರ್ಕಾರವೇ ಆಡಳಿತಾಧಿಕಾರಿ ನೇಮಕ ಮಾಡಿರುವಾಗ ಮೇಲ್ಮನವಿದಾರರ ಅರ್ಜಿಗೆ ಯಾವುದೇ ಮಾನ್ಯತೆ ಇಲ್ಲ" ಎಂದು ವಾದಿಸಲು ಮುಂದಾದರು. ಈ ವಾದವನ್ನು ಒಪ್ಪದ ಪೀಠವು ಎಲ್ಲಾ ವಿಚಾರಗಳ ಕುರಿತು ವಿಸ್ತೃತವಾಗಿ ಆಲಿಸಬೇಕಿದೆ ಎಂದು ಹೇಳಿ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com